Site icon Vistara News

Border dispute | ಮತ್ತೆ ಎಂಇಎಸ್‌ ಪುಂಡಾಟ: ಕನ್ನಡ ನೆಲದಲ್ಲಿ ನಾಡದ್ರೋಹಿ ಘೋಷಣೆ, ಮುಖಂಡರ ಬಂಧನ

Belagavi MES protest

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದ (Border dispute) ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲು ಇನ್ನೂ ಬಾಕಿ ಇರುವಂತೆಯೇ ಎರಡು ರಾಜ್ಯಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದರ ನಡುವೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರು ಮಂಗಳವಾರ ಮತ್ತೆ ಕನ್ನಡ ನೆಲದಲ್ಲಿ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಉದ್ಧಟತನ ಮೆರೆದಿದ್ದಾರೆ.

ಡಿಸೆಂಬರ್‌ ೬ರಂದು ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಬರುವ ಕಾರ್ಯಕ್ರಮ ಫಿಕ್ಸ್‌ ಆಗಿತ್ತು. ಆದರೆ, ರಾಜ್ಯ ಸರಕಾರ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಒಂದೊಮ್ಮೆ ಬಂದರೆ ಗಡಿಯಲ್ಲೇ ತಡೆಯುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದರಿಂದ ಬೆದರಿದ ಸಚಿವರು ಭೇಟಿಯನ್ನು ಮುಂದೂಡಿದ್ದರು. ಇದು ಎಂಇಎಸ್‌ ನಾಯಕರನ್ನು ಕೆರಳಿಸಿತ್ತು.

ಕರ್ನಾಟಕ ವಿರೋಧಿ ಘೋಷಣೆ ಕೂಗಿದ ಎಂಇಎಸ್‌ ಪುಂಡರನ್ನು ಬಂಧಿಸಲಾಯಿತು.

ಹೀಗಾಗಿ ಹೇಗಾದರೂ ಮಾಡಿ ಬೆಳಗಾವಿಯಲ್ಲಿ ಉದ್ವಿಗ್ನತೆ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಅವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಮತ್ತು ನಾಡದ್ರೋಹಿ ಘೋಷಣೆಗಳನ್ನು ಕೂಗಿದರು.

ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಬಂದಿದ್ದ ಎಂಇಎಸ್ ಮುಖಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ ಬಾಲ್ಕಿ ಸಂಯಕ್ತ ಮಹಾರಾಷ್ಟ್ರದ ಭಾಗ ಎಂದು ಘೋಷಣೆಗಳನ್ನು ಕೂಗಿದರು.

ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಮೆರೆಯಲು ಮುಂದಾದ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದರು. ಮಾರ್ಕೆಟ್ ಠಾಣೆ ಪೊಲೀಸರು ಅವರನ್ನು ಬಸ್ಸಿಗೆ ತುಂಬಿ ಕರೆದುಕೊಂಡು ಹೋದರು.

ನಿಜವೆಂದರೆ, ಮಂಗಳವಾರ ಸಂಜೆ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬಹಿರಂಗ ಸಭೆ ಆಯೋಜಿಸಲಾಗಿತ್ತು. ಆದರೆ, ಇದರಿಂದ ಉದ್ವಿಗ್ನತೆ ಹೆಚ್ಚಬಹುದು ಎಂಬ ಕಾರಣಕ್ಕಾಗಿ ಕರವೇಗೆ ಸಭೆ ನಡೆಸಲು ಅವಕಾಶ ನಿರಾಕರಿಸಲಾಯಿತು. ಜತೆಗೆ ಕರವೇ ಮುಖಂಡ ನಾರಾಯಣ ಗೌಡ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಯಿತು. ಈ ನಡುವೆ ನಿರೀಕ್ಷೆಯಂತೆ ಎಂಇಎಸ್‌ ಪುಂಡರು ಕಾಲು ಕೆರೆದು ಜಗಳಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ | Border dispute | ಕರವೇ ನಾರಾಯಣ ಗೌಡ ಬಂಧನ: ಬೆಳಗಾವಿ ಪ್ರವೇಶ ತಡೆಗೆ ರೊಚ್ಚಿಗೆದ್ದ ಕಾರ್ಯಕರ್ತರು, ಮಹಾರಾಷ್ಟ್ರದ ಲಾರಿಗಳ ಮೇಲೆ ದಾಳಿ

Exit mobile version