Site icon Vistara News

Border Dispute | ಶರದ್‌ ಪವಾರ್‌ರನ್ನೂ ಸಂಪರ್ಕಿಸಿದ್ದ ನಾಡದ್ರೋಹಿ ಎಂಇಎಸ್‌ನಿಂದ ಇಲ್ಲಸಲ್ಲದ ದೂರು!

Sharad Pawar

ಬೆಳಗಾವಿ: ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಹಾಗೂ ಎನ್‌ಸಿಪಿಗೆ ಗಡಿ ವಿವಾದವೇ (Border Dispute) ರಾಜಕೀಯ ಅಸ್ತ್ರವಾಗಿದೆ. ಈ ನಿಟ್ಟಿನಲ್ಲಿ ಒಂದಿಲ್ಲೊಂದು ಕ್ಯಾತೆ ತಗೆಯುತ್ತಲೇ ಇವೆ. ಒಮ್ಮೆ ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ವಕ್ರ ದೃಷ್ಟಿ ಬಿದ್ದರೆ, ಮತ್ತೊಮ್ಮೆ ಅಲ್ಲಿನ ವಿರೋಧ ಪಕ್ಷ ಎನ್‌ಸಿಪಿ ಗಡಿ ತಂಟೆಗೆ ಬರಲಿದೆ. ಇವೆಲ್ಲವಕ್ಕೂ ಕರ್ನಾಟಕದಿಂದ ಇಲ್ಲಸಲ್ಲದ ದೂರಿನ ತುತ್ತೂರಿ ಊದುತ್ತಿರುವುದು ನಾಡದ್ರೋಹಿ ಎಂಇಎಸ್‌ ಎಂಬ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದಿರುವುದೇ ಇದಕ್ಕೆ ತಾಜಾ ನಿದರ್ಶನವಾಗಿದೆ.

ಪವಾರ್‌ ಬಳಿ ಎಂಇಸ್‌ ನೀಡಿರುವ ದೂರೇನು?
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಸಂಪರ್ಕಿಸಿದ್ದ ಬೆಳಗಾವಿಯ ಎಂಇಎಸ್ ನಾಯಕರು ಹಲವಾರು ದೂರುಗಳನ್ನು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ವತಃ ಶರದ್‌ ಪವಾರ್‌ ಉಲ್ಲೇಖಿಸಿದ್ದಾರೆ. ಎಂಇಎಸ್‌ ಹೇಳಿರುವ ದೂರಿನ ಸರಮಾಲೆಯ ಪಟ್ಟಿ ಇಲ್ಲಿದೆ.

೧. ಬೆಳಗಾವಿಯ ಎಂಇಎಸ್ ಕಚೇರಿ ಎದುರು ಪೊಲೀಸರು ಗಸ್ತು ತಿರುಗುತ್ತಿದ್ದಾರೆ
೨. ಎಂಇಎಸ್‌ ಪ್ರಮುಖ ಪದಾಧಿಕಾರಿಗಳನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ
೩. ಎಂಇಎಸ್‌ ಕಚೇರಿಗೆ ಭೇಟಿ ನೀಡುತ್ತಿರುವವರ ಮೇಲೆ ಪೊಲೀಸರು ನಿಗಾ ವಹಿಸುತ್ತಿದ್ದಾರೆ
೪. ಮಹಾರಾಷ್ಟ್ರಗಳಿಂದ ಬರುವ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿದೆ
೫. ಯಾವುದೇ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಹೋದರೆ ಸ್ವೀಕರಿಸುತ್ತಿಲ್ಲ
೬. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರದ ದೌರ್ಜನ್ಯ ಮಿತಿ ಮೀರಿದೆ
೭. ಕರ್ನಾಟಕದಲ್ಲಿರುವ ಮರಾಠಿ ಭಾಷಿಗರು ಭಯಭೀತರಾಗಿದ್ದಾರೆ
೮. ಡಿಸೆಂಬರ್ 19ರಿಂದ ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಇದಕ್ಕೂ ಮುನ್ನವೇ ನಮ್ಮವರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ
೯. ಈ ಎಲ್ಲ ಕಾರಣದಿಂದ ಮಹಾರಾಷ್ಟ್ರದಿಂದ ನೀವು ಯಾರಾದರೂ ನಾಯಕರು ಕರ್ನಾಟಕಕ್ಕೆ ಬಂದು ನಮಗೆ ಧೈರ್ಯ ತುಂಬಿ

ಇದನ್ನೂ ಓದಿ | Border Dispute | ಮಹಾರಾಷ್ಟ್ರ ವಾಹನಗಳ ಮೇಲೆ ಕಲ್ಲು ತೂರಾಟ; ಕರವೇ 12 ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌

ಈ ರೀತಿಯಾಗಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರಿಗೆ ಎಂಇಎಸ್‌ನವರು ಫೋನ್ ಹಾಗೂ ಪತ್ರ ಮುಖೇನ ಮಾಹಿತಿ ನೀಡಿದ್ದಾರೆ ಎಂಬ ವಿಷಯ ಈಗ ಗೊತ್ತಾಗಿದೆ.

ಪವಾರ್‌ ಕೊಟ್ಟಿರುವ ಎಚ್ಚರಿಕೆ
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಬಳಿ ಕರವೇ ಪ್ರತಿಭಟನೆ ವೇಳೆ ಮಹಾರಾಷ್ಟ್ರ ವಾಹನಗಳ ಮೇಲೆ ದಾಳಿ ನಡೆದಿದೆ. ಈ ಎಲ್ಲ ಸಮಸ್ಯೆಗಳು 24 ತಾಸಿನಲ್ಲಿ ನಿಲ್ಲಬೇಕು. ಇಲ್ಲದಿದ್ದರೆ ನಾನೇ ಬೆಳಗಾವಿಗೆ ಬರುತ್ತೇನೆ ಎಂದು ಶರದ್ ಪವಾರ್ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಲೋಕಸಭೆ ಅಧಿವೇಶನಕ್ಕೂ ಮುನ್ನ ಮಹಾರಾಷ್ಟ್ರದ ಸಂಸದರೆಲ್ಲರೂ ಸೇರಿ ಒಮ್ಮತದ ನಿರ್ಣಯ ಕೈಗೊಳ್ಳಬೇಕು. ಕರ್ನಾಟಕ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವರಿಗೆ ದೂರು ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

೨೫೦ ಸರ್ಕಾರಿ ಬಸ್‌ ಸ್ಥಗಿತ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಮಹಾರಾಷ್ಟ್ರ ನವನಿರ್ಮಾ‌ಣ ಸೇನೆ ಪುಂಡಾಟಿಕೆ ನಡೆಸುತ್ತಿದೆ. ಈ ಕಾರಣದಿಂದಾಗಿ ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ 250 ಸರ್ಕಾರಿ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಚಿಕ್ಕೋಡಿ ವಿಭಾಗಾಧಿಕಾರಿ ಶಶಿಧರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೊಲ್ಲಾಪುರ, ಮೀರಜ್ ಗಡಿ ಬಳಿ ಕರ್ನಾಟಕದ ೨೫೦ ಬಸ್‌ಗಳನ್ನು ನಿಲುಗಡೆ ಮಾಡಲಾಗಿದೆ.

ಇದನ್ನೂ ಓದಿ | Poachgate | ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣದಲ್ಲಿ ಬಿ.ಎಲ್. ಸಂತೋಷ್ ಹೆಸರಿಸುವಂತಿಲ್ಲ! ಎಸ್ಐಟಿಗೆ ಹಿನ್ನಡೆ

Exit mobile version