Site icon Vistara News

Border Dispute | ಬೆಳಗಾವಿಗೆ ಬನ್ನಿ ಎಂದು ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಿಗೆ ಪತ್ರ ಬರೆದ MES; ಉದ್ದಟತನ ಪ್ರದರ್ಶನ

ಬೆಳಗಾವಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದವು (Border Dispute) ದಿನೇ ದಿನೆ ಉಗ್ರ ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರೆ, ಅಲ್ಲಿನ ಗಡಿಯಲ್ಲಿರುವ ಕೆಲವು ತಾಲೂಕಿನವರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ನಾಡದ್ರೋಹಿ ಎಂಇಎಸ್ ಉದ್ದಟತನವನ್ನು ಪ್ರದರ್ಶನ ಮಾಡಿದ್ದು, ಬೆಳಗಾವಿಗೆ ಆಗಮಿಸುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವದ್ವಯರಿಗೆ ಪತ್ರ ಬರೆದಿದೆ.

ಈ ಮೂಲಕ ಗಡಿ ವಿಚಾರದಲ್ಲಿ ಎಂಇಎಸ್ ಮತ್ತೆ ಕ್ಯಾತೆ ತೆಗೆದಿದ್ದು, ರಾಜ್ಯದ ಕನ್ನಡಿಗರು, ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರಾಗಿ ಅಲ್ಲಿನ ಸರ್ಕಾರ ನೇಮಕ ಮಾಡಿರುವ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿಗೆ ಪತ್ರ ಬರೆದಿರುವ ಎಂಇಎಸ್‌ ಬೆಳಗಾವಿಗೆ ಆಗಮಿಸುವಂತೆ ಮನವಿ ಮಾಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಹಂತದಲ್ಲಿದೆ. ಈ ವೇಳೆ ಮಹಾರಾಷ್ಟ್ರ ಸರ್ಕಾರವು ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ತನ್ನ ಇಬ್ಬರು ಸಚಿವರನ್ನು ಸಮನ್ವಯ ಸಚಿವರನ್ನಾಗಿ ನೇಮಿಸಿ ಆದೇಶವನ್ನು ಹೊರಡಿಸಿತ್ತು.

ಈಗ ಅಲ್ಲಿನ ಸಚಿವರಿಗೆ ಪತ್ರ ಬರೆದಿರುವ ಎಂಇಎಸ್‌, ಗಡಿ ವಿವಾದ ಮಾತ್ರವಲ್ಲದೆ, ಇತರ ಸಮಸ್ಯೆಗಳ ಬಗ್ಗೆ ತಮ್ಮ ಕಾರ್ಯಕರ್ತರ ಜತೆ ಚರ್ಚಿಸುವ ಅಗತ್ಯವಿದೆ. ಹೀಗಾಗಿ ಬೆಳಗಾವಿಗೆ ಇಬ್ಬರು ಸಚಿವರು ಆಗಮಿಸಿ ಚರ್ಚಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Border Dispute | ಲಾಥೂರ್‌, ಸೊಲ್ಲಾಪುರ, ಕೊಲ್ಹಾಪುರವನ್ನೂ ಕರ್ನಾಟಕಕ್ಕೆ ಸೇರಿಸಿ: ಕನ್ನಡಪರ ಸಂಘಟನೆಗಳ ಪ್ರತಿಭಟನೆ

Exit mobile version