Site icon Vistara News

Border Dispute | ಸಂಸತ್ತಿನಲ್ಲಿ ಕರ್ನಾಟಕದ ವಿರುದ್ಧ ಹರಿಹಾಯ್ದ ಸುಳೆ! ಶಾ ಮಧ್ಯಪ್ರವೇಶಕ್ಕೆ ಆಗ್ರಹ

Supriya Sule @ Session

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಸದ್ದು ಮಾಡುತ್ತಿದೆ. ಬುಧವಾರ ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಜಟಾಪಟಿ ನಡೆಯಿತು. ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಸಂಸದೆ ಸುಪ್ರಿಯಾ ಸುಳೆ ಅವರು ವಿಷಯವನ್ನು ಪ್ರಸ್ತಾಪಿಸಿ, ಕರ್ನಾಟಕದ ಗಡಿಯಲ್ಲಿ ಮಹಾರಾಷ್ಟ್ರ ನೋಂದಣಿ ವಾಹನಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರವೇಶಿಸಿ, ಹೇಳಿಕೆ ನೀಡಬೇಕೆಂದು ಒತ್ತಾಯಿಸಿದರು.

ಕಳೆದ 10 ದಿನಗಳಿಂದ ಮಹಾರಾಷ್ಟ್ರದಲ್ಲಿ ಹೊಸ ಸಮಸ್ಯೆಯನ್ನು ಹುಟ್ಟುಹಾಕಲಾಗಿದೆ. ನಮ್ಮ ನೆರೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು ಅರ್ಥವಿಲ್ಲದ ಮಾತುಗಳನ್ನಾಡುತ್ತಿದ್ದಾರೆ. ನಿನ್ನೆ ಮಹಾರಾಷ್ಟ್ರದ ಜನರು ಕರ್ನಾಟಕದ ಗಡಿಗೆ ಹೋಗಲು ನಿರ್ಧರಿಸಿದ್ದರು. ಆದರೆ, ಅವರ ಮೇಲೆ ಹಲ್ಲೆ ಮಾಡಲಾಗಿದೆ. ಮಹಾರಾಷ್ಟ್ರವನ್ನು ವಿಭಜಿಸುವ ಮಾತುಗಳನ್ನು ಕರ್ನಾಟಕದ ಸಿಎಂ ಆಡುತ್ತಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನಿನ್ನೆ ಕೂಡ ಮಹಾರಾಷ್ಟ್ರ ಮಂದಿಯನ್ನು ಥಳಿಸಲಾಗಿದೆ ಎಂದು ಸುಪ್ರಿಯಾ ಸುಳೆ ಆರೋಪಿಸಿದರು.

ಸುಪ್ರಿಯಾ ಸುಳೆಗೆ ಎದಿರೇಟು ನೀಡಿದ ಕರ್ನಾಟಕದ ಬಿಜೆಪಿಯ ಸಂಸದ ಶಿವಕುಮಾರ್ ಉದಾಸಿ ಅವರು, ಮಹಾರಾಷ್ಟ್ರದ ಪ್ರತಿಪಕ್ಷದ ರಾಜಕಾರಣಿಗಳಿಗೆ ಜಗಳ ಮಾಡುವುದೇ ಕೆಲಸವಾಗಿದೆ. ಅವರಿಗೆ ಅಭದ್ರತೆ ಕಾಡುತ್ತಲೇ ಇರುತ್ತದೆ. ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಪ್ರತಿಪಕ್ಷಗಳಿಗೆ ಈ ಬಗ್ಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.

ಶಿವಸೇನೆ(ಉದ್ಧವ್ ಠಾಕ್ರೆ) ಸಂಸದ ವಿನಾಯಕ್ ರಾವತ್ ಮಾತನಾಡಿ, ಮರಾಠಿ ಜನರ ವಿರುದ್ಧ ಕರ್ನಾಟಕ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಸಚಿವರು ಗಡಿಗೆ ಹೋಗುವುದನ್ನು ತಡೆಯುತ್ತಿದ್ದಾರೆ. ಇದು ಅನ್ಯಾಯ. ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | Border dispute |‌ ಗಡಿ ವಿವಾದವನ್ನು ಅನಗತ್ಯವಾಗಿ ಉದ್ರೇಕಿಸಿದರೆ ಅಪಾಯ: ಫಡ್ನವಿಸ್‌ಗೆ ಬುದ್ಧಿವಾದ ಹೇಳಿದ ಬೊಮ್ಮಾಯಿ

Exit mobile version