ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ (Border Dispute) ಸಂಬಂಧಪಟ್ಟಂತೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅದು ಎಂಇಎಸ್ ಇರಬಹುದು ಅಥವಾ ಇನ್ಯಾವುದೋ ಎಸ್ ಪುಂಡರೇ ಇರಬಹುದು, ಅವರು ತರ್ಲೆ ಮಾಡಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 3ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವದ್ವಯರು ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕೆಲವೊಮ್ಮೆ ಸ್ವತಂತ್ರವಾಗಿ ಬೇರೆ ಬೇರೆ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸುತ್ತಾರೆ. ಯಾರದ್ದೋ ಜತೆಯಲ್ಲಿ ಸಮಾಲೋಚನೆ ಮಾಡುವುದಕ್ಕೋ, ಯಾರ ಮನೆಯಲ್ಲೋ ಊಟ ಮಾಡುವುದಕ್ಕೋ, ಯಾರದ್ದೋ ಮದುವೆಗೋ ಬಂದರೆ ನಾವೇನೂ ಮಾಡುವುದಿಲ್ಲ. ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನ ಮಾಡಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುವಂತೆ ಪತ್ರ ಬರೆದಿದ್ದ ಎಂಇಎಸ್, ಗಡಿ ವಿವಾದಗಳ ಜತೆಗೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅಲೋಕ್ ಕುಮಾರ್, ಎಂಇಎಸ್ ಪುಂಡರೇ ಇರಲಿ ಯಾವುದೇ ಎಸ್ ಪುಂಡರೇ ಇರಲಿ, ತರ್ಲೆ ಮಾಡಿದರೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | Border Dispute | ಮಹಾರಾಷ್ಟ್ರದ ಸಿದ್ಧನಾಥದಲ್ಲಿ ಮೊಳಗಿತು ಕನ್ನಡದ ಕಹಳೆ; ಗ್ರಾಪಂನಲ್ಲಿ ಕರ್ನಾಟಕಕ್ಕೆ ಸೇರುವ ಠರಾವು ಪಾಸ್