Site icon Vistara News

Karnataka CM: ಒಂದೇ ವಿಮಾನದಲ್ಲಿ ದಿಲ್ಲಿಗೆ ತೆರಳಿದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌

Both Siddaramaiah and DK Shivakumar travelling in single copter

Both Siddaramaiah and DK Shivakumar travelling in single copter

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ನಿಯೋಜಿತರಾಗಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿಯಾಗಲಿರುವ (Deputy Chief Minister) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಶುಕ್ರವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಒಂದೇ ವಿಮಾನದಲ್ಲಿ ದಿಲ್ಲಿಗೆ ತೆರಳಿದರು.

ಇವರಿಬ್ಬರೂ ಶನಿವಾರ (ಮೇ 20) ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಸಿಎಂ ಮತ್ತು ಡಿಸಿಎಂ ಆಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಸುಮಾರು 28 ಮಂದಿ ಸಚಿವರು ಕೂಡಾ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಚರ್ಚೆ ದಿಲ್ಲಿಯಲ್ಲಿ ನಡೆದು ಪಟ್ಟಿ ಫೈನಲ್‌ ಆಗಲಿದೆ.

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಸಮಾಲೋಚನೆ ನಡೆಸಿ ಪಟ್ಟಿಯನ್ನು ಫೈನಲ್‌ ಮಾಡಲಿದ್ದಾರೆ. ಮೂರೂ ಜನ ಮೂರು ಪಟ್ಟಿಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದ್ದು, ಅದರಲ್ಲಿ ಜಾತಿ, ಪ್ರಭಾವ, ಸಾಮರ್ಥ್ಯ ಮತ್ತು ಇತರ ಹಲವು ಮಾನದಂಡಗಳನ್ನು ಗಮನಿಸಿ ಆಯ್ಕೆ ನಡೆಯಲಿದೆ.

ಒಂದೇ ವಿಮಾನದಲ್ಲಿ ಪಯಣ

ಚುನಾವಣೆಯ ಫಲಿತಾಂಶ ಬಂದ ಬಳಿಕ ಸಿಎಂ ಆಯ್ಕೆಯ ಅಬ್ಬರ ಜೋರಾಗಿದ್ದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಪರಸ್ಪರ ಮುಖ ನೋಡುವ ಮೂಡ್‌ನಲ್ಲಿ ಇರಲಿಲ್ಲ. ಆದರೆ, ಯಾವಾಗ ಪರಿಸ್ಥಿತಿ ತಿಳಿಯಾಗಿ ಸಂಧಾನ ಸೂತ್ರ ಜಾರಿಗೆ ಬಂದಿತೋ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರ ಮನೆಯಲ್ಲಿ ಅವರಿಬ್ಬರೂ ಮುಖಾಮುಖಿಯಾದರು. ಎದುರುಬದುರು ಕುಳಿತುಕೊಂಡೇ ಉಪಾಹಾರ ಸೇವಿಸಿದ ಈ ನಾಯಕರಿಬ್ಬರು ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಹೋಗಬೇಕಾಗಿತ್ತು. ಇಬ್ಬರೂ ಪ್ರತ್ಯೇಕ ವಾಹನಗಳಲ್ಲಿ ಹೋಗಲು ಪ್ಲ್ಯಾನ್‌ ಆಗಿತ್ತಾದರೂ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಅವರಿಬ್ಬರನ್ನು ಒಂದೇ ಕಾರಿನಲ್ಲಿ ಕಳುಹಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಎಲ್ಲ ಹಮ್ಮು ಬಿಮ್ಮುಗಳನ್ನು ಬಿಟ್ಟು ಹಿಂದಿನಂತೆಯೇ ಜೋಡೆತ್ತುಗಳಾದ ಅವರಿಬ್ಬರು ದಿಲ್ಲಿಯಿಂದ ಬೆಂಗಳೂರಿಗೆ ಬರಲು ಪ್ಲ್ಯಾನ್‌ ಆಗಿದ್ದ ಪ್ರತ್ಯೇಕ ಪಯಣವನ್ನು ರದ್ದುಪಡಿಸಿ ಒಂದೇ ವಿಮಾನದಲ್ಲಿ ಪ್ರಯಾಣಿಸಿದರು. ಈ ಮೂಲಕ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಜಗತ್ತಿಗೆ ಸಾರಿ ಹೇಳಲು ಯತ್ನಿಸಿದರು. ಅವರಿಬ್ಬರನ್ನು ಒಂದೇ ಸೂತ್ರದಲ್ಲಿ ಕಟ್ಟಿ ಹಾಕಿದ ರಣದೀಪ್‌ ಸುರ್ಜೇವಾಲ ಅವರು ಕೂಡಾ ಅದೇ ವಿಮಾನದಲ್ಲಿ ಬಂದರು.

ಗುರುವಾರ ಸಂಜೆ ವಿಶೇಷ ವಿಮಾನದಲ್ಲಿ ಬೆಂಗಳೂರು ತಲುಪಿದ ಇಬ್ಬರೂ ನಾಯಕರು ಬಳಿಕ ಪ್ರತ್ಯೇಕ ಕಾರಿನಲ್ಲಿ ತಮ್ಮ ಮನೆಗೆ ಹೋಗಿದ್ದರು. ಶುಕ್ರವಾರ ಮುಂಜಾನೆಯೂ ದಿಲ್ಲಿಗೆ ಹೋಗಬೇಕು ಎಂದಾದಾಗ ಒಂದೇ ವಿಮಾನದಲ್ಲಿ ಅವರು ಪ್ರಯಾಣಿಸಿರುವುದು ಕಾಂಗ್ರೆಸ್‌ ಪಕ್ಷದ ಮಟ್ಟಿಗೆ ಶುಭ ಸೂಚನೆಯಾಗಿದೆ.

ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ ಲಕ್ಷಾಂತರ ಮಂದಿ ನಿರೀಕ್ಷೆ, ಕಂಠೀರವ ಸ್ಟುಡಿಯೋ ಸುತ್ತ ಬಿಗಿ ಭದ್ರತೆ

Exit mobile version