ತುಮಕೂರು: ಕಣ್ಣೆದುರೇ ನೀರುಪಾಲಾಗುತ್ತಿದ್ದ ಬಾಲಕನೊಬ್ಬನನ್ನು ಹೇಗಾದರೂ ಮಾಡಿ ರಕ್ಷಿಸಲೇಬೇಕು ಎಂದು ಹಠ ತೊಟ್ಟು ಕೆರೆಗೆ ಹಾರಿದ ವ್ಯಕ್ತಿಯೂ ಪ್ರಾಣ ಕಳೆದುಕೊಂಡ ದುರಂತ ಘಟನೆ (Drowned in Pond) ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿಯಲ್ಲಿ ನಡೆದಿದೆ.
ಇಲ್ಲಿನ ದೊಡ್ಡಕೆರೆಯಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗೇಳುತ್ತಿದ್ದ ನಿತಿನ್ ಎಂಬ ೧೧ ವರ್ಷದ ಬಾಲಕನನ್ನು ರಕ್ಷಿಸಲು ಹೋದ ಕೃಷ್ಣಪ್ಪ (೪೫) ಅವರೂ ಪ್ರಾಣ ಕಳೆದುಕೊಂಡಿದ್ದಾರೆ.
ಭಾನುವಾರ ಸಂಜೆ ನಿತಿನ್ ತನ್ನ ಗೆಳೆಯರ ಜತೆ ಸೇರಿ ತುಂಬಾಡಿ ದೊಡ್ಡ ಕೆರೆಯಲ್ಲಿ ಈಜಾಡಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಆಳಕ್ಕೆ ಹೋದ ನಿತಿನ್ ಮೇಲೆ ಬರಲಾಗದೆ, ಈಜೂ ಬಾರದೆ ಒದ್ದಾಡುತ್ತಿದ್ದ. ಇದನ್ನು ಗಮನಿಸಿದ್ದ ದಡದಲ್ಲಿದ್ದ ಕೃಷ್ಣಪ್ಪ ಅವರು ಹುಡುಗನನ್ನು ರಕ್ಷಿಸಲೆಂದು ನೀರಿಗೆ ಹಾರಿದರು. ಆದರೆ, ನಿತಿನ್ ಕೂಡಾ ಬದುಕಲಿಲ್ಲ, ಕಾಪಾಡಲೆಂದು ಹಾರಿದ ಕೃಷ್ಣಪ್ಪ ಅವರೂ ಉಸಿರು ಕಳೆದುಕೊಂಡರು.
ಘಟನೆ ಸಂಬಂಧ ಸ್ಥಳೀಯರು ಕೊರಟಗೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Youths drowned | ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಾರು ತೊಳೆಯಲು ಹೋದ ಇಬ್ಬರು ಯುವಕರು ನೀರುಪಾಲು