ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ (Contaminated Water) ಸಾವು-ನೋವುಗಳು ಹೆಚ್ಚುತ್ತಿವೆ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಕಲುಷಿತ ನೀರು ಸೇವಿಸಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. 30ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೇಕಲಮರಡಿ ಗ್ರಾಮದಲ್ಲಿ ಕಲುಷಿತಗೊಂಡ ನೀರು ಸೇವಿಸಿದ್ದರಿಂದ ವಾಂತಿ-ಭೇದಿ ಉಲ್ಬಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿರವಾರ ಸರ್ಕಾರಿ ಆಸ್ಪತ್ರೆಯ ಸೇರಿದ್ದ ಹನುಮೇಶ್ (5) ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಇನ್ನು ಹನುಮೇಶ್‌ನ ಅಕ್ಕ ನರಸಮ್ಮ (8) ಕೂಡ ಅಸ್ವಸ್ಥಗೊಂಡಿದ್ದಾಳೆ. ನರಸಮ್ಮಳನ್ನು ಮೊದಲು ಸಿರವಾರ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಅಸ್ವಸ್ಥಗೊಂಡಿದ್ದರಿಂದ ನರಸಮ್ಮಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೋಷಕರು ಪ್ಲಾಸ್ಟಿಕ್ ಕವರ್‌ನಲ್ಲಿ ಎಳನೀರು ತಂದಿದ್ದು, ಕುಡಿಯಲು ಆಗದ ಸ್ಥಿತಿಯಲ್ಲಿ ಬಾಲಕಿ ಇದ್ದಾಳೆ.
ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡಿದ್ದಾರೆ. ಅರಕೇರ, ಸಿರವಾರ, ದೇವದುರ್ಗ, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯತಿ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Contaminated Water : ಕಲುಷಿತ ನೀರಿನ ಸೇವನೆಯಿಂದ 27 ಜನರಿಗೆ ವಾಂತಿ ಭೇದಿ; ಬಳ್ಳಾರಿಯ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ
ಸದ್ಯ ರೇಕಲಮರಡಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ಗ್ರಾಮಸ್ಥರು ಅಸ್ವಸ್ಥಗೊಳ್ಳುತ್ತಿದ್ದಾರೆ. ಸದ್ಯ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ