Site icon Vistara News

Boy Drowned: ಬೆಂಗಳೂರಿನ ಜೆ.ಪಿ.ಪಾರ್ಕ್‌ನಲ್ಲಿ ಆಟ ಆಡುವಾಗ ಕೆರೆಗೆ ಬಿದ್ದು ಬಾಲಕ ಸಾವು

Boy dies after falling into lake while playing in JP Park at bengaluru

ಬೆಂಗಳೂರು: ಮತ್ತಿಕೆರೆ ಸಮೀಪದ ಜೆ.ಪಿ.ಪಾರ್ಕ್‌ನಲ್ಲಿ ಆಟವಾಡುವ ವೇಳೆ ಆಯತಪ್ಪಿ ಕೆರೆಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಸಂಜಯ್ (13) ಮೃತ ಬಾಲಕ. ಕೆರೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಬಾಲಕ ಆಯತಪ್ಪಿ ನೀರಿಗೆ ಬಿದ್ದಿದ್ದು, ಈಜು ಬಾರದ ಹಿನ್ನೆಲೆಯಲ್ಲಿ ಮುಳುಗಿ (Boy Drowned) ಸಾವಿಗೀಡಾಗಿದ್ದಾನೆ.

ಜೆ.ಪಿ. ಪಾರ್ಕ್ ಸಮೀಪದ ಮೋಹನ್ ಕುಮಾರ್ ಲೇಔಟ್ ನಿವಾಸಿಯಾದ ಬಾಲಕ ಸಂಜಯ್ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರ ಸಂಜೆ ಜೆ.ಪಿ. ಪಾರ್ಕ್‌ ಕೆರೆ ಸಮೀಪ ಆಟವಾಡುತ್ತಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶವದ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ | Road Accident in Bengaluru: ಅಪಘಾತಗಳ ನಗರಿ ಎಂಬ ಕುಖ್ಯಾತಿಗೆ ರಾಜಧಾನಿ ಗುರಿ; 3 ತಿಂಗಳಲ್ಲಿ 200ಕ್ಕೂ ಹೆಚ್ಚು ಮಂದಿ ಬಲಿ

ಕಾರು ಪಲ್ಟಿಯಾಗಿ ಮೂವರಿಗೆ ಗಂಭೀರ ಗಾಯ

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್‌ನ ಥಳಿ ರಸ್ತೆಯ ಶನಿ ಮಹಾತ್ಮ ಸ್ವಾಮಿ ದೇವಾಲಯದ ಬಳಿ ಕಾರು ಪಲ್ಟಿಯಾಗಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಮುತ್ಯಾಲಮಡು ಪ್ರವಾಸಿ ತಾಣಕ್ಕೆ ತೆರಳಿ ಪ್ರವಾಸಿಗರು ವಾಪಸ್ ಆಗುವಾಗ ಅಪಘಾತ ನಡೆದಿದೆ. ತಿರುವಿನಲ್ಲಿ ಅತಿವೇಗವಾಗಿ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಹೀಗಾಗಿ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಹಾಗೂ ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ಸವಾರ ಸಾವು

ಕೋಲಾರ: ಲಾರಿ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ‌ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಕ್ರಾಸ್‌ನಲ್ಲಿ ನಡೆದಿದೆ. ತೆಲಂಗಾಣದ ಬೇಗಂಪೇಟೆ ಮೂಲದ ಪ್ರಸಾದ್ (25) ಮೃತ ವ್ಯಕ್ತಿ. ಈತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದ. ಭಾನುವಾರ ಬೈಕ್‌ನಲ್ಲಿ ಬೆಂಗಳೂರಿಗೆ ಆಗಮಿಸುವಾಗ ಅಪಘಾತ ನಡೆದಿದೆ. ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತ ದೇಹವನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟವಾಡುತ್ತಾ ಕೆರೆ ಬಳಿ ಹೋದ ಅಣ್ಣ-ತಂಗಿ; ನೀರಲ್ಲಿ ಮುಳುಗಿ ಸಾವು

ಬೆಂ.ಗ್ರಾಮಾಂತರ: ತಮಿಳುನಾಡಿನ ಕೃಷ್ಣಗಿರಿಯ ಬೋಚಂಪಳ್ಳಿ ಸಮೀಪದ ಮತ್ತೂರು ಬಳಿ ಮಕ್ಕಳಿಬ್ಬರು ಕೆರೆಯಲ್ಲಿ ಮುಳುಗಿ (Drowned in river) ಮೃತಪಟ್ಟಿದ್ದಾರೆ. ಭುವನಾ ಹಾಗೂ ವಿಘ್ನೇಶ್ ಮೃತರು.

ಮನೆಗೆ ಸೌದೆ ತರುವ ಸಲುವಾಗಿ ತಾಯಿಯೊಂದಿಗೆ ಭುವನಾ ಹಾಗೂ ವಿಘ್ನೇಶ್‌ ಹೋಗಿದ್ದರು. ಕೆರೆ ಸುತ್ತಮುತ್ತ ಬಿದ್ದಿದ್ದ ಸೌದೆ ತೆಗೆದುಕೊಳ್ಳುವಾಗ ನೀರಿನ ಬಳಿ ಬಂದಿದ್ದರು. ಈ ವೇಳೆ ಕೆರೆಯಲ್ಲಿ ಆಟವಾಡಲು ಅಣ್ಣ, ತಂಗಿ ಹೋಗಿದ್ದು, ನೀರು ಜಾಸ್ತಿ ಇದ್ದ ಕಾರಣ ಹೊರಬರಲು ಆಗದೆ ಮುಳುಗಿ ಮೃತಪಟ್ಟಿದ್ದಾರೆ.

ಇತ್ತ ಮಕ್ಕಳು ಕಾಣದೆ ಇದ್ದಾಗ ಆತಂಕಕೊಂಡ ತಾಯಿ ಸುತ್ತಮುತ್ತಲಿನ ಕಡೆ ಹುಡುಕಾಟ ನಡೆಸಿದಾಗ, ಕೆರೆಯ ಬಳಿ ಮಕ್ಕಳ ಚಪ್ಪಲಿ, ಬಟ್ಟೆ ಇರುವುದನ್ನು ಕಂಡಿದ್ದಾರೆ. ವಿಷಯ ಸ್ಥಳೀಯರಿಗೂ ಗೊತ್ತಾಗಿದ್ದು, ಕೂಡಲೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸುಮಾರು ಮೂರು ಗಂಟೆ ಕಾರ್ಯಾಚರಣೆ ನಡೆಸಿ ಮಕ್ಕಳಿಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ. ಮಕ್ಕಳ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version