Site icon Vistara News

Dengue Fever: ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಆರೋಪ

Charan dies of dengue

ಹಾಸನ: ಡೆಂಗ್ಯೂ ಜ್ವರದಿಂದ ಮೂರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಿಲ್ಲೆ ಅರಸೀಕೆರೆ ‌ತಾಲೂಕು ಬಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಳೆದ ಒಂದು ತಿಂಗಳಿಂದ ಗ್ರಾಮದ ಜನರನ್ನು ಡೆಂಗ್ಯೂ ಜ್ವರ ಕಾಡುತ್ತಿದೆ. ಆದರೆ, ಡೆಂಗ್ಯೂ ಸೋಂಕು (Dengue Fever) ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಾಲಕನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಳನಕೊಪ್ಪಲು ಗ್ರಾಮದ ಚರಣ್ (3) ಮೃತ ಬಾಲಕ. ಈತನ ಪೋಷಕರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದಾರೆ. ಊರಿಗೆ ಬಂದು ಚಿಕ್ಕಮಗಳೂರಿಗೆ ಹೋದ ಬಳಿಕ ಬಾಲಕನಿಗೆ ಜ್ವರ ಬಂದಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಹಾಸನದ ಹಿಮ್ಸ್‌ಗೆ ಪೋಷಕರು ದಾಖಲಿಸಿದ್ದರು. ಜ್ವರ ತೀವ್ರಗೊಂಡಿದ್ದರಿಂದ ಬೆಂಗಳೂರಿಗೆ ಕರೆದೊಯ್ಯುವ ವೇಳೆ ಮಗು ಮೃತಪಟ್ಟಿದೆ.

ಇದನ್ನೂ ಓದಿ | Road Accident : ಬೈಕ್‌ಗೆ ಲಾರಿ ಡಿಕ್ಕಿ; ಸವಾರನ ದೇಹ ಛಿದ್ರ ಛಿದ್ರ

ಡೆಂಗ್ಯೂ ಜ್ವರದಿಂದಲೇ ಮಗು ಮೃತಪಟ್ಟಿದೆ ಎಂದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಗ್ರಾಮದಲ್ಲಿ ಹಲವರು ಜ್ವರದಿಂದ ಬಳಲುತ್ತಿದ್ದು, ಹತ್ತಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ತಿಂಗಳಿಗೂ ಮುನ್ನವೇ ಕ್ರಮ ವಹಿಸುವಂತೆ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಪಿಡಿಒ ಜತೆಗೆ ರಾಜ್ಯ ಕೊಳಚೆ ನಿರ್ಮೂಲನಾ ಮಂಡಿಳಿಗೂ ಗ್ರಾಮಸ್ಥರು ಮನವಿ ಪತ್ರ ಬರೆದಿದ್ದರು.

ಕಾಳನಕೊಪ್ಪಲು ಗ್ರಾಮದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ 8 ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಚರಂಡಿಗಳಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸುವುದು, ರಸ್ತೆಗಳ ಮೇಲೆ ನೀರು ನಿಲ್ಲಂದಂತೆ ಕ್ರಮ ಹಾಗೂ ಸೋಂಕು ನಿವಾರಕ ಔಷಧಿ ಸಿಂಪಡಿಸಿ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಲು ಪಿಡಿಒಗೆ ಗ್ರಾಮಸ್ಥರು ಜುಲೈ 17ರಂದು ಪತ್ರ ಬರೆದು ಮನವಿ ಮಾಡಿದ್ದರು. ಆದರೆ, ಗ್ರಾಮಸ್ಥರ ಮನವಿಗೆ ಗ್ರಾಪಂ ಮತ್ತು ನೈರ್ಮಲ್ಯ ಇಲಾಖೆ ಸ್ಪಂದಿಸಿಲ್ಲ.

ಇದನ್ನೂ ಓದಿ | Assault case : ಯಾವನೋ ಅವನು ಬಾಸ್‌ ಅಂದಿದ್ದಕ್ಕೆ ಲಾಂಗ್‌ನಿಂದ ಹಲ್ಲೆ

ಮಗು ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ಹೊರಹಾಕಿರುವ ಗ್ರಾಮಸ್ಥರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮದಲ್ಲಿ ರೋಗ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version