Site icon Vistara News

Karnataka Election 2023: ಚುನಾವಣೆ ದಿನ ಮತದಾನ ಬಹಿಷ್ಕಾರದ ಕೂಗು; NO Work NO Vote ಎಂದ ಜನ

Election Boycott in hasana sakaleshpura donahalli

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಎಲ್ಲ ಕಡೆ ಜನರು ಸಂಭ್ರಮದಿಂದ, ಖುಷಿಯಿಂದ ಬಂದು ಮತವನ್ನು ಚಲಾವಣೆ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಹಲವು ಕಡೆ ಜನಪ್ರತಿನಿಧಿಗಳು, ಅಧಿಕಾರಿಗಳ ವರ್ತನೆಗೆ ಬೇಸತ್ತು ಮತದಾನವನ್ನು ಬಹಿಷ್ಕಾರ ಮಾಡಿದ್ದಾರೆ. “ಕೆಲಸ ಮಾಡದಿದ್ದರೆ, ಮತವೂ ಇಲ್ಲ (NO Work NO Vote)” ಎಂದು ಜನರು ಕಿಡಿಕಾರುತ್ತಿದ್ದಾರೆ. ಹಾಸನ, ತುಮಕೂರು ಹಾಗೂ ಮೈಸೂರು ಜಿಲ್ಲೆಯ ಒಂದೊಂದು ಕಡೆ ಹಳ್ಳಿಗರು ಮತದಾನವನ್ನು ಬಹಿಷ್ಕಾರ ಮಾಡಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಸಕಲೇಶಪುರದ ದೋನಹಳ್ಳಿಯಲ್ಲಿ ಮತದಾನ ಬಹಿಷ್ಕಾರ

ಹಾಸನ: ಗ್ರಾಮಕ್ಕೆ ಮೂಲ ಸೌಲಭ್ಯ ಇಲ್ಲ ಎಂದು ಎಷ್ಟೇ ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು ಕೇಳದೇ ಇರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದ ಜನರಿಂದ ಬಹಿಷ್ಕಾರ ಹಾಕಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದ ಜನರಿಂದ ಬಹಿಷ್ಕಾರ

ಇದನ್ನೂ ಓದಿ: ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಎದುರೇ ಸ್ವತಂತ್ರ ಅಭ್ಯರ್ಥಿ ಮೇಲೆ ಹಲ್ಲೆ, ಕಲಬುರಗಿಯಲ್ಲೂ ಗಲಾಟೆ

ಗ್ರಾಮದಲ್ಲಿರುವ 120 ಮತದಾರರಿಂದ ಮತದಾನವನ್ನು ಬಹಿಷ್ಕಾರ ಮಾಡಲಾಗಿದೆ. ಬೆಳಗ್ಗೆಯಿಂದ ಹಕ್ಕು ಚಲಾವಣೆ ಮಾಡಲು ಜನರು ಮುಂದಾಗಿಲ್ಲ. ಅಲ್ಲದೆ, ಈ ಬಗ್ಗೆ ಬ್ಯಾನರ್‌ ಅನ್ನು ಸಹ ಸಿದ್ಧಪಡಿಸಿ ಗ್ರಾಮದ ಮುಂದೆ ಹಾಕಿದ್ದಾರೆ. ಮಾಹಿತಿ ತಿಳಿಯುತ್ತಲೇ ಗ್ರಾಮಕ್ಕೆ ಅಧಿಕಾರಿಗಳು ಬಂದಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಸಮಸ್ಯೆ ಬಗ್ಗೆ ಈಗಾಗಲೇ ಎಲ್ಲರ ಗಮನಕ್ಕೆ ತರಲಾಗಿದೆ. ಸಮಸ್ಯೆ ಹೇಳಲು ಬಂದಾಗ ಕೇಳಿಸಿಕೊಳ್ಳದೇ ಇರುವ ನೀವುಗಳು ಮತದಾನ ಮಾಡುವುದಿಲ್ಲ ಎಂದಾಗ ಏಕೆ ಬರುತ್ತೀರ? ಗ್ರಾಮದಲ್ಲಿ ಏನೆಲ್ಲ ಸಮಸ್ಯೆಗಳಿವೆ, ಪರಿಹರಿಸಿಕೊಡಿ ಎಂದು ಎಷ್ಟು ಬಾರಿ ಕೋರಿದ್ದೇವೆ. ತಹಸೀಲ್ದಾರ್‌ ಅವರಿಗೆ ಕರೆ ಮಾಡಿದರೆ ಅವರು ಕರೆಯನ್ನೇ ಸ್ವೀಕಾರ ಮಾಡುವುದಿಲ್ಲ. ಈಗ ಅವರು ಸ್ಥಳಕ್ಕೆ ಬರಲಿ ಅಲ್ಲಿಯವರೆಗೆ ನಿಮ್ಮನ್ನೂ ಬಿಡುವುದಿಲ್ಲ ಎಂದು ಬಂದಿದ್ದ ಅಧಿಕಾರಿಗಳನ್ನು ತಡೆದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಹುಂಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ಚಾಮುಂಡೇಶ್ವರಿಯ ಏಳಿಗೆಹುಂಡಿಯಲ್ಲಿ ಬಹಿಷ್ಕಾರ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಹುಂಡಿ ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಒತ್ತಾಯಿಸಿ ಮತದಾನವನ್ನು ಬಹಿಷ್ಕಾರ ಮಾಡಲಾಗಿದೆ. ಕುಡಿಯುವ ನೀರು, ರಸ್ತೆ, ಒಳಚರಂಡಿ ಸೌಕರ್ಯ ನೀಡುವಂತೆ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ. ಮತಗಟ್ಟೆವರೆಗೂ ಬಂದು ನಿಷೇಧಿತ ಪ್ರದೇಶದೊಳಗೆ ಬಾರದೆ ಜನ ನಿಂತಿದ್ದರು.

ಇದನ್ನೂ ಓದಿ: Karnataka Election : ದೇವರ ಪ್ರಸಾದ ಪಡೆದು ಮತದಾನ ಮಾಡಿದ ಸಿದ್ದು, 150 ಸೀಟು, ಸಿಎಂ ಸ್ಥಾನ ಗ್ಯಾರಂಟಿ!

ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ತುರುವೇಕೆರೆ ತಾಲೂಕಿನ ರಾಯಸಂದ್ರ ಕೊಪ್ಪ ಗ್ರಾಮಸ್ಥರು

ಮೊದಲು ಬಹಿಷ್ಕಾರ; ಮನವೊಲಿಕೆಗೆ ಮಣಿದ ಗ್ರಾಮಸ್ಥರು

ತುಮಕೂರು: ಮೂಲ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ತುರುವೇಕೆರೆ ತಾಲೂಕಿನ ರಾಯಸಂದ್ರ ಕೊಪ್ಪ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದರು. ಈ ವಿಷಯ ತಿಳಿದ ತುರುವೇಕೆರೆ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಮತದಾನ ಬಹಿಷ್ಕಾರ ಮಾಡದಂತೆ ಮನವೊಲಿಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಾಯಸಂದ್ರ ಗ್ರಾಮಸ್ಥರು ಮತದಾನಕ್ಕೆ ಮುಂದಾದರು.

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ.

Exit mobile version