ಚಿತ್ರುದುರ್ಗ: ಚಿತ್ರದುರ್ಗ ನಗರದ ಜೈಲ್ ರೋಡ್ ಬಳಿಯ ಪಾಳು ಮನೆಯಲ್ಲಿ ಸಿಕ್ಕ 5 ಅಸ್ತಿ ಪಂಜರಗಳ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಜಗನ್ನಾಥ್ ರೆಡ್ಡಿ ಕುಟುಂಬದವರು ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಕೆಲ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿರುವುದು ಬಹಿರಂಗ ಆಗಿತ್ತು. ಅದರ ಬೆನ್ನಲ್ಲೇ ಇಂದು ಅದೇ ಡೆತ್ ನೋಟ್ನಲ್ಲಿ ಇಬ್ಬರು ವ್ಯಕ್ತಿಗಳ ಹೆಸರು ಉಲ್ಲೇಖ ಆಗಿರುವುದು ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಈ ಮಧ್ಯೆ ಪಾಳು ಬಿದ್ದ ಮನೆಗೆ ಮೊದಲು ಪ್ರವೇಶಿಸಿದ್ದೆ ಅಪ್ರಾಪ್ತರು ಎನ್ನಲಾಗಿದೆ.
ಐದಾರು ವರ್ಷಗಳ ಕಾಲ ಪಾಳು ಬಿದ್ದು ಭೂತದ ಮನೆಯಂತಿದ್ದ ಕಾರಣಕ್ಕೆ ಆ ಏರಿಯಾ ಹುಡುಗರ ಕುತೂಹಲಕ್ಕೆ ಕಾರಣವಾಗಿತ್ತು. ಡೇರಿಂಗ್ ಮನೋಭಾವ ಹೊಂದಿದ್ದ ಅವರು ಕೈಯಲ್ಲೊಂದು ಮೊಬೈಲ್ ಹಿಡಿದು ಪಾಳು ಬಿದ್ದ ಮನೆಗೆ ನುಗ್ಗಿದ್ದರು.
ಕಗ್ಗತ್ತಲಿನಲ್ಲಿ ಟಾರ್ಚ್ಲೈಟ್ ಹಿಡಿದು ಮನೆಯೊಳಗೆ ಹೋಗಿ ಮೊಬೈಲ್ನಲ್ಲಿ ವಿಡಿಯೊ ಮಾಡಿಕೊಂಡಿದ್ದಾರೆ. ಬಾಲಕರ ಪೈಕಿ ಒಬ್ಬ ಭಯವಾಗುತ್ತಿದೆ ಎನ್ನುತ್ತಲೇ ರೂಮಿನೊಳಗೆ ಇದ್ದ ಅಸ್ಥಿಪಂಜರವನ್ನು ನೋಡಿ, ಮತ್ತೊಂದು ರೂಮಿನಲ್ಲಿದ್ದ ಎರಡು ಅಸ್ಥಿಪಂಜರವನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.
ಅಕ್ಕಪಕ್ಕದ ಮನೆಗಳಿಗೆ ಬೀಗ
ಐವರ ಅಸ್ಥಿಪಂಜರ ಪತ್ತೆ ಆಗಿದ್ದೆ ತಡ ಅಕ್ಕಪಕ್ಕದ ನಿವಾಸಿಗಳು ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ಬೇರೆಡೆ ತೆರಳುತ್ತಿದ್ದಾರೆ. ಜನನಿಬಿಡಪ್ರದೇಶವಾಗಿದ್ದ ರಸ್ತೆ ಈಗ ಬಿಕೋ ಎನ್ನುತ್ತಿದೆ. ಒಂದೇ ಮನೆಯಲ್ಲಿ ಐವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ನಿವಾಸಿಗಳು ಭಯಗೊಂಡಿದ್ದಾರೆ. ನಿತ್ಯ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸವಾರರು, ವಾಯುವಿಹಾರಿಗಳು ಇತ್ತ ಮುಖಮಾಡುತ್ತಿಲ್ಲ. ಇನ್ನೂ ಇದೇ ರಸ್ತೆಯ ಕೊನೆಯಲ್ಲಿದ್ದ ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಲ್ಲದೇ ಬಣಗುಡುತ್ತಿದೆ.
ಪೆನ್ಶನ್ಗಾಗಿ ಅರ್ಜಿ ಸಲ್ಲಿಸಿದ್ದ ಜಗನ್ನಾಥ್ ರೆಡ್ಡಿ
ಚಿತ್ರದುರ್ಗದಲ್ಲಿ ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದು ವಿಚಾರಗಳು ಹೊರಬರುತ್ತಿದೆ. ಐದು ವರ್ಷಗಳ ಹಿಂದೆಯೇ ಐವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ಜಗನ್ನಾಥ್ ರೆಡ್ಡಿ ಕುಟುಂಬಸ್ಥರು 2019ರ ಜನವರಿಯಲ್ಲಿ ಕರೆಂಟ್ ಬಿಲ್ ಪಾವತಿಸಿದ್ದರು. ನಂತರ ಯಾವುದೇ ಬಿಲ್ ಪಾವತಿ ಆಗಿಲ್ಲ. ಜತೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಜಗನ್ನಾಥ್ ರೆಡ್ಡಿ ನಿವೃತ್ತಿ ಹೊಂದಿದ್ದರು. ತಮ್ಮ ಪೆನ್ಶನ್ ತೆಗೆದುಕೊಳ್ಳಲು 2019 ಜನವರಿಯಲ್ಲಿ ಕೊನೆ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಯಾವುದೇ ಅರ್ಜಿ ಸಲ್ಲಿಸಿರಲಿಲ್ಲ.
ಇತ್ತ ಮನೆಯಲ್ಲಿದ್ದ ಒಡವೆಯನ್ನು ಅಡವಿಟ್ಟು ಹಣ ಪಡೆದಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸಾಲಭಾದೆಗೆ ಬೇಸತ್ತ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರಾ? ಎಂಬುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.
ದಡೋಡೆ ಕೇಸ್ನಿಂದ ಮನನೊಂದು ಆತ್ಮಹತ್ಯೆ?
ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ಮೇಲೆ ರಾಬರಿ ಕೇಸ್ ದಾಖಲಾಗಿತ್ತು. 2013ರಲ್ಲಿ ಖಾಸಗಿ ಕಂಪನಿಯಲ್ಲಿ ನರೇಂದ್ರರೆಡ್ಡಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. 2013ರಲ್ಲಿ ಬಿಡದಿ ಬಳಿ ವಾಹನ ತಡೆದು ದರೋಡೆ ಮಾಡಿದ ಆರೋಪದಲ್ಲಿ ನರೇಂದ್ರರೆಡ್ಡಿ ಮತ್ತು ಗೆಳೆಯರ ವಿರುದ್ಧ ಕೇಸ್ ದಾಖಲಾಗಿತ್ತು. ನಂತರ ಆತ ದರೋಡೆ ಕೇಸ್ನಲ್ಲಿ ಕೆಲದಿನ ಜೈಲು ಪಾಲಾಗಿದ್ದ.
ಜಮೀನು ಪಡೆದು ಹೊರ ಬಂದಿದ್ದ ನರೇಂದ್ರರೆಡ್ಡಿ ಹಾಗೂ ಆತನ ಕುಟುಂಬಸ್ಥರು ಮನನೊಂದಿದ್ದರು ಎನ್ನಲಾಗಿದೆ. ಹೀಗಾಗಿಯೇ ಊಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪತ್ನಿಗೆ ಅನಾರೋಗ್ಯ; 2 ಕೋಟಿ ರೂ. ಖರ್ಚು
ಜಗನ್ನಾಥ ರೆಡ್ಡಿಯವರ ಪತ್ನಿ ಅಸ್ವಸ್ಥರಾಗಿದ್ದು, ಅವರಿಗಾಗಿ 2 ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗಿರಲಿಲ್ಲ ಎನ್ನಲಾಗಿದೆ. ಈ ಮನೆಯವರು ಯಾರನ್ನೂ ಒಳಬಿಟ್ಟುಕೊಳ್ಳುತ್ತಿರಲಿಲ್ಲ. ಬಾಗಿಲು ತೆರೆಯದೇ ಕಿಟಕಿಯಿಂದ ಮಾತಾಡಿಸಿ ಕಳುಹಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 2022ರ ಬಳಿಕ ಈ ಮನೆಯವರು ಯಾರಿಗೂ ಕಾಣಿಸಿಕೊಂಡಿಲ್ಲ. ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಕೂಡ ಕಂಡುಬಂದಿದೆ.
ಏನಿದು ಪ್ರಕರಣ?
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯಿರುವ ದೊಡ್ಡ ಸಿದ್ದವ್ವನ ಹಳ್ಳಿಯ ನಿವಾಸಿ ಜಗನ್ನಾಥ್ ರೆಡ್ಡಿ ಎಂಬವರ ಇಡೀ ಕುಟುಂಬದವರ ಅಸ್ಥಿಪಂಜರ ಪತ್ತೆಯಾಗಿತ್ತು. ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿತ್ತು. ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮ, ಮಕ್ಕಳಾದ ತ್ರಿವೇಣಿ, ನರೇಂದ್ರ ರೆಡ್ಡಿ, ಕೃಷ್ಣ ರೆಡ್ಡಿ ಅವರ ಮೃತದೇಹದ ಅಸ್ಥಿಪಂಜರಗಳು ಪತ್ತೆ ಆಗಿತ್ತು.
ಜಗನ್ನಾಥ್ ರೆಡ್ಡಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಂದ ಬಾರಿ ಮನನೊಂದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಇನ್ನು ಮನೆಯಲ್ಲಿ ಸಿಕ್ಕ 2019ರ ಕ್ಯಾಲೆಂಡರ್ ಪ್ರಕಾರ ಜಗನ್ನಾಥ್ ರೆಡ್ಡಿ ಕುಟುಂಬದವರು ಮೃತಪಟ್ಟು 5 ವರ್ಷಗಳು ಆಗಿರಬಹುದು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಅಸ್ತಿ ಪಂಜರಗಳನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಿಗೂಢ ಸಾವಿಗೆ ಕಾರಣ ಹುಡುಕಲು ಪೊಲೀಸರು ಮುಂದಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ