Site icon Vistara News

BPL card | ಇರೋದು ಸರ್ಕಾರಿ ಅಧಿಕಾರ, ತಿನ್ನೋದು ಬಿಪಿಎಲ್‌ ಆಹಾರ; ಈಗ ಇಲಾಖೆಯಿಂದ ₹36 ಲಕ್ಷ ದಂಡ ಪ್ರಹಾರ

BPL Card center

ಧಾರವಾಡ: ಸರ್ಕಾರಿ ಕೆಲಸ ಇದ್ದರೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬವೆಂದು ತಪ್ಪು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆದುಕೊಂಡು ಬಡವರ ಅಕ್ಕಿ ಸೇರಿದಂತೆ ಪಡಿತರ ವ್ಯವಸ್ಥೆಯ ಸಂಪೂರ್ಣ ಫಲವನ್ನು ಉಂಡಿದ್ದ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ಅಧಿಕಾರಿಗಳು (BPL card) ದಂಡ ಪ್ರಯೋಗ ಮಾಡಿದ್ದಾರೆ.

ಸರ್ಕಾರವು ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ನೈಜ ಫಲಾನುಭವಿಗಳನ್ನು ಬಿಟ್ಟು ಬೇರೆಯವರ ಪಾಲಾಗುತ್ತಿವೆ. ಕೆಲವು ಸರ್ಕಾರಿ ನೌಕರರು ಬಡವರು ಎಂದು ಸುಳ್ಳು ದಾಖಲೆಯನ್ನು ನೀಡಿ ಪಡಿತರ ಚೀಟಿಯನ್ನು ಪಡೆದುಕೊಂಡಿದ್ದರು. ಬಳಿಕ ರೇಷನ್‌ ಕಾರ್ಡ್‌ ಮೂಲಕ ಪಡಿತರವನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದರು. ಸೂಕ್ತ ಮಾಹಿತಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಕಲೆ ಹಾಕಿ ನೌಕರರಿಂದ ದಂಡ ವಸೂಲಿ ಮಾಡಿದ್ದಾರೆ.

36.73 ಲಕ್ಷ ರೂಪಾಯಿ ವಸೂಲಿ
ಧಾರವಾಡ ಜಿಲ್ಲೆಯ 339 ಸರ್ಕಾರಿ ನೌಕರರನ್ನು ಪತ್ತೆ ಮಾಡಿದ ಆಹಾರ ಇಲಾಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. 339 ನೌಕರರಿಂದ 36.73 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ತಲಾ ಒಬ್ಬರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಅರ್ಹರಿಗೆ ಸಿಗಬೇಕಾದ ಪಡಿತರವನ್ನು ಅನರ್ಹರೂ ಪಡೆದು ವಂಚಿಸುತ್ತಿರುವ ಬಗ್ಗೆ ಮಾಹಿತಿಯು ಇಲಾಖೆಗೆ ಲಭ್ಯವಾಗಿತ್ತು.

ಸರ್ಕಾರಿ ನೌಕರರಾಗಿದ್ದರೂ ವೇತನ, ಆದಾಯ ಮರೆಮಾಚಿ ಪಡಿತರ ಪಡೆಯುತ್ತಿರುವವರನ್ನು ಪತ್ತೆ ಮಾಡಲು ಆಂದೋಲನ ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಆದೇಶಿಸಿತ್ತು. ವಿವಿಧ ಇಲಾಖೆಗಳು, ಅರೆ ಸರ್ಕಾರಿ ನೌಕರರು ಹಾಗೂ ನಿಗಮಗಳಿಂದ ಮಾಹಿತಿ ಕಲೆ ಹಾಕಿ, 339 ಸರ್ಕಾರಿ ನೌಕರರನ್ನು ಪತ್ತೆ ಮಾಡಲಾಗಿದೆ. ಇವರಿಂದ ಕಾನೂನು ಕ್ರಮದ ಮೂಲಕವೇ ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | 80 ಕೋಟಿ ಬಡವರಿಗೆ ಉಚಿತ ಪಡಿತರ ಇನ್ನೂ ಮೂರು ತಿಂಗಳು ವಿಸ್ತರಣೆ

Exit mobile version