ಕಾರವಾರ: ಬಿಜೆಪಿಯವರಿಗೆ ಮತ ನೀಡಿದರೆ ಬ್ರಾಹ್ಮಣರನ್ನು ಮುಖ್ಯಮಂತ್ರಿಯನ್ನಾಗಿ (Brahmin CM) ಮಾಡುತ್ತಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆ ಸಹ ಬ್ರಾಹ್ಮಣ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಎಲ್ಲ ಕಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೇಳೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ (Gokarna Mahabaleshwar Temple) ಮಾಜಿ ಸಿಎಂ ಎಚ್‌ಡಿಕೆ ಭೇಟಿ ನೀಡಿದ ವೇಳೆ ಅವರನ್ನು ಅರ್ಚಕರೊಬ್ಬರು ತರಾಟೆಗೆ ತೆಗೆದುಕೊಂಡಿದ್ದು, ಬ್ರಾಹ್ಮಣ ವಿರೋಧಿ ಹೇಳಿಕೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಎಚ್‌ಡಿಕೆ, ನಾನು ಬ್ರಾಹ್ಮಣ ವಿರೋಧಿ ಅಲ್ಲ. ನಾನು ಬ್ರಾಹ್ಮಣರ ಜತೆಯಲ್ಲಿಯೇ ಬೆಳೆದಿದ್ದೇನೆ. ಬ್ರಾಹ್ಮಣರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ನಾನು ಹೇಳಿದ್ದು ಪೇಶ್ವೆ ಡಿಎನ್‌ಎ ಹೊಂದಿರುವವರ ಬಗ್ಗೆಯಷ್ಟೇ. ಬ್ರಾಹ್ಮಣ ಸಮುದಾಯದವರ ಮೇಲೆ ಅಪಾರ ಗೌರವವಿದೆ. ರಾಮಕೃಷ್ಣ ಹೆಗಡೆ ಅವರನ್ನು ಸಿಎಂ ಮಾಡಿದ್ದೇ ದೇವೇಗೌಡ ಎಂದು ಹೇಳಿದರು.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬುಧವಾರ (ಫೆ. ೮) ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಅರ್ಚಕರೊಬ್ಬರು ಕುಮಾರಸ್ವಾಮಿಯನ್ನು ತಡೆದು, “ನಿಮ್ಮ ಹೇಳಿಕೆಯಿಂದ ನಮಗೆ ಬೇಸರವಾಗಿದೆ. ನಿಮ್ಮ ಕುಟುಂಬದ ಮೇಲೆ ನಮಗೆ ಬಹಳವೇ ಅಭಿಮಾನವಿದೆ. ನಿಮ್ಮ ಹೇಳಿಕೆ ಬಗ್ಗೆ ಗೋಕರ್ಣದಲ್ಲಿಯೇ ಸ್ಪಷ್ಟೀಕರಣ ನೀಡಿ ಎಂದು ಕೇಳಿದರು.
ಇದಕ್ಕೆ ಸ್ಪಷ್ಟೀಕರಣ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇದನ್ನೂ ಓದಿ: RBI MPC meet 2023: ರೆಪೋ ದರ 6.5%ಕ್ಕೆ ಏರಿಕೆ, ಮತ್ತಷ್ಟು ಏರಲಿದೆ ಸಾಲದ ಇಎಂಐ
ರಾಮಕೃಷ್ಣ ಹೆಗಡೆಯನ್ನು ಸಿಎಂ ಮಾಡಿದ್ದೇ ದೇವೆಗೌಡ
ನಾವು ಬ್ರಾಹ್ಮಣ ವಿರೋಧಿಯಲ್ಲ. ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ದೇವೆಗೌಡರು. ನಳಿನ್ ಕಟೀಲ್‌ಗೆ ರಾಜಕೀಯ ಎಲ್ಲಿ ಗೊತ್ತಿದೆ? ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತ ಇಟ್ಟುಕೊಳ್ಳಲಿ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದನ್ನು ಜನರು ನಿರ್ಧರಿಸುತ್ತಾರೆ. ಬಿಜೆಪಿ ನಾಯಕರು ನಿರ್ಧರಿಸುವುದಲ್ಲ. ನಾವು ಹಿಂದು ಧರ್ಮ ರಕ್ಷಣೆ ಮಾಡುತ್ತೇವೆ. ಹಿಂದು ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಏನು ಮಾಡಿದ್ದಾರೆ ಎನ್ನುವುದು ತಿಳಿದಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬ್ರಾಹ್ಮಣ ಸಮುದಾಯಕ್ಕೆ ನಾನು ಸಿಎಂ ಆದಾಗ ಬೆಂಗಳೂರಿನಲ್ಲಿ ಸಮುದಾಯ ಭವನಕ್ಕೆ ಜಾಗ ಕೊಟ್ಟಿದ್ದೇನೆ. ಬ್ರಾಹ್ಮಣ ಪ್ರಾಧಿಕಾರ ರಚನೆ ಮಾಡಿದ್ದೆ. ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಏನು ಮಾಡಿದೆ ಹೇಳಿಕೊಳ್ಳಲಿ. ನಮಗೆ ಸಾವರ್ಕರ್ ಸಂಸ್ಕೃತಿ ಬೇಡ. “ಸರ್ವೇ ಜನಃ ಸುಖಿನೋಭವ” ಅನ್ನುವ ಬ್ರಾಹ್ಮಣರು ನಮಗೆ ಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ರಥಯಾತ್ರೆ ಮಾಡಲಾಗುವುದು. ಜನಗಳ ಉತ್ತೇಜನ ಹಾಗೂ ಪ್ರೋತ್ಸಾಹಗಳು ಈ ಯಾತ್ರೆಗೆ ಇದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ಕೆಲವರು ಪಕ್ಷ ಬಿಟ್ಟು ಹೋಗುತ್ತಾರೆ. ಅದು ಚುನಾವಣಾ ಸಂದರ್ಭದಲ್ಲಿ ಕಾಮನ್ ಆಗಿರಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡರಿಂದ ಮೂರು ಸ್ಥಾನವನ್ನು ಜೆಡಿಎಸ್ ಗೆಲ್ಲಲಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ : JDS Politics: ಎಚ್.ಡಿ. ಕುಮಾರಸ್ವಾಮಿ ತಂತ್ರವನ್ನೇ ಬಳಸಿ ಹಾಸನ ಟಿಕೆಟ್ ಕೇಳಿದ ಎಚ್.ಡಿ. ರೇವಣ್ಣ: ಬಿಗ್ ಬ್ರದರ್ ಹೊಸ ವರಸೆ