Site icon Vistara News

Brahmin CM: ಪೇಶ್ವೆ ಬ್ರಾಹ್ಮಣರ ಕುರಿತ ಹೇಳಿಕೆಯನ್ನು ಎಚ್‌ಡಿಕೆ ತಕ್ಷಣ ಹಿಂಪಡೆಯಬೇಕು: ವಿಶ್ವ ವಿಪ್ರತ್ರಯೀ ಪರಿಷತ್‌

vishwa Vipratrayi Parishat says HDK should immediately withdraw statement on Peshwa Brahmins

#image_title

ಬೆಂಗಳೂರು: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರ (ಚಿತ್ಪಾವನ ಬ್ರಾಹ್ಮಣ) ಪಾತ್ರ ಅತ್ಯಂತ ಪರಿಣಾಮಕಾರಿ ಹಾಗೂ ಶ್ಲಾಘನೀಯ. ಹಲವು ಪೇಶ್ವೆ ಬ್ರಾಹ್ಮಣರು ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪೇಶ್ವೆ ಬ್ರಾಹ್ಮಣರ ಇತಿಹಾಸವನ್ನು ಮರೆತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Brahmin CM) ಅವರನ್ನು ಟೀಕಿಸಿ, ಪೇಶ್ವೆ ಬ್ರಾಹ್ಮಣರನ್ನು ಅವಮಾನಿಸಿರುವುದು ಅತ್ಯಂತ ಬೇಸರದ ಸಂಗತಿ ಹಾಗೂ ಖಂಡನೀಯ ಎಂದು ವಿಶ್ವ ವಿಪ್ರತ್ರಯೀ ಪರಿಷತ್‌ ಅಧ್ಯಕ್ಷ ಎಸ್‌.ರಘುನಾಥ್‌ ಟೀಕಿಸಿದ್ದಾರೆ.

ಸಚಿವ ಪ್ರಲ್ಹಾದ್‌ ಜೋಶಿ ಬಗ್ಗೆ ಶೃಂಗೇರಿ ಮಠವನ್ನು ಒಡೆದ, ಗಾಂಧೀಜಿಯನ್ನು ಕೊಂದ ಬ್ರಾಹ್ಮಣ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಆಕ್ಷೇಪಿಸಿರುವ ಅವರು, ಪೇಶ್ವೆ ಬ್ರಾಹ್ಮಣರಾದ ವಾಸುದೇವ ಬಲವಾಂತ್ ಫಡಕೆ, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್, ಚಾಪೇಕರ್ ಸಹೋದರರು, ಸೇನಾಪತಿ ಬಾಪಟ್, ಗೋಪಾಲಕೃಷ್ಣ ಗೋಖಲೆ, ವಿನೋಬಾ ಭಾವೆ ಹೀಗೆ ಅನೇಕರು ಅವರದೇ ಆದ ರೀತಿಯಲ್ಲಿ ಹೋರಾಟ ಮಾಡಿದ್ದಾರೆ. ಅಲ್ಲದೆ ಕೆಲವರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Brahmin CM: ಪ್ರಲ್ಹಾದ ಜೋಶಿ ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿ: ಜಾತಿ ಆಧಾರದಲ್ಲಿ ಟೀಕೆ ಸರಿಯಲ್ಲ ಎಂದ ಬ್ರಾಹ್ಮಣ ಮಹಾಸಭಾ

ಪೇಶ್ವೆ ಬ್ರಾಹ್ಮಣ ಮಹಾದೇವ ಗೋವಿಂದ್ ರಾನಡೆ ಅವರ ವ್ಯಕ್ತಿತ್ವದಿಂದ ಡಾ. ಬಿ.ಆರ್. ಅಂಬೇಡ್ಕರ್ ರವರು ಪ್ರಭಾವಿತರಾಗಿದ್ದು, ಈ ಬಗ್ಗೆ ಸ್ವತಃ ಅವರೇ ಅವರ ಪುಸ್ತಕದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಪೇಶ್ವೆ ಬ್ರಾಹ್ಮಣರಾದ ಗೋಪಾಲಕೃಷ್ಣ ಗೋಖಲೆ ಅವರು ಮಾರ್ಗದರ್ಶಕರು ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿ ಅವರನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿಬರುವಂತೆ ಒತ್ತಾಯಿಸಿದವರು. ಇದಲ್ಲದೆ ದಾದಾಸಾಹೇಬ್ ಫಾಲ್ಕೆ, ದಾ.ರಾ. ಬೇಂದ್ರೆ, ವಿ.ಎನ್. ಗಾಲ್, ಮಾಧುರಿ ದೀಕ್ಷಿತ್ ಮುಂತಾದವರು ಈ ದೇಶದ ಹೆಸರಾಂತ ಪೇಶ್ವೆ ಬಾಹ್ಮಣರಾಗಿದ್ದಾರೆ. ಆದರೆ, ಒಂದು ಸಮುದಾಯದ ಗುರಿ ಮಾಡಿ ಟೀಕಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ವಿಶ್ವದಲ್ಲಿರುವ ಬ್ರಾಹ್ಮಣರೆಲ್ಲರು ಒಂದೇ ಆಗಿರುವಾಗ ಕರ್ನಾಟಕ ಬ್ರಾಹ್ಮಣರು, ಮಹಾರಾಷ್ಟ್ರ ಬ್ರಾಹ್ಮಣರು ಎಂದು ಬ್ರಾಹ್ಮಣರನ್ನು ಬೇರೆ ಮಾಡುವ ಮಾಜಿ ಸಿಎಂ ಹೇಳಿಕೆ ಸರಿಯಲ್ಲ. ಕುಮಾರಸ್ವಾಮಿ ಅವರು ಈ ಕೂಡಲೇ ಅವರ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

Exit mobile version