Site icon Vistara News

Brahmin community | ‘ಸಿದ್ದರಾಮಯ್ಯ 75’ ಕಾರ್ಯಕ್ರಮದಲ್ಲಿ ಬ್ರಾಹ್ಮಣರಿಗೆ ಅವಹೇಳನ; ವ್ಯಾಪಕ ಖಂಡನೆ

ramanagara protest Brahmin community ಅಖಿಲ ಕರ್ನಾಟಕ ಮಾಧ್ವ ಮಹಾಸಭಾ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ “ಸಿದ್ದರಾಮಯ್ಯ ೭೫” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬ್ರಾಹ್ಮಣ ಸಮುದಾಯದ (Brahmin community) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ. ವಿನಾಕಾರಣ ಬ್ರಾಹ್ಮಣರನ್ನು ಗುರಿಯಾಗಿಸಿ ಮಾತನಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯದವರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಬ್ರಾಹ್ಮಣ ನಿಗಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಗುರುವಾರ (ನ.೧೭) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಕರ್ನಾಟಕ ಮಾಧ್ವ ಮಹಾಸಭಾ ಖಂಡನೆ
ಬ್ರಾಹ್ಮಣ ಸಮುದಾಯದ ಮೇಲೆ ಹಲವಾರು ಮಂದಿ ಅನೇಕ ರೀತಿಯ ದಬ್ಬಾಳಿಕೆ ನಡೆಸುತ್ತಿದ್ದು, ನಮ್ಮ ಎಲ್ಲ ಪದ್ಧತಿಗಳ ಮತ್ತು ಸಂಪ್ರದಾಯಗಳ ಬಗ್ಗೆ ನಿರಂತರವಾಗಿ ಅವಹೇಳನ ಮುಂದುವರಿದಿದೆ. ನವೆಂಬರ್‌ 15ರ ಮಂಗಳವಾರ ಮೈಸೂರಿನ ರಾಮಾಗೋವಿಂದ ರಂಗಮಂದಿರದಲ್ಲಿ ನಡೆದ “ಸಿದ್ದರಾಮಯ್ಯ 75” ಅನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆ ಪುಸ್ತಕದ ಲೇಖಕ, ಸಿದ್ದರಾಮಯ್ಯ ಆಪ್ತ ಮಲ್ಲೇಶ ಮಾತನಾಡುತ್ತಾ ಇಡೀ ಕಾರ್ಯಕ್ರಮಕ್ಕೆ ಸಂಬಂಧ ಇರದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಬ್ರಾಹ್ಮಣ ಸಮುದಾಯವನ್ನು ನೇರವಾಗಿ ಗುರಿ ಮಾಡಿ ಮಾತನಾಡಿದ್ದಾರೆ. ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ, ಇವರಿಂದ ದೇಶ ನಾಶವಾಗುತ್ತಿದೆ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಯನ್ನು ಅಖಿಲ ಕರ್ನಾಟಕ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಎಂದು ಮಹಾಸಭಾದ ಅಧ್ಯಕ್ಷ ಡಾ. ಮುರಳೀಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರೂ ಮಲ್ಲೇಶ ಅವರ ಹೇಳಿಕೆಯನ್ನು ವಿರೋಧಿಸಿಲ್ಲ, ಇದು ಶೋಚನೀಯ. ಸರ್ಕಾರ ಈ ಕೂಡಲೇ ಆ ವ್ಯಕ್ತಿಯ ಮೇಲೆ ಮತ್ತು ಆ ಕಾರ್ಯಕ್ರಮದ ಆಯೋಜಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ದೇಶದ ಸಂವಿಧಾನವನ್ನು ಈ ರೀತಿ ಅವಹೇಳನ ಮಾಡಿ ಪುಕ್ಕಟೆ ಪ್ರಚಾರ ಪಡೆಯುವ ಇಂತಹ ವ್ಯಕ್ತಿಗಳು ಹಾಗೂ ಅದನ್ನು ಬೆಂಬಲಿಸುವ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ | Election 2023 | ಚುನಾವಣೆ ಬಂದಾಗ ಸಿದ್ದರಾಮಯ್ಯ ಅನಾರೋಗ್ಯ ಅಂತಾರೆ; ಆದ್ರೆ ಜನ ನಂಬಲ್ಲ ಅಂದ್ರು ಸಿಎಂ

ನಾಳೆ ಪ್ರತಿಭಟನೆಗೆ ಕರೆ
ಬಳ್ಳಾರಿ: ಸಿದ್ದರಾಮಯ್ಯ ಮತ್ತು ಅವರ ಆಪ್ತ ಮಲ್ಲೇಶ ವಿರುದ್ಧ ಗುರುವಾರ (ನ.೧೬) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಬ್ರಾಹ್ಮಣ ನಿಗಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಬಳ್ಳಾರಿಯಲ್ಲಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ. ಇದು ಸಿದ್ದರಾಮಯ್ಯ ಅವರ ಮನದಾಳದ ಮಾತಾಗಿದೆ. ಇದು ಮಲ್ಲೇಶ ಅವರ ಉದ್ಧಟತನದ ಮಾತು. ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಎಲ್ಲರ ವಿರುದ್ಧ ನಾಲಿಗೆ ಹರಿಬಿಡಲಾಗಿದೆ. ಬ್ರಾಹ್ಮಣರಿಂದಲೇ ವ್ಯವಸ್ಥೆ ಹಾಳಾಗುತ್ತಿದೆ ಎಂದು ಅರ್ಥವಿಲ್ಲದ ಹಾಗೆ ಮಾತನಾಡಲಾಗಿದೆ ಎಂದು ಕಿಡಿಕಾರಿದರು.

ಈಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದು ಪದ ಅಶ್ಲೀಲವೆಂದರು, ಈಗ ಸಿದ್ದರಾಮಯ್ಯ ಆಪ್ತ ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡಿದ್ದಾರೆ. ಇವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಮಲ್ಲೇಶ ಅವರನ್ನು ಬಂಧಿಸಬೇಕು. ಜಾತಿಯಿಂದ ಯಾರೂ ಗುರುತಿಸಿಕೊಂಡಿಲ್ಲ. ರಾಹುಲ್ ಗಾಂಧಿ ಕಾಶ್ಮೀರದ ಪಂಡಿತರ ಮೊಮ್ಮಗ ಎಂದು ಹೇಳಿರಲಿಲ್ಲವೇ? ಜಾತಿ, ಜಾತಿಗಳ ಮಧ್ಯ ವಿಷ ಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಈ ಹಿಂದೆ ಲಿಂಗಾಯತ ಧರ್ಮವನ್ನು ಒಡೆದರು, ಈಗ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದೇ ಇತರ ಧರ್ಮಗಳ ಬಗ್ಗೆ ಮಾತನಾಡಲಿ ಎಂದು ಸಚ್ಚಿದಾನಂದ ಮೂರ್ತಿ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ಡಾ.ಬಿ.ಕೆ. ಸುಂದರ್, ಪ್ರಕಾಶರಾವ್, ಲೋಕನಾಥ, ಡಾ‌. ಶ್ರೀನಾಥ್, ಅನಿಲ್ ಸೇರಿ ಇತರರು ಇದ್ದರು.

ಉಗ್ರ ಹೋರಾಟದ ಎಚ್ಚರಿಕೆ
ರಾಮನಗರ: ರಾಮನಗರ ಜಿಲ್ಲಾ ಬ್ರಾಹ್ಮಣ ಸಮಾಜದ ಪ್ರಮುಖ ರಾಘವೇಂದ್ರ ಮಯ್ಯ ಅವರು ಮಲ್ಲೇಶ ಅವರ ಹೇಳಿಕೆಯನ್ನು ಖಂಡಿಸಿದ್ದು, ಬ್ರಾಹ್ಮಣ ಸಮಾಜದ ಬಗ್ಗೆ ಲಘುವಾಗಿ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆ. ಬ್ರಾಹ್ಮಣರು ಯಾರನ್ನೂ ಹಾಳು ಮಾಡುತ್ತಿಲ್ಲ. ಇವರಿಗೆ ತಾಕತ್ತು ಇದ್ದರೆ ಮೀಸಲಾತಿಗಳಿಂದ ಹೊರಬಂದು ತೋರಿಸಲಿ. ಇಂತಹ ಹೇಳಿಕೆ ಹೀಗೇ ಮುಂದುವರಿದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ | Live | BJP Janasankalpa Yatre | ಸಿದ್ದರಾಮಯ್ಯ ಮಾಡಿದ್ದು ಭಾಷಣ; ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ: ಸಿಎಂ ಬೊಮ್ಮಾಯಿ

Exit mobile version