Site icon Vistara News

Brave daughter : ಹಾವು ಕಡಿತಕ್ಕೆ ಒಳಗಾದ ತಾಯಿಯನ್ನು ಬಾಯಿಯಿಂದ ವಿಷ ಹೊರಗೆಳೆದು ರಕ್ಷಿಸಿದ ಮಗಳು

Cobra mother and daughter

#image_title

ಪುತ್ತೂರು: ತಾಯಿಗೆ ವಿಷದ ಹಾವು ಕಚ್ಚಿದ ಸಂದರ್ಭದಲ್ಲಿ ಮಗಳು ಧೃತಿಗೆಡದೆ, ಆ ವಿಷವನ್ನು ಚೀಪಿ ಹೊರ ತೆಗೆದು ಸಿನಿಮೀಯ ರೀತಿಯಲ್ಲಿ ಅಮ್ಮನನ್ನು ರಕ್ಷಿಸಿದ ಘಟನೆ (Brave daughter) ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದಲ್ಲಿ ನಡೆದಿದೆ. ಸಾಹಸ ಮೆರೆದ ಯುವತಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ತಾಯಿಗೆ ಮರು ಜನ್ಮ ನೀಡಿದ ಮಗಳು ಎಂದು ಜನರು ಕೊಂಡಾಡುತ್ತಿದ್ದಾರೆ.

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಎಟ್ಯಡ್ಕ ಎಂಬಲ್ಲಿ ವಾರದ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಎಟ್ಯಡ್ಕ ನಿವಾಸಿ ಸತೀಶ್ ರೈ ಎಂಬವರ ಪತ್ನಿ ಮಮತಾ ಎಸ್. ರೈ ಅವರಿಗೆ ಮನೆಯ ತೋಟದಲ್ಲಿ ನಾಗರಹಾವು ಕಚ್ಚಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಮಗಳು ಶ್ರಮ್ಯ ರೈ ಕೂಡಲೇ ಹಾವು ಕಚ್ಚಿದ ಜಾಗಕ್ಕೆ ಬಾಯಿಯಿಟ್ಟು ವಿಷ ಪೂರಿತ ರಕ್ತವನ್ನು ಚೀಪಿ ಹೊರ ತೆಗೆದು ವಿಷಪ್ರಸರಣ ಆಗದಂತೆ ನೋಡಿಕೊಂಡಿದ್ದಾರೆ. ಈ ಮೂಲಕ ತಾಯಿಯ ಜೀವಕ್ಕೆ ಆಗಬಹುದಾಗಿದ್ದ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

ಮಮತಾ ರೈ ಕೆಯ್ಯೂರು ಗ್ರಾಪಂ ಸದಸ್ಯೆಯಾಗಿದ್ದು, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುತ್ರಿ ಶ್ರಮ್ಯ ರೈ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ಓದುತ್ತಿದ್ದಾರೆ. ಜತೆಗೆ ಕಾಲೇಜಿನ ರೋವರ್ಸ್ ರೇಂಜರ್ಸ್ ಘಟಕದಲ್ಲೂ ತೊಡಗಿಸಿಕೊಂಡಿದ್ದಾರೆ.

ಘಟನೆ ನಡೆದ ದಿನ ಮಮತಾ ರೈ ಅವರು ಅಡಿಕೆ ಗಿಡಗಳಿಗೆ ನೀರು ಹಾಯಿಸುವ ಉದ್ದೇಶದಿಂದ ಸಂಜೆ 5 ಗಂಟೆ ಸುಮಾರಿಗೆ ತೋಟದಲ್ಲಿರುವ ಪಂಪ್ ಶೆಡ್‌ಗೆ ಹೋಗಿದ್ದಾರೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ನಾಗರ ಹಾವು ಅವರ ಕಾಲಿಗೆ ಕಡಿದಿದೆ. ಭಯಭೀತರಾದ ಅವರು ವಾಪಾಸ್‌ ಮನೆಗೆ ಓಡಿ ಬಂದಿದ್ದಾರೆ.

ಈ ವೇಳೆ ಮನೆಯಲ್ಲಿ ಅವರ ಮಗಳು ಶ್ರಮ್ಯ ರೈ ಮಾತ್ರ ಇದ್ದರು. ವಿಷಯ ತಿಳಿದ ಆಕೆ ತಡ ಮಾಡದೇ ಯಾವುದೇ ಅಳುಕು ಪ್ರದರ್ಶಿಸದೇ ತಾಯಿಯ ಕಾಲಿಗೆ ಹಾವು ಕಚ್ಚಿದ ಜಾಗಕ್ಕೆ ಬಾಯಿಯಿಟ್ಟು ವಿಷ ಚೀಪಿದ್ದಾರೆ. ಈ ರೀತಿ ಮೂರು ಬಾರಿ ವಿಷ ಪೂರಿತ ರಕ್ತವನ್ನು ಚೀಪಿ ಹೊರಗೆ ಚೆಲ್ಲಿದ್ದಾರೆ.

ಬಳಿಕ ಮಮತಾ ರೈ ಯವರನ್ನು ಸ್ತಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸದ್ಯ ಮಮತಾರವರು ಚೇತರಿಸಿಕೊಂಡಿದ್ದಾರೆ.
ತಕ್ಷಣ ಮಗಳು ವಿಷವನ್ನು ಹೀರಿ ಹೊರ ತೆಗೆದ ಕಾರಣ ದೇಹದಲ್ಲಿ ವಿಷ ಪ್ರಸರಣವಾಗಿಲ್ಲ. ಬಹುಬೇಗ ಚೇತರಿಸಲು ಇದು ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಭಯವೆಂದರೆ ಏನೆಂದೇ ಗೊತ್ತಿಲ್ಲದ ಮುಗ್ಧ ಮಗುವಿನಲ್ಲಿ ಭಯ ತುಂಬಿಸುವವರು ಯಾರು?

Exit mobile version