ಬೆಂಗಳೂರು: ಒಂದೂವರೆ ಕಿ.ಮೀ. ಎಳೆದೊಯ್ದರೂ ಪಟ್ಟು ಬಿಡದ 70ರ ಮುತ್ತಪ್ಪ ಅವರ ಶೌರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಪಘಾತ ನಡೆಸಿ ತಪ್ಪಿಸಿಕೊಂಡು ಹೊರಟಿದ್ದವನನ್ನು ಸುಮೋ ಚಾಲಕ ಆ ಇಳಿವಯಸ್ಸಿನಲ್ಲೂ ಬೆನ್ನುಹತ್ತಿದ್ದೇ ರೋಚಕ. ಅವರು ಸ್ಕೂಟರ್‌ನ ಹಿಂಬದಿ ಹಿಡಿಕೆ ಹಿಡಿದು ಜೋತುಬಿದ್ದಿದ್ದರೂ ಒಂದೂವರೆ ಕಿ.ಮೀ. ವರೆಗೆ ಎಳೆದೊಯ್ದ ಪಾಪಿಯ ಕೃತ್ಯಕ್ಕೆ ಎಲ್ಲೆಡೆಯಿಂದ ಆಕ್ರೋಶ, ಛೀಮಾರಿಗಳು ಕೇಳಿಬಂದಿವೆ. ಇನ್ನು ಮುತ್ತಪ್ಪ ಅವರ ಸಾಹಸಕ್ಕೆ (Brave hunt) ಮೆಚ್ಚುಗೆ ವ್ಯಕ್ತವಾಗಿದ್ದು, ಸ್ಕೂಟರ್ ಸವಾರನ ಕ್ರೌರ್ಯಕ್ಕಿಂತ ಇವರ ಶೌರ್ಯವೇ ಮೇಲಾಯಿತು ಎಂದು ಪ್ರಶಂಸೆ ವ್ಯಕ್ತಪಡಿಸಲಾಗಿದೆ.
ಭಯದಿಂದ ಹೀಗೆ ಮಾಡಿಬಿಟ್ಟೆ ಎಂದ ಸಾಹಿಲ್
ಇನ್ನು ತಾನು ಆ ವಯೋವೃದ್ಧರನ್ನು ಒಂದೂವರೆ ಕಿ.ಮೀ. ದರದರನೇ ಎಳೆದೊಯ್ದಿದ್ದು, ಯಾವುದೇ ಕೆಟ್ಟ ಉದ್ದೇಶದಿಂದ ಅಲ್ಲ, ಭಯದಿಂದ ಎಂದು ಸ್ಕೂಟರ್ ಸವಾರ ಸಾಹಿಲ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈತನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.
ಯುನೈಟೆಡ್ ಅಸೋಸಿಯೇಷನ್‌ನಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಸಾಹಿಲ್, ಟಾಟಾ ಸುಮೋಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲಿದ್ದ ಸಾರ್ವಜನಿಕರು ಏನು ಮಾಡುತ್ತಾರೋ ಎಂದು ಭಯಪಟ್ಟು ತಪ್ಪಿಸಿಕೊಳ್ಳುವಾಗ ಇಷ್ಟೆಲ್ಲಾ ಆಗಿದೆ ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಕೈ-ಕಾಲುಗಳಿಗೆ ಗಾಯ
ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಪರಾರಿ ಆಗುತ್ತಿದ್ದ ಸವಾರರನ್ನು ತಡೆಯಲು ಹೋದ 70ರ ವೃದ್ಧ ಮುತ್ತಪ್ಪರನ್ನು ವಿಜಯನಗರದ ಗಾಯತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟಾರ್ ರೋಡ್‌ನಲ್ಲಿ ಒಂದೂವರೆ ಕಿ.ಮೀ. ದರದರನೆ ಎಳೆದೊಯ್ದಿದ್ದರಿಂದ ಅವರ ಕಾಲಿನ ಮಂಡಿ ಚಿಪ್ಪಿಗೆ ತೀವ್ರ ಗಾಯಗಳಾಗಿದ್ದು, ಕೈ- ಕಾಲು, ಸೊಂಟದ ಭಾಗದ ಚರ್ಮ ಕಿತ್ತು ಹೋಗಿದೆ. ವೈದ್ಯರು ಎಕ್ಸ್ ರೇ ಮಾಡಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಎಕ್ಸ್ ರೇ ವರದಿಗಾಗಿ ಕಾಯುತ್ತಿದ್ದು, ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ಮುತ್ತಪ್ಪರ ಧೈರ್ಯಕ್ಕೆ ಸಚಿವ ಸೋಮಣ್ಣ ಮೆಚ್ಚುಗೆ
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಟಾಟಾ ಸುಮೋ ಚಾಲಕ ಮುತ್ತಪ್ಪರ ಆರೋಗ್ಯ ವಿಚಾರಿಸಲು ಗಾಯತ್ರಿ ಆಸ್ಪತ್ರೆಗೆ ಸಚಿವ ವಿ. ಸೋಮಣ್ಣ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು, ಮುತ್ತಪ್ಪ ಅವರು ತುಂಬಾ ಧೈರ್ಯವಂತ ಚಾಲಕ. ಪೊಲೀಸರಿಗೆ ಹೇಳಿದ್ದರೆ ಆತನನ್ನು ಹಿಡಿಯುತಿದ್ದರು. ಆದರೆ 71 ವರ್ಷ ವಯಸ್ಸಾಗಿದ್ದರೂ, ಆತನನ್ನು ಹಿಡಿಯಲು ಮನಸ್ಸು ಮಾಡಿದ್ದಾರೆ. ಒಂದೂವರೇ ಕಿ.ಮೀ. ವರೆಗೆ ಆತನನ್ನು ಎಳೆದೊಯ್ಯಲಾಗಿದೆ. ಸರ್ಕಾರವೇ ಮುತ್ತಪ್ಪ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಸಲಿದೆ. ಮುತ್ತಪ್ಪ ಆರೋಗ್ಯವಾಗಿದ್ದು, ಸಣ್ಣ-ಪುಟ್ಟ ತರಚು ಗಾಯಗಳಾಗಿವೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಭೇಟಿ
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಸ್ಕೂಟರ್ ಚಾಲಕನನ್ನು ವಶಕ್ಕೆ ಪಡೆದಿದ್ದೇವೆ. ಆತನಿಗೆ ಏಟು ಬಿದ್ದಿದ್ದರಿಂದ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣವನ್ನು ವಿಜಯನಗರ ಸಂಚಾರಿ ಪೊಲೀಸ್ ಠಾಣೆ ಹಾಗೂ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪಘಾತ ಹಾಗೂ ಮುತ್ತಪ್ಪರನ್ನು ಅಮಾನವೀಯವಾಗಿ ಎಳೆದೊಯ್ದ ಘಟನೆ ಸಂಬಂಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ | Brave hunt : ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಪರಾರಿ; ತಡೆಯಲು ಹೋದ 70ರ ವೃದ್ಧನನ್ನು ರಸ್ತೆಯಲ್ಲಿ ಒಂದೂವರೆ ಕಿ.ಮೀ. ದರದರನೆ ಎಳೆದೊಯ್ದ!