ಬೆಂಗಳೂರು: ಒಂದೆಡೆ ಸಿನಿಮೀಯ ಚೇಸಿಂಗ್, ಇನ್ನೊಂದೆಡೆ ಆ ಸ್ಕೂಟರ್ ಸವಾರನ ಕ್ರೂರತೆಯನ್ನು ತೋರಿಸುವ ಪ್ರಕರಣ ಇದಾಗಿದೆ. ರಾಂಗ್ ರೂಟ್‌ನಲ್ಲಿ ಬಂದು ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿ ಆಗುತ್ತಿದ್ದ ಬೈಕ್ ಸವಾರರನ್ನು ಆ ಸುಮೋ ಚಾಲಕ ಧೈರ್ಯದಿಂದ (Brave hunt) ಹಿಡಿಯಲು ಹೋಗಿದ್ದು, ಸ್ಕೂಟರ್ ಹಿಂಬದಿ ಹಿಡಿಕೆಯನ್ನು ಹಿಡಿದು ನೆಲಕ್ಕೆ ಬಿದ್ದಿದ್ದರೂ ಬರೋಬ್ಬರಿ 1.೫ ಕಿ.ಮೀ ಹೆಚ್ಚು ದೂರಕ್ಕೆ ಎಳೆದೊಯ್ದಿದ್ದಾನೆ. ಕೊನೆಗೆ ಸಾರ್ವಜನಿಕರು ಅಡ್ಡಗಟ್ಟಿ ಆತನನ್ನು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಇದೀಗ ಈ ವಿಡಿಯೊ ಸಖತ್ ವೈರಲ್ ಆಗಿದ್ದು, ಸಾರ್ವಜನಿಕರು ಸ್ಕೂಟರ್ ಸವಾರನ ನಿರ್ದಯಿ ವ್ಯಕ್ತಿತ್ವಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಇಲ್ಲಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಟಾಟಾ ಸುಮೋಗೆ ಸ್ಕೂಟರ್ ಚಾಲಕ ಸಾಹಿಲ್ (25) ಡಿಕ್ಕಿ ಹೊಡೆದಿದ್ದ. ಡ್ರೈವರ್ ಮುತ್ತಪ್ಪ (71) ಪ್ರಶ್ನಿಸುತ್ತಿದ್ದಂತೆ ಸ್ಕೂಟರ್ ಹತ್ತಿ ಪರಾರಿ ಆಗಲು ಸಾಹಿಲ್ ಯತ್ನಿಸಿದ್ದ. ಈ ವೇಳೆ ಆತನನ್ನು ಹಿಡಿಯಲು ಮುತ್ತಪ್ಪ ಮುಂದಾಗಿದ್ದಾರೆ. ಸ್ಕೂಟರ್‌ನ ಹಿಂಭಾಗದ ಹಿಡಿಕೆಯನ್ನು ಹಿಡಿದಿದ್ದರೂ ಕ್ಯಾರೆ ಎನ್ನದೆ ಸಾಹಿಲ್ ಸ್ಕೂಟರ್ ಓಡಿಸಿಕೊಂಡು ಹೋಗಿದ್ದಾನೆ.
ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ದರದರನೆ ಎಳೆದೊಯ್ದಿದ್ದಾನೆ. ಬಳಿಕ ಇತರೆ ವಾಹನ ಸವಾರರು ಬೈಕ್ ಸವಾರನನ್ನು ಬೆನ್ನಟ್ಟಿದ್ದಾರೆ. ಅಲ್ಲೇ ಹೋಗುತ್ತಿದ್ದ ಆಟೋವೊಂದು ಸ್ಕೂಟರ್‌ಗೆ ಅಡ್ಡಲಾಗಿ ನಿಂತಿತು. ನೋಡ ನೋಡುತ್ತಿದ್ದಂತೆ ಜನ ಸೇರಿದರು. ಆತನನ್ನು ಪ್ರಶ್ನೆ ಮಾಡಿದರು. ಆದರೆ, ಸವಾರ ಸಾಹಿಲ್ ಯಾವುದಕ್ಕೂ ಸರಿಯಾಗಿ ಉತ್ತರಿಸದೆ ಮೊಬೈಲ್ ನೋಡುತ್ತಾ ಅಸಡ್ಡೆ ತೋರಿದ್ದಾನೆ. ಇದು ಸಾರ್ವಜನಿಕರನ್ನು ಮತ್ತಷ್ಟು ರಚ್ಚೆಗೊಳಿಸಿದೆ.
ಇದೇ ವೇಳೆ ೧.೫ ಕಿ.ಮೀ.ನಷ್ಟು ದೂರ ಆ ಟಾರ್ ರಸ್ತೆಯಲ್ಲಿ ತೇಯ್ದು ಬಂದರೂ ವೃದ್ಧ ಮುತ್ತಪ್ಪ ಅವರು ಎದ್ದು ನಿಂತು ಆತನನ್ನು ಪ್ರಶ್ನಿಸಿದ್ದಾರೆ. ಜನರೂ ಸಹ ಸಾಹಿಲ್ ಕೃತ್ಯಕ್ಕೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದ್ಯಾವುದಕ್ಕೂ ಆತ ಸರಿಯಾಗಿ ಉತ್ತರ ನೀಡದೆ ಇರುವುದು ಸಾರ್ವಜನಿಕರ ಆಕ್ರೋಶ ಹೆಚ್ಚಲು ಕಾರಣವಾಗಿದೆ. ಈ ಕಾರಣಕ್ಕಾಗಿ ಸಾಹಿಲ್‌ನನ್ನು ಹಿಡಿದು ಜನರೇ ಥಳಿಸಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ವಿಜಯನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ವಾಹನ ಸವಾರರಿಂದ ಧರ್ಮದೇಟು ತಿಂದ ಬೈಕ್ ಸವಾರ ಸಾಹಿಲ್ ಹಾಗೂ ಮುತ್ತಪ್ಪ ಇಬ್ಬರನ್ನೂ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇಬ್ಬರಿಗೂ ನಗರದ ಗಾಯತ್ರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯಿಂದ ಸಾಹಿಲ್‌ನನ್ನು ಗೋವಿಂದರಾಜ ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಮುತ್ತಪ್ಪ ವಿಜಯಪುರ ಮೂಲದ ನಿವಾಸಿ ಆಗಿದ್ದು, ನಗರದ ಹೆಗ್ಗನಹಳ್ಳಿ ಬಳಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಗಾಯತ್ರಿ ಆಸ್ಪತ್ರೆಗೆ ಸಚಿವ ವಿ. ಸೋಮಣ್ಣ ಆಗಮಿಸಿ ಗಾಯಾಳು ಆರೋಗ್ಯವನ್ನು ವಿಚಾರಿಸಿದ್ದಾರೆ. ಜತೆಗೆ ಪೊಲೀಸರಿಗೆ ಬೈಕ್ ಸವಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ | Road Accident | ಪ್ರತ್ಯೇಕ ಕಡೆಗಳಲ್ಲಿ ನಡೆದ ಭೀಕರ ರಸ್ತೆ ಅಪಘಾತ; ಮೂವರು ಸ್ಥಳದಲ್ಲಿ ಮೃತ್ಯು