ಬೆಂಗಳೂರು: ಪೊಲೀಸ್ ವರ್ಗಾವಣೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುವುದಿಲ್ಲ ಎಂದು ನಾನು ಹೇಳುವುದಿಲ್ಲ. ವರ್ಗಾವಣೆಯನ್ನು ಗೃಹ ಮಂತ್ರಿ ಮಾಡುವುದಿಲ್ಲ. ಅದಕ್ಕಾಗಿ ಒಂದು ಸಮಿತಿ ಇರುತ್ತದೆ. ಆದರೆ, ಮಂತ್ರಿಯ ಪ್ರಭಾವ ಇದ್ದೇ ಇರುತ್ತದೆ. ಪೊಲೀಸ್ ವರ್ಗಾವಣೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂಬುದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗೊತ್ತಾಗಿದ್ದಕ್ಕೇ ಆರೋಪ ಮಾಡಿದ್ದಾರೆ. ಈಗ ಪೊಲೀಸ್ ಇಲಾಖೆಯಲ್ಲಿರುವವರೇ ವರ್ಗಾವಣೆಗೆ ಭಾರಿ ಹಣ ಕೊಟ್ಟಿದ್ದಾಗಿ ಹೇಳಿದ್ದಾರೆ. ಅಲ್ಲದೆ, ಇದೊಂದು ಕ್ಲಾಸ್ಟಿ ಸರ್ಕಾರ ಎಂದೂ ಹೇಳಿದ್ದಾಗಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Former Home Minister Araga Jnanendra) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಈಗ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಹಾಗೆ ಮಾಡಿಲ್ಲವಾದರೆ ಸಾಬೀತು ಮಾಡಲಿ. ಎರಡೇ ತಿಂಗಳಿನಲ್ಲಿ ಈ ರೀತಿಯ ವರ್ತನೆಗೆ ಏನು ಹೇಳುವುದು? ಇಂಥದ್ದನ್ನಲ್ಲ ಎವಿಡೆನ್ಸ್ ಇಟ್ಟುಕೊಂಡು ಯಾರಾದರೂ ಮಾಡುತ್ತಾರಾ? ಲಂಚವನ್ನು ಗೊತ್ತಾಗದಂತೆ ತೆಗೆದುಕೊಂಡಿರುತ್ತಾರೆ ಎಂದು ಹೇಳಿದರು.
ರಾಜ್ಯದ ಸಮಸ್ಯೆ ಬಗ್ಗೆ ನಾವು ಧ್ವನಿ ಎತ್ತಿದ್ದೇವೆ. ಆಡಳಿತ ಪಕ್ಷದವರು 135 ಸ್ಥಾನವನ್ನು ಗೆದ್ದಿರುವ ಮದದಿಂದ ನಡೆದುಕೊಳ್ಳುತ್ತಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ಸ್ಪೀಕರ್ ಸ್ಥಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇನ್ನು ಸ್ಪೀಕರ್ ಯು.ಟಿ. ಖಾದರ್ ಅವರು ಒಂದು ಪಕ್ಷದ ಔತಣಕೂಟಕ್ಕೆ ಹೋಗುತ್ತಾರೆ ಎಂದರೆ ಏನರ್ಥ? ಅವರಿಗೆ ಈ ಬಗ್ಗೆ ನಾನೇ ಪ್ರಶ್ನೆ ಮಾಡಿದೆ. ಆದರೆ, ಅವರು ಹೇಳಿದ್ದು ಏನು? ಸಿಎಂ ಕರೆದಿದ್ದಕ್ಕೆ ಹೋದೆ, ನೀವೂ ಕರೆಯಿರಿ ಬರುತ್ತೇನೆ ಎಂದು ಹೇಳುತ್ತಾರೆ. ಹೀಗೆ ಮಾಡಿದರೆ ಹೇಗೆ? ಎಂದು ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Power Point with HPK : ಭಯೋತ್ಪಾದಕರಿಗೆ ಇದು ನಮ್ಮ ಸರ್ಕಾರ ಎಂಬ ಭಾವನೆ ಬಂದಿದೆ: ಆರಗ ಜ್ಞಾನೇಂದ್ರ
ಸಿಎಂ ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ ಅಲ್ಲ
ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯ ಮಾತುಗಾರ. ಅವರು ಒಂದು ಸುಳ್ಳನ್ನು ಸಹ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಅವರು ಹೇಳುವ ರೀತಿಯನ್ನು ನೋಡಿದಾಗ ಸತ್ಯ ಎಂದು ಅನ್ನಿಸುತ್ತದೆ. ಆದರೆ, ಆಳವಾಗಿ ನೋಡಿದಾಗ ಅದು ಸುಳ್ಳು ಎಂದು ಗೊತ್ತಾಗುತ್ತದೆ. ಅವರು ಒಬ್ಬ ಒಳ್ಳೆಯ ಮಾತುಗಾರ ಎಂದು ಹೇಳಲು ಬಯಸುತ್ತೇನೆ. ಆದರೆ, ಉತ್ತಮ ಆಡಳಿತಗಾರ ಅಲ್ಲ ಎಂಬುದು ಗೊತ್ತಾಗುತ್ತದೆ. ಅವರ ಬಜೆಟ್ ನೋಡಿದರೇ ಇದು ಗೊತ್ತಾಗುತ್ತದೆ. 34 ಸಾವಿರ ಕೋಟಿ ರೂಪಾಯಿ ಎಸ್‌ಟಿ, ಎಸ್‌ಟಿಗೆ ಕೊಡುತ್ತೇನೆ ಎಂದು ತೋರಿಸಿದ್ದಾರೆ. ಅದರಲ್ಲಿ 17 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗೆ ಕೊಟ್ಟಿದ್ದಾರೆ. ಇದೊಂದು ದೊಡ್ಡ ಅಪಚಾರ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಲೋಕಸಭೆಯಲ್ಲಿ ನಮ್ಮ ಪಕ್ಷಕ್ಕೆ ಗೆಲುವು
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆಯಾಗಿದೆ. ನಮ್ಮ ಮತದಾರರು ಎರಡೂ ಕಡೆಗೆ ಒಂದೊಂದು ರೀತಿಯಲ್ಲಿ ಯೋಚನೆ ಮಾಡುತ್ತಾರೆ. ಅವರು ಪ್ರಬುದ್ಧರಿದ್ದಾರೆ. ಇನ್ನು ದೇಶದ ದೃಷ್ಟಿಯಿಂದ ಯೋಚನೆ ಮಾಡುತ್ತಾರೆ. ಕಳೆದ 9 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ಧಿಯ ಪಥದತ್ತ ಮುನ್ನಡೆಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮವಾಗಿ ಆಡಳಿತ ನಡೆಸಿದ್ದಾರೆ. ಜನರಿಗೆ ಉಚಿತ ವ್ಯಾಕ್ಸಿನ್ ನೀಡಿದ್ದಾರೆ. ಇಂದು ನಮ್ಮ ದೇಶದ ಜಿಡಿಪಿಯಲ್ಲಿ ಹೆಚ್ಚಳವಾಗಿದೆ. ಶತ್ರು ದೇಶದವರು ನಮ್ಮ ಮೇಲೆ ಕಣ್ಣೆತ್ತಿ ನೋಡಲು ಸಾಧ್ಯವಿಲ್ಲ. ಅವರ ದೇಶಕ್ಕೇ ನುಗ್ಗಿ ಹೊಡೆಯಲಾಗಿದೆ. ಅಯೋಧ್ಯೆ ನಿರ್ಮಾಣ, ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ತಲಾಖ್ ದೌರ್ಜನ್ಯಕ್ಕೆ ತಡೆ ಒಡ್ಡಲಾಗಿದೆ. ಮೋದಿ ಸರ್ಕಾರ ಬಂದ ಮೇಲೆ ಬಾಂಬ್ ದಾಳಿ ಕಡಿಮೆ ಆಗಿದೆ. ಹೀಗಾಗಿ ಜನರು ನರೇಂದ್ರ ಮೋದಿ ಅವರನ್ನು ಪಕ್ಷ ಮೀರಿ ಒಪ್ಪಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಹರಿಪ್ರಕಾಶ್ ಕೋಣೆಮನೆ ಅವರೊಂದಿಗೆ ಆರಗ ಜ್ಞಾನೇಂದ್ರ ಅವರ ನೇರ ಮಾತು; ವಿಡಿಯೊ ಇಲ್ಲಿದೆ
ಅಡಿಕೆ ಕಾರ್ಯಪಡೆ ರಚನೆಗೆ ಸಿಎಂಗೆ ಮನವಿ ಮಾಡಿರುವೆ
ಎಲೆ ಚುಕ್ಕೆ ರೋಗ ಹಾಗೂ ಹಳದಿ ರೋಗವು ನಮ್ಮ ರಾಜ್ಯದಲ್ಲಿ ವ್ಯಾಪಕವಾಗಿ ಬಾಧಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಮಲೆನಾಡಿನಲ್ಲಿ ಸಮಸ್ಯೆ ಹೆಚ್ಚಿದೆ. ಈ ಕಾರಣಕ್ಕಾಗಿ ವಿಶೇಷ ಅಧ್ಯಯನ ಮಾಡಲು ನಮ್ಮ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರವು 10 ಕೋಟಿ ರೂಪಾಯಿಯನ್ನು ಕಳೆದ ಬಜೆಟ್‌ನಲ್ಲಿ ತೆಗೆದಿರಿಸಿತ್ತು. ಆದರೆ, ಈಗ ಅದನ್ನು ಸಿದ್ದರಾಮಯ್ಯ ಅವರ ಸರ್ಕಾರ ತೆಗೆದುಹಾಕಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಚಾರವನ್ನು ತಿಳಿಸಿದ್ದೇವೆ. ಇದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲದರ ಹಿಂದೆ ಅಡಿಕೆ ಟಾಸ್ಕ್‌ಫೋರ್ಸ್ ಬಹಳವಾಗಿಯೇ ಕೆಲಸ ಮಾಡಿದೆ. ಈಚೆಗೆ ಅಡಿಕೆ ಬೆಳೆ ಬೆಳೆಯುವ ಭಾಗದ ಶಾಸಕರ ಸಭೆ ನಡೆಸಿದ್ದೇವೆ. ಅಲ್ಲಿ ಪಕ್ಷಾತೀತ ತೀರ್ಮಾನವನ್ನು ಕೈಗೊಂಡಿದ್ದೇವೆ. ಅಡಿಕೆ ಪಕ್ಷವನ್ನು ಮಾಡಬೇಕು ಎಂಬುದು ನಮ್ಮ ಇಂಗಿತವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಮೇಲೆ ಅಡಿಕೆ ಕಾರ್ಯಪಡೆ ಬರ್ಖಾಸ್ತು ಆಗಿದೆ. ಈ ಸಂಬಂಧ ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅಡಿಕೆ ಕಾರ್ಯಪಡೆ ಎಂಬುದು ಇರಬೇಕು. ಯಾರನ್ನೇ ಬೇಕಾದರೂ ಅದಕ್ಕೆ ನೇಮಿಸಿ. ಆದರೆ, ಅಡಿಕೆ ಬಗ್ಗೆಯೇ ಯೋಚನೆ ಮಾಡುವ ವಿಂಗ್ ಸರ್ಕಾರದ ಪರವಾಗಿ ಇರಬೇಕು. ಜತೆಗೆ ನಮಗೆ ದೊಡ್ಡ ತೆರಿಗೆಯನ್ನು ತಂದು ಕೊಡುವ ಬೆಳೆಯಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಇದನ್ನೂ ಓದಿ: Power Point with HPK : ಕಾಂಗ್ರೆಸ್ಸಿಗರ ಮಕ್ಕಳ, ಮೊಮ್ಮೊಕ್ಕಳ ವಿಡಿಯೊ ಮಾಡಿದ್ರೆ ಸುಮ್ಮನಿರ್ತಾರಾ?: ಆರಗ
ಅಡಿಕೆಯಿಂದ ಕ್ಯಾನ್ಸರ್ ಬಾರದು
ನಾನು ಸಂಶೋಧನಾ ವರದಿಯೊಂದನ್ನು ತರಿಸಿದ್ದೆ. ಅದರಲ್ಲಿ ಅಡಿಕೆಯಿಂದ ಕ್ಯಾನ್ಸರ್ ಬಾರದು. ಅದರಲ್ಲಿ ಔಷಧೀಯ ಗುಣಗಳಿವೆ ಎಂಬುದು ಸಾಬೀತಾಗಿದೆ. ಅದನ್ನು ನಾವು ಸುಪ್ರೀಂ ಕೋರ್ಟ್ ಮುಂದೆ ಸಹ ಇಟ್ಟಿದ್ದೆವು. ಒಟ್ಟಾರೆಯಾಗಿ ನಾವು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಶ್ರಮ ಹಾಕುತ್ತಿದ್ದೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.