ಬೆಳಗಾವಿ: ಮೂರು ರಾಜ್ಯಗಳ ಫಲಿತಾಂಶ ಬಂದಿದ್ದು, ಬಿಜೆಪಿ ವಿಜಯಪತಾಕೆ ಹಾರಿಸಿದೆ. ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬಂದಾಗ 3 ಲಕ್ಷ ಜನ ನಿಂತು ಕಾರ್ಯಕ್ರಮ ವೀಕ್ಷಿಸಿದ್ದಾರೆ. ರಾಹುಲ್ ಗಾಂಧಿಯಂತಹ ಬಚ್ಚಾನನ್ನು ಕಟ್ಟಿಕೊಂಡು ಕಾಂಗ್ರೆಸ್ ಏನು ಮಾಡಲು ಸಾಧ್ಯ? ಸಿದ್ದರಾಮಯ್ಯನವರೇ ನೀವು ಕ್ಷೇತ್ರ ಬದಲಿಸುತ್ತಿರುವುದು ಏಕೆ ಎಂದು ನೀವು ಸವದತ್ತಿ ಯಲ್ಲಮ್ಮನ ಮೇಲೆ ಆಣೆ ಮಾಡಿ ಹೇಳಬೇಕು. ಜನ ನಿಮ್ಮನ್ನು ತಿರಸ್ಕಾರ ಮಾಡುತ್ತಾರೆ ಎಂಬ ಭಯವೇ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijay Sankalpa Yatre) ಮಾತನಾಡಿದ ಅವರು, ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಸಮವಾಗಿದೆ. ಇಲ್ಲಿಯೂ ಸಹ ಬಿಜೆಪಿಯನ್ನು ಗೆಲ್ಲಿಸಿದರೆ ಭಾರತ ಕಾಂಗ್ರೆಸ್ ಮುಕ್ತ ಆಗಲಿದೆ. ಕಾಂಗ್ರೆಸ್‌ನವರು ಜಾತಿಯ ವಿಷ ಬೀಜ ಬಿತ್ತಿ ಚುನಾವಣೆ ಮಾಡುತ್ತಿದ್ದರು, ಅದೆಲ್ಲವೂ ಕೊನೆಗೊಳ್ಳಲಿದೆ. ಮತ್ತೊಮ್ಮೆ ನಾವು ಅಧಿಕಾರಕ್ಕೆ ಬರುತ್ತೇವೆ. 140ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗುತ್ತದೆ. ಸಿದ್ದರಾಮಯ್ಯನವರೇ ನಿಮ್ಮ ಆಟ ಕೊನೆಯಾಗಲಿದೆ. ನೀವು ಪ್ರಧಾನಿಯನ್ನು ಟೀಕಿಸುವುದನ್ನು ಬಿಡಬೇಕು. ನಿಮ್ಮ ರಾಜಕೀಯ ದೊಂಬರಾಟ ಮುಗಿದಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡಲಿಲ್ಲ. ಹೀಗಾಗಿ ಅವರ ಅಂತ್ಯ ಸಂಸ್ಕಾರ ಮುಂಬೈನಲ್ಲಿ ನಡೆಯಿತು. ನಾವು ಈಗಾಗಲೇ ಸವದತ್ತಿ ಕ್ಷೇತ್ರ ಗೆದ್ದು ಆಗಿದೆ, ನೀವು ಅಕ್ಕಪಕ್ಕದ ಕ್ಷೇತ್ರಕ್ಕೆ ಹೋಗಿ ಶ್ರಮಿಸಿ ಎಂದು ಕಾಂಗ್ರೆಸ್‌ಗೆ ಹೇಳಿದ ಅವರು, ಪ್ರಧಾನಿ ಮೋದಿ ಒಂದೂ ದಿನ ರಜೆ ಮಾಡಿಲ್ಲ, ವಿಶ್ರಾಂತಿ ಪಡೆದಿಲ್ಲ. ಕಾಂಗ್ರೆಸ್ ದುರಾಡಳಿತವನ್ನು ಇತರ ಕ್ಷೇತ್ರದ ಮತದಾರರಿಗೆ ತಿಳಿ ಹೇಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದನ್ನೂ ಓದಿ | Karnataka Election : ರಾಹುಲ್ ಮದುವೆ ಆಗದಿರುವುದಕ್ಕೆ ಏನು ಕಾರಣ? ವಿದಾದಾತ್ಮಕ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್
ಸವದತ್ತಿ ಜನರ ಜನಬೆಂಬಲ ನೋಡಿ ನನಗೆ ಖುಷಿಯಾಗಿದೆ. ನಿಮ್ಮ ಅಭಿಮಾನಕ್ಕೆ ಋಣಿ ಆಗಿರುವೆ ಎಂದ ಅವರು, ಸವದತ್ತಿಯಲ್ಲಿ ಅಭ್ಯರ್ಥಿ ಯಾರು ಆಗಬೇಕು ಎಂದು ಚರ್ಚಿಸುತ್ತೇವೆ, ನಿಮ್ಮ ಸಲಹೆ ಪಡೆಯುತ್ತೇವೆ. ಅಭ್ಯರ್ಥಿ ಯಾರೇ ಆದರೂ ನೀವು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸುಳ್ಳಿನ ಪಕ್ಷ ಎಂದ ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ನಿಮ್ಮ ಧ್ವನಿ ಎದುರು ಪ್ರಜಾ ಧ್ವನಿ ಕೇಳುತ್ತಿಲ್ಲ. ಕಾಂಗ್ರೆಸ್ ಗ್ಯಾರಂಟಿ ಎನ್ನುತ್ತಿದ್ದಾರೆ. ಆದರೆ ಈ ಬಾರಿ ಮತ್ತೊಮ್ಮೆ ಅವರು ಮನೆಗೆ ಹೋಗುವುದು ಗ್ಯಾರಂಟಿ. ಬರೀ ಸುಳ್ಳುಗಳನ್ನು ಹೇಳುವ ಪಕ್ಷ ಕಾಂಗ್ರೆಸ್ ಅಗಿದ್ದು, ರಾಜಸ್ಥಾನದಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳಿ ಇಲ್ಲಿಯವರೆಗೂ ಮಾಡಿಯೇ ಇಲ್ಲ. ಹೀಗಾಗಿ ಅದು ಸುಳ್ಳಿನ ಪಕ್ಷ, ನಾವು ಏನು ಹೇಳಿದ್ದೇವೆಯೋ ಅದನ್ನೇ ಮಾಡಿದ್ದೇವೆ ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ಇರದಿರುವುದನ್ನು ಸಹ ನಾವು ಮಾಡಿದ್ದೇವೆ. ಈಗ ರಾಹುಲ್ ಗಾಂಧಿ ವಿದೇಶಗಳಿಗೆ ಹೋಗಿ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಭಾಷಣ ಮಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಪಾದಯಾತ್ರೆ ಮಾಡಿದ್ದೀರಿ, ಆಗ ಪ್ರಜಾಪ್ರಭುತ್ವ ಇರಲಿಲ್ಲವೇ? ಕಾಶ್ಮೀರದ ಹಿಮದಲ್ಲಿ ಆಟ ಆಡಿ ಬಂದರು, ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದ ಈಗ ಅಲ್ಲಿ ಸುರಕ್ಷತೆ ಇದೆ ಎಂದು ಹೇಳಿದರು.
ನಾವು ಪಿಎಫ್‌ಐ ಬ್ಯಾನ್ ಮಾಡಿದ್ದೇವೆ, ನೀವು ತುಕಡೆ ಗ್ಯಾಂಗ್ ಇಟ್ಟುಕೊಂಡಿದ್ದೀರಿ, ಮಹದಾಯಿ ನೀರು ಒಂದು ಹನಿ ಸಹ ಬಿಡಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಆದರೆ, ನಾವು ಇದೀಗ ನೀರು ಬರುವ ಹಾಗೆ ಮಾಡಿದ್ದೇವೆ. ಸಾಮಾಜಿಕ ಬದ್ಧತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ದೇಶದಲ್ಲಿ ದಲಿತರು, ಅಂಬೇಡ್ಕರ್‌ಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್, ನೀವು ಕಾಂಗ್ರೆಸ್‌ಗೆ ಹೋಗಿ ಕಾಂಗ್ರೆಸ್ ತರ ಆಗಿದ್ದೀರಿ. ಮೊದಲು ಖರ್ಗೆ, ನಂತರ ಮುನಿಯಪ್ಪ ಹಾಗೂ ಪರಮೇಶ್ವರ ಮುಗಿಸುವ ಕೆಲಸ ಮಾಡಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಿಸಿದರು.
ಇದನ್ನೂ ಓದಿ | Aam Aadmi Party: ಎಎಪಿ ಭ್ರಷ್ಟಾಚಾರ ಸಹಿಸಲ್ಲ, ನನ್ನ ಮಗ ಭ್ರಷ್ಟಾಚಾರ ಮಾಡಿದರೂ ಜೈಲಿಗೆ ಹಾಕುವೆ: ಅರವಿಂದ್ ಕೇಜ್ರಿವಾಲ್
ಮಾಡಾಳ್ ವಿರೂಪಾಕ್ಷಪ್ಪ ಮಾತ್ರ ಅಷ್ಟೇ ಅಲ್ಲ, ಸಿದ್ದರಾಮಯ್ಯನೂ ನನ್ನ ಆಪ್ತ
ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ ಸಂಬಂಧ ಶಾಸಕನ ರಾಜೀನಾಮೆಗೆ ಕಾಂಗ್ರೆಸ್ ನಾಯಕರ ಪ್ರತಿಭಟನೆ ವಿಚಾರ ಬೈಲಹೊಂಗಲ ಪಟ್ಟಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪ್ರಕರಣದಲ್ಲಿ ಈಗಾಗಲೇ ಲೋಕಾಯುಕ್ತ ಸಮಗ್ರ ತನಿಖೆ ಮಾಡಿದೆ. ಕಾನೂನು ಪ್ರಕಾರ ಯಾರ ಮೇಲೆ ಕ್ರಮ ಕೈಗೊಳ್ಳಬೇಕೊ ಆ ಕೆಲಸವನ್ನು ಲೋಕಾಯುಕ್ತ ಮಾಡಲಿದೆ ಎಂದು ತಿಳಿಸಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಯಡಿಯೂರಪ್ಪ ಆಪ್ತ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತ್ರ ಅಷ್ಟೇ ಅಲ್ಲ, ಸಿದ್ದರಾಮಯ್ಯನೂ ನನ್ನ ಆಪ್ತ. ಎಲ್ಲರೂ ನನ್ನ ಆಪ್ತರೇ, ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.