ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿಯಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ (BS Yediyurappa) ಶುಕ್ರವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದೇ ವೇಳೆ 409 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. 409 ವಿದ್ಯಾರ್ಥಿಗಳಿಗೆ ಪದವಿ, 101 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 23 ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು. 9 ಪದವಿ ವಿದ್ಯಾರ್ಥಿಗಳು 15 ಚಿನ್ನದ ಪದಕ ಪಡೆದಿದ್ದು, 14 ಎಂ.ಎಸ್ಸಿ., 7 ಪಿ.ಎಚ್.ಡಿ. ವಿದ್ಯಾರ್ಥಿಗಳು ಚಿನ್ನದ ಸಾಧನೆ ಮಾಡಿದ್ದಾರೆ. ಘಟಿಕೋತ್ಸವದಲ್ಲಿ ಒಟ್ಟು 37 ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಮಾಜಿ ಸಿಎಂ ಡಾ.ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಗೌರವ ಡಾಕ್ಟರೇಟ್ ಪದವಿ ಪಡೆಯಲು ಹರ್ಷವೆನಿಸುತ್ತಿದೆ. ನನ್ನ ಕರ್ಮ ಭೂಮಿ, ಪುಣ್ಯಭೂಮಿಯಲ್ಲಿ ಈ ಗೌರವ ಪಡೆಯುತ್ತಿರುವುದು ನನ್ನ ಸುದೈವ. ರೈತನ ಸಂಕಷ್ಟ ಹತ್ತಿರದಿಂದ ನೋಡಿದ್ದೇನೆ, ಹೀಗಾಗಿ ಪ್ರತ್ಯೇಕ ಕೃಷಿ ಬಜೆಟ್, ಭೂ ಹಕ್ಕು ಸರಳೀಕರಣ, ನಾನಾ ಯೋಜನೆ ಅನುಷ್ಠಾನ ಮಾಡಿದ್ದೆ ಎಂದು ಹಿಂದಿನ ಹೋರಾಟಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ | BY Vijayendra : ಅಮಿತ್ ಶಾ- ವಿಜಯೇಂದ್ರ ಭೇಟಿ ವೇಳೆ ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ?
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿ, ಕೃಷಿ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಕಾರ್ಯನಿರತವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಕೃಷಿ ಪಾತ್ರ ಮಹತ್ತರವಾದುದು, ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಿರುವುದು ಅಭಿನಂದನೀಯ. ಅವರು ದೇಶ, ಮಾನವ ಹಿತಕ್ಕಾಗಿ ಇದೇ ರೀತಿ ಕೆಲಸ ಮಾಡಲಿ. ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಶಿಕ್ಷಣದ ನಂತರ ನೀವು ಹೊಸ ಜೀವನಕ್ಕೆ ಕಾಲಿಡುತ್ತಿದ್ದೀರಿ, ಎಲ್ಲರೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗಬೇಕು. ವಿಶ್ವವಿದ್ಯಾಲಯದಲ್ಲಿ ಸ್ವಾವಲಂಬಿ ಜೀವನ ನಡೆಸುವ ಶಿಕ್ಷಣಕ್ಕೆ ಗಮನ ಹರಿಸಲಾಗುತ್ತಿದೆ. ರೈತರ ಅನುಭವ, ಜ್ಞಾನ ಶಿಕ್ಷಣದಲ್ಲಿ ಅಳವಡಿಸಿಕೊಂಡರೆ, ಅದರ ಲಾಭ ಕೃಷಿ ಕ್ಷೇತ್ರಕ್ಕೆ ಲಭಿಸುತ್ತದೆ. ದೇಶದಲ್ಲಿ ಗಿಡಮೂಲಿಕೆ ಹೇರಳವಾಗಿದೆ, ಕೃಷಿ ಕ್ಷೇತ್ರದಲ್ಲಿ ಐಟಿ ಕೊಡುಗೆ ಅಪಾರವಾದುದು ಎಂದು ಹೇಳಿದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಾತನಾಡಿ, ಯಡಿಯೂರಪ್ಪ ಅವರು ಮಂಡ್ಯದಿಂದ ಬಂದು ಶಿಕಾರಿಪುರವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಹೋರಾಟ ನಡೆಸಿ, ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಶಿವಮೊಗ್ಗದಲ್ಲಿ ಕೃಷಿ ವಿವಿ ಸ್ಥಾಪನೆಗೆ ಕಾರಣರಾಗಿರುವ ಅವರು ಅದೇ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯುತ್ತಿದ್ದಾರೆ. ಹೀಗಾಗಿ ನಾನು ಮಂಡ್ಯದವನಾಗಿ, ಮಂಡ್ಯ ಜಿಲ್ಲೆಯ ಸಚಿವನಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Politics : ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಫಿಕ್ಸಾಯ್ತಾ? ಬೊಮ್ಮಾಯಿ ಶಕ್ತಿ ಪ್ರದರ್ಶನವಾಯ್ತಾ?
ನಮ್ಮ ದೇಶ ಕೃಷಿ ಪ್ರದಾನವಾದುದು, ಕೃಷಿ ಲಾಭದಾಯಕ ಆಗಬೇಕಾದರೆ ಅದನ್ನು ಕಮರ್ಷಿಯಲ್ ಆಗಿ ನೋಡಬೇಕು. ಕೃಷಿಯಲ್ಲಿ ಏರು ಪೇರು ನೋಡುತ್ತಿದ್ದೇವೆ. ಕೃಷಿಗೆ ಜಿಡಿಪಿಯಲ್ಲಿ ಹಿನ್ನಡೆಯಾಗಿದೆ, ಹೀಗಾಗಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ ಎಂದ ಅವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.