Site icon Vistara News

BS Yediyurappa : ಅಪ್ಪ ಈಗಲೂ 25 ವರ್ಷದ ಯುವಕನಂತೆ, ಬೆಳಗ್ಗೆ 15 ನ್ಯೂಸ್‌ಪೇಪರ್‌ ಓದಿ ಆಯ್ತು!; ಮಗಳು ಅರುಣಾ ಅಭಿಮಾನದ ಮಾತು

Aruna devi

#image_title

ಶಿವಮೊಗ್ಗ: ʻʻಅಪ್ಪ ಈವಾಗಲೂ ಕೂಡಾ ೨೫ ವರ್ಷದ ಯುವಕನಂತೆ ಆಕ್ಟಿವ್‌ ಆಗಿದ್ದಾರೆ. ಇವತ್ತು ಬೆಳಗ್ಗೆ ಐದು ಗಂಟೆಗೇ ಎದ್ದಿದ್ದಾರೆ. ಅವರು ಇಡೀ ದಿನ ಓಡಾಡಿದರೂ ಏನೂ ಸುಸ್ತಾಗಲ್ಲʼ- ಹೀಗಂತ ಇಂದು (ಫೆ.೨೭) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ಪುತ್ರಿ ಅರುಣಾ ಅವರು ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಯಡಿಯೂರಪ್ಪ ಅವರ ಕನಸಾದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮದ ಸಂಭ್ರಮದಲ್ಲಿರುವ ಕುಟುಂಬದ ಒಬ್ಬೊಬ್ಬರೂ ಅಪ್ಪನ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ. ಅರುಣಾ ಅವರಂತೂ ಅಪ್ಪನ ದಿನಚರಿಯನ್ನು ಹೇಳುತ್ತಾ ಹೇಳುತ್ತಾ ಹೆಮ್ಮೆ ಖುಷಿ ಅನುಭವಿಸಿದರು.

ʻʻಅವರನ್ನು ನೋಡಿದರೆ ನಮಗೇ ಆಶ್ಚರ್ಯ ಆಗುತ್ತದೆ. ಅಪ್ಪ ಅವರು ಇನ್ನೂ ೨೫ ವರ್ಷದ ಯುವಕನ ಹಾಗೆ ಇದ್ದಾರೆ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ ಅವರು ಇವತ್ತು ಬೆಳಗ್ಗೆ ಐದು ಗಂಟೆಗೇನೇ ಎದ್ದಿದ್ದಾರೆ. ಬೆಳಗ್ಗೆ ಎದ್ದು ೧೫ ನ್ಯೂಸ್‌ ಪೇಪರ್‌ ಓದಿ ಆಗಿದೆ. ಆಡಂಬರವೇನೂ ಇಲ್ಲ. ನನ್ನ ಸಹೋದರಿ ಬೆಳಗ್ಗೆ ತಲೆಗೆ ಎಣ್ಣೆ ಇಟ್ಳು ಅಷ್ಟೆ. ಬೇಗ ಶವರ್‌ಗೆ ಹೋಗಿಬರ್ತೀನಿ. ಆಮೇಲೆ ತುಂಬಾ ಜನ ಮಾತನಾಡಿಸ್ಲಿಕೆ ಬರ್ತಾರೆ, ಪಬ್ಲಿಕನ್ನು ಮೀಟ್‌ ಮಾಡ್ಬೇಕು ಅಂತ ಹೇಳಿದ್ರು. ತಿಂಡಿ ವಿಚಾರದಲ್ಲಿರಬಹುದು ಎಲ್ಲದರಲ್ಲೂ ಅವರದ್ದು ಈಗಲೂ ೨೫ ವರ್ಷದ ಮನಸ್ಥಿತಿʼʼ ಎಂದು ಹೇಳಿದರು ಅರುಣಾ.

ಸುಸ್ತು ಅನ್ನೋದೇ ಇಲ್ಲ, ಹಾಗೆಲ್ಲ ಹೇಳ್ಬೇಡಿ ಅಂದ್ರಂತೆ ಬಿಎಸ್‌ವೈ

ಮೊನ್ನೆ ಬೆಂಗಳೂರಿನಲ್ಲಿ ಇಡೀ ದಿನ ಓಡಾಡೋದಿತ್ತು. ಆವಾಗ ನಾವು ʻಸ್ವಲ್ಪ ಕೂತು ರಿಲ್ಯಾಕ್ಸ್‌ ಮಾಡಿಕೊಂಡು ಹೋಗೋಣʼ ಅಂತ ನಾವು ಹೇಳಿದ್ರೆ, ಇನ್ನು ಹತ್ತು ವರ್ಷ ಆದ್ಮೇಲೆ ಈ ತರದ್ದೆಲ್ಲ ಹೇಳಿ.. ಅಲ್ಲಿವರೆಗೆ ಸುಸ್ತು, ಅದೂ ಇದೂ ಅಂತೆಲ್ಲ ನನಗೆ ಹೇಳಬೇಡಿ, ನಿಮ್ಮ ಬಾಯಲ್ಲಿ ಮಾತು ಬಂದ್ರೂ ನನಗೆ ನಂಗೆ ಇಷ್ಟ ಆಗಲ್ಲ ಅಂದುಬಿಟ್ರು! ನಮ್‌ ಮನೇಲಿ ಅವರಿಗಾಗಿ ಲಿಫ್ಟ್‌ ಹಾಕಿಸ್ಕೊಬೇಕು ಅಂತ ಯೋಜನೆ ಮಾಡಿದ್ದೆವು. ಆದರೆ, ಅವರು ಮೆಟ್ಟಿಲು ಹತ್ತೋ ಸ್ಟೈಲ್‌ ನೋಡಿ ನಮಗೇ ಆಶ್ಚರ್ಯ. ಅವರು ಸ್ಟೇರ್‌ ಕೇಸ್‌ ಹಿಡಿಯೋಕೂ ಇಷ್ಟಪಡಲ್ಲ. ಅದು ಅವರ ಎನರ್ಜಿ. ನಾವುಗಳು ನೋಡಿ.. ನನಗೆ ಈಗ ೫೨. ಸ್ಟೇರ್‌ ಕೇಸ್‌ ಹತ್ತಬೇಕು ಅಂದರೆ ಹುಷಾರಾಗಿ ಹತ್ತಬೇಕು ಅಂತೆಲ್ಲ ಯೋಚನೆ ಮಾಡ್ತೀವಿ. ಆದರೆ, ಅವರನ್ನು ನೋಡಿ ನಾನು ಅಂದ್ಕೊಳ್ತೇನೆ. ನಮ್ಮ ಮನಸ್ಸಿಗೆ ಯಾವತ್ತು ನಾವೇ ವಯಸ್ಸನ್ನು ತಂದುಕೊಳ್ಬಾರ್ದು, ವೃದ್ಧಾಪ್ಯ ತಂದುಕೊಳ್ಬಾರ್ದು ಅಂತ. ಅಂತ ಯುವಕ ಅವರುʼʼ ಎಂದು ಹೇಳಿದರು ಅರುಣಾದೇವಿ.

ಅವರು ನಮಗೆಲ್ಲ ರೋಲ್‌ ಮಾಡೆಲ್‌

ʻʻಅಪ್ಪ ನಮಗೆಲ್ಲ ರೋಲ್‌ ಮಾಡೆಲ್‌. ಅವರ ಆಹಾರ ವಿಚಾರ, ಲೈಫ್‌ ಸ್ಟೈಲ್‌ ಎಲ್ಲವೂ ಅಷ್ಟೆ. ಅವರು ದೇವರ ಮುಂದೆ ಒಂದು ಹತ್ತು ನಿಮಿಷ ಕುಳಿತರು ಅಂದ್ರೆ ಕಣ್ಣು ಮುಚ್ಚಿ ಎಲ್ಲ ದೇವರನ್ನು ನೆನಪು ಮಾಡಿಕೊಳ್ತಾರೆ. ಅದು ಅವರಿಗೆ ಎನರ್ಜಿ ಕೊಡುತ್ತೆ. ದೇವಸ್ಥಾನಕ್ಕೆ ಹೋದಾಗ ಅರ ಮುಖದಲ್ಲಿರುವ ನೆಮ್ಮದಿ ನೋಡಿದ್ರೇ ಖುಷಿಯಾಗುತ್ತೆ. ಸಾವಿರಾರು ಕಿ.ಮೀ. ಪ್ರಯಾಣ ಮಾಡಿ ಬಂದರೂನೂ ಒಂದು ಸಾರಿ ಮುಖ ತೊಳ್ಕೊಂಡು ಬಂದ್ರೆ ಸಾಕು ಒಳ್ಳೆ ಎಣ್ಣೆ ಸ್ನಾನ ಮಾಡಿದಷ್ಟೂ ಫ್ರೆಶ್‌ ಆಗ್ತಾರೆ. ಅದು ಅವರ ಎನರ್ಜಿ. ಅವರ ಮನಸ್ಥಿತಿʼʼ ಎನ್ನುವುದು ಅರುಣಾದೇವಿ ಮಾತು.

ಇನ್ನು ಹತ್ತು ವರ್ಷ ರಾಜಕೀಯದಲ್ಲಿರಬೇಕು, ಎಲ್ಲ ಕಡೆ ಓಡಾಡಬೇಕು ಎನ್ನುವುದು ಅವರ ಆಸೆ. ಕೇಂದ್ರದವರು ಅವರಿಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಆ ಎಲ್ಲ ಜವಾಬ್ದಾರಿಗಳನ್ನು ಅವರು ಚೆನ್ನಾಗಿ ನಿಭಾಯಿಸ್ತಾರೆ ಅವರು ಎಂದು ಹೆಮ್ಮೆಯಿಂದ ಹೇಳುತ್ತಾರೆ ಅರುಣಾದೇವಿ.

ಎದ್ದು ನಿಂತು ಸೆಲ್ಯೂಟ್‌ ಹೊಡೀಬೇಕು ಅನಿಸ್ತು

ಈ ವಿಮಾನ ನಿಲ್ದಾಣ ಅನ್ನೋದು ಒಂದು ದೊಡ್ಡ ಕನಸು. ಮೊನ್ನೆ ಮೊದಲನೇ ಫ್ಳೈಟ್‌ ಬಂತಲ್ಲ. ಅದು ಎಷ್ಟು ಸಂಭ್ರಮ ಅಂದರೆ, ಬೆಂಗಳೂರಿನಲ್ಲಿ ಆರ್ಕಿಟೆಕ್ಟ್‌ ಆಗಿರುವ ನನ್ನ ಮಗಳು ಮಾಧುರಿ ಫೋನ್‌ ಮಾಡಿದ್ಳು. ನಾವು ರಾಷ್ಟ್ರಗೀತೆಗೆ ಎದ್ದು ನಿಂತು ಸೆಲ್ಯೂಟ್‌ ಹೊಡೀತೀವಲ್ಲ. ಆ ತರದ ಫೀಲ್‌ ಆಯ್ತು. ಮೈ ಝುಂ ಅನಿಸ್ತು ಅಂತ ಹೇಳಿದ್ಲು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಬರೋದ್ರಲ್ಲಿ ಅಪ್ಪನಷ್ಟೇ ತಮ್ಮ ರಾಘವೇಂದ್ರನ ರೋಲ್‌ ಕೂಡಾ ಇದೆ. ಅಪ್ಪ ಡಿಸಿಎಂ ಆದಾಗ, ಸಿಎಂ ಆದಾಗ ಶಿವಮೊಗ್ಗಕ್ಕೆ ಯೋಜನೆಗಳನ್ನು ತರಿಸೋದರಲ್ಲಿ ದೊಡ್ಡ ಕೆಲಸ ಮಾಡಿದ್ದು ರಾಘವೇಂದ್ರ. ತಮ್ಮನನ್ನು ನಾನು ಸಣ್ಣ ವಯಸ್ಸಿನಿಂದಲೇ ನೋಡುತ್ತಿದ್ದೇನೆ. ಅವನು ಫೈಲ್‌ ಎತ್ತಿಕೊಂಡು ಅಪ್ಪನ ಹತ್ತಿರ ಹೋಗೋರು. ಆಗ ಅಪ್ಪ ಅವರು, ನೋಡು ಆಗಾಗ ಫೈಲ್‌ ಹಿಡ್ಕೊಂಡು ಬರ್ಬೇಡ, ನಂಗೆ ಕೇವಲ ಶಿವಮೊಗ್ಗ ಒಂದೇ ಇರುವುದಲ್ಲ. ನಾನು ಇಡೀ ರಾಜ್ಯ ನೋಡ್ಕೊಬೇಕು ಅಂತ ಹೇಳುತ್ತಿದ್ದರು. ಆಗ ರಾಘವೇಂದ್ರ ʻಆಯ್ತಣ್ಣʼ ಅಂತ ಹಿಂದೆ ಬರೋರು… ಮತ್ತೆ ಮುಂದಿನ ವಾರ ಫೈಲ್‌ ಹಿಡಿದುಕೊಂಡು ಹೋಗೋರು. ಯಾಕೆಂದರೆ, ಇಲ್ಲಿನ ಜನರ ಒತ್ತಡ ತುಂಬಾ ಇತ್ತು. ಒಂದ್ಸಾರಿ ವಿಮಾನ ನಿಲ್ದಾಣದ ಕೆಲಸ ಟೆಕ್ನಿಕಲ್‌ ಸಮಸ್ಯೆಯಿಂದ ನಿಂತಾಗ ನಮಗೆಲ್ಲ ಫುಲ್‌ ಟೆನ್ಶನ್‌. ಆಗ ರಾಘವೇಂದ್ರ ಆಗಾಗ ಡೆಲ್ಲಿಗೆ ಹೋಗಿ ಕ್ಲಿಯರ್‌ ಮಾಡಿಸಿಕೊಂಡು ಬಂದರುʼʼ ಎಂದು ನೆನಪಿಸಿಕೊಂಡರು ಅರುಣಾದೇವಿ.

ಇದನ್ನೂ ಓದಿ : B.S. Yediyurappa Birthday: ಅವತ್ತು ಯಡಿಯೂರಪ್ಪನವರ ಮಾತು ಕೇಳಿ ಕಣ್ಣಲ್ಲಿ ನೀರು ತುಂಬಿ ಬಂದಿತ್ತು: ನಟ ದ್ವಾರಕೀಶ್‌ ಲೇಖನ

Exit mobile version