ರಾಯಚೂರು: ಹೆಲಿಕಾಪ್ಟರ್ ಹತ್ತುವಾಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಲಿಗೆ ಪೆಟ್ಟಾಗಿರುವ ಘಟನೆ ಭಾನುವಾರ ನಡೆದಿದೆ. ಹೆಲಿಕಾಪ್ಟರ್ ಹತ್ತುವಾಗ ಕಾಲು ಉಳುಕಿದ್ದರಿಂದ ಅವರಿಗೆ ನಡೆಯಲು ಸಮಸ್ಯೆಯಾಯಿತು.
ಮಧ್ಯಾಹ್ನ ಶಿಕಾರಿಪುರದಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರಿಗೆ ತೆರಳಲು ಹೆಲಿಕಾಪ್ಟರ್ ಹತ್ತುವಾಗ ಮಾಜಿ ಸಿಎಂ ಕಾಲು ಉಳುಕಿದೆ. ನಂತರ ಪ್ರಥಮ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದಿದ್ದಾರೆ. ಲಿಂಗಸಗೂರಿನಲ್ಲಿ ಇಳಿಯುವಾಗ ಕಾಲಿಗೆ ಪೆಟ್ಟು ಆಗಿದೆ ಎಂದು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಆಗ ಸಿಬ್ಬಂದಿ ಸಹಾಯದೊಂದಿಗೆ ಇಳಿದರು. ಈ ವೇಳೆ ಕಷ್ಟಪಟ್ಟು ಮುಂದೆ ಸಾಗಿದರು.
ಇದನ್ನೂ ಓದಿ | Karnataka Politics : ರಾಜ್ಯ ಕಾಂಗ್ರೆಸ್ ಸರ್ಕಾರ ʼಪರ್ಸೆಂಟೇಜ್ ಪಟಾಲಂʼ: ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯ
ಗ್ಯಾರಂಟಿ ಕೊಡುತ್ತೇವೆ ಎಂದು ಖಜಾನೆ ಖಾಲಿ ಮಾಡಿದ್ದಾರೆ: ಬಿಎಸ್‌ವೈ
ರಾಯಚೂರು: ಬರಗಾಲ ರಾಜ್ಯವನ್ನು ತಲ್ಲಣಗೊಳಿಸಿದೆ. ರೈತರಿಗೆ ಉಸಿರು ಗಟ್ಟುವ ಪರಿಸ್ಥಿತಿ ಎದುರಾಗಿದೆ. ರೈತರ ಬೆಳೆಗಳು ನಾಶವಾಗಿದ್ದರೂ ಸರ್ಕಾರ ಈವರೆಗೆ ಪರಿಹಾರ ಕೈಗೊಂಡಿಲ್ಲ. ಪರಿಹಾರ ಕೊಡದೆ ಕೇಂದ್ರ ಸರ್ಕಾರದತ್ತ ರಾಜ್ಯ ಸರ್ಕಾರ ಬೆರಳು ತೋರಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಸರ್ಕಾರದ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿ, ಗ್ಯಾರಂಟಿ ಕೊಡುತ್ತೇವೆ ಎಂದು ಖಜಾನೆ ಖಾಲಿ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಕ್ಕೆ ಹಣವಿಲ್ಲ. ಇದರಿಂದ ನೀರಾವರಿ, ರಸ್ತೆ ಯೋಜನೆಗಳಿಗೆ ಹಣ ಇಲ್ಲದಂತಾಗಿದ್ದು, ಇತರೆ ಕಾಮಗಾರಿಗಳು ನಡೆಯುತ್ತಿಲ್ಲ. ಸರ್ಕಾರ ದಿವಾಳಿಯಾಗಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರರು ಹಣ ಪಾವತಿ ಆಗದ ಹಿನ್ನೆಲೆ ಯಾರೂ ಮುಂದೆ ಬರುತ್ತಿಲ್ಲ. ರಾಜ್ಯದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ನಮ್ಮ ಅವಧಿಯಲ್ಲೂ ಆರೋಪ ಮಾಡಿದ್ದರು. ಈಗಲೂ ನೇರವಾಗಿ ಆರೋಪ ಮಾಡುತ್ತಿದ್ದಾರೆ. ಇನ್ನು ಗುತ್ತಿಗೆದಾರರ ಮನೆಯಲ್ಲಿ ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ಮಾಡಬೇಕು ಎಂದು ತಿಳಿಸಿದರು.
ಜಾತಿ ಗಣತಿ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರೂ ನಮ್ಮ ತಕರಾರಿಲ್ಲ. ಜಾತಿ ಜಾತಿ ಮಧ್ಯೆ ಸಂಘರ್ಷ ಆಗುತ್ತದೆ ಎಂದು ಈವರೆಗೆ ಆಗಿರಲಿಲ್ಲ. ಸೂಕ್ತ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಹೇಳಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಹಗರಣ ಬಯಲಿಗೆ ಬರುತ್ತಿದೆ. ಸಿಎಂ, ಡಿಸಿಎಂ ಇವುಗಳ ಬಗ್ಗೆ ಕ್ರಮಕೂಗೊಳ್ಳದೇ ಇರುವುದು ದುರ್ದೈವ. ಕಲಾವಿದರಿಂದಲೂ ಲಂಚ ಕೇಳುವ ಕೀಳುಮಟ್ಟಕ್ಕೆ ಸರ್ಕಾರ ಬಂದಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Karnataka Politics: ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾದ ಕೆಪಿಸಿಸಿ: ಸಿ.ಟಿ.ರವಿ
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಕುರಿತು ಪ್ರತಿಕ್ರಿಯಿಸಿದ ಅವರು, ಜನ ಸಂಕಷ್ಟದಲ್ಲಿದ್ದರೂ ವಿದ್ಯುತ್ ಕಣ್ಣಾಮುಚ್ಚಾಲೆ ನಡೆದಿದೆ. ಈ ಸರ್ಕಾರ ಜನರ ಹಿತ ಮರೆತಿದೆ. ಬೇರೆ ಕಡೆಯಿಂದ ವಿದ್ಯುತ್ ಖರೀದಿ ಮಾಡಿ ಸಮಸ್ಯೆ ಸರಿದೂಗಿಸಬೇಕು. ಆದರೆ, ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಮ್ಮ ಅವಧಿಯಲ್ಲಿ ವಿದ್ಯುತ್ ಹೆಚ್ಚುವರಿಯಾಗಿ ಖರೀದಿ ಮಾಡಿ ಸಮಸ್ಯೆ ಪರಿಹರಿಸಿದ್ದೆವು ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುವ ಗುರಿಯಿದೆ. ಶೀಘ್ರದಲ್ಲಿ ರಾಜ್ಯಾಧ್ಯಕ್ಷರ ನೇಮಕವಾಗುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ ಓಡಾಡುತ್ತಿದ್ದೇನೆ ಎಂದು ಹೇಳಿದರು.