Site icon Vistara News

BS Yediyurappa : ಅಪಾರ್ಥ ಮಾಡಿಕೊಳ್ಳಬೇಡಿ, ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ; ವೀರಶೈವ ಲಿಂಗಾಯತರಿಗೆ ಬಿ.ಎಸ್‌. ಯಡಿಯೂರಪ್ಪ ಮನವಿ

Yediyurappa Shivamogga airport

#image_title

ಬೆಂಗಳೂರು: ದಯವಿಟ್ಟು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ, ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಫೆಬ್ರವರಿ ೨೭ರಂದು ನಡೆಯಲಿರುವ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಎಲ್ಲರನ್ನು ಆಹ್ವಾನಿಸಿದ ವೇಳೆ ಈ ಮಾತು ಹೇಳಿದರು.

ನನ್ನ ಬಹಳ ವರ್ಷದ ಕನಸು ನನಸಾಗಿದೆ. ಫೆಬ್ರವರಿ ೨೭ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಉದ್ಘಾಟನೆಗೆ ಬರುತ್ತಿದ್ದಾರೆ. ನೀವೆಲ್ಲರೂ ಬನ್ನಿ ಎಂದು ಅವರು ಮನವಿ ಮಾಡಿದರು.

ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ಯಡಿಯೂರಪ್ಪ ಅವರ ಮುಂದಿನ ಹೆಜ್ಜೆಗಳೇನು ಎಂದು ಕೇಳಿದಾಗ, ʻʻರಾಜ್ಯದ ಅಭಿವೃದ್ಧಿಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ. ಈಗ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದೇನೆ. ಆದರೆ, ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ರಾಜ್ಯದ ಉದ್ದಗಲಕ್ಕೂ ‌ಪ್ರವಾಸ ಮಾಡುತ್ತೇನೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದೇ ತರುತ್ತೇನೆʼʼ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೀರಶೈವ, ಲಿಂಗಾಯತ ಮತಗಳು ಬಿಜೆಪಿಯಿಂದ ವಿಮುಖವಾಗುತ್ತವೆ ಎಂಬ ವಿಚಾರದ ಬಗ್ಗೆ ಕೇಳಿದಾಗ ಆ ರೀತಿ ಆಗುವುದಿಲ್ಲ ಎಂದರು. ʻʻಇದುವರೆಗೂ ನನಗೆ ದೊಡ್ಡ ಮಟ್ಟದ ಸಹಕಾರ ನೀಡಿದ್ದೀರಿ. ನನಗೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರು ಎಲ್ಲ ರೀತಿಯ ಸಹಕಾರ ಮತ್ತು ಅವಕಾಶವನ್ನು ನೀಡಿದ್ದಾರೆ. ನಾನು ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗುತ್ತಿದ್ದೇನೆ. ಫೆಬ್ರವರಿ ೨೭ಕ್ಕೆ ನನಗೆ ೮೦ ವರ್ಷ ಆಗುತ್ತಿದೆ. ಹೀಗಾಗಿ ಯಾವುದೇ ವೀರಶೈವ ಬಂಧುಗಳು ಅಪಾರ್ಥ ಮಾಡಿಕೊಳ್ಳಬಾರದು. ನನಗೆ ಎಲ್ಲರೂ ಬೆಂಬಲ ಕೊಟ್ಟು ಬಿಜೆಪಿ ಗೆಲ್ಲಿಸಬೇಕೆಂದು ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆʼʼ ಎಂದು ಹೇಳಿದರು

ಸಿದ್ದರಾಮಯ್ಯ ಅವರ ಮೇಲಿನ ರಿಡೂ ಆರೋಪದ ಬಗ್ಗೆ ಕೇಳಿದಾಗ, ʻʻಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ, ಅನಗತ್ಯವಾಗಿ ಒಂದು ವಿಚಾರದ ಬಗ್ಗೆ ಮಾತನಾಡಲ್ಲʼʼ ಎಂದರು.

ಇದನ್ನೂ ಓದಿ : BY Vijayendra : ಮತ್ತೆ ಸದ್ದು ಮಾಡಿದ ಮುಂದಿನ ಸಿಎಂ ವಿಜಯೇಂದ್ರ ಪ್ರಸ್ತಾಪ ; ಬಿಜೆಪಿ ಶಾಸಕರಿಂದಲೇ ಕೇಳಿಬಂದ ಹೇಳಿಕೆ

Exit mobile version