ಯಾದಗಿರಿ: ಹಣ ಬಲ, ಜಾತಿ ಬಲದಿಂದ ಚುನಾವಣೆ ನಡೆಸುವ ಕಾಲ ಮುಗಿದಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡುಗು ಆಗಿದ್ದು, ಆ ಪಕ್ಷದಲ್ಲಿ ನಾಯಕರೇ ಇಲ್ಲ. ಇಲ್ಲಿ ಪಾದಯಾತ್ರೆ ಮಾಡಿ ಹೊರದೇಶಕ್ಕೆ ಹೋಗಿದ್ದಾರೆ, ಮತ್ತೆ ಯಾವಾಗ ವಾಪಸ್ ಬರುತ್ತಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijay Sankalp Yatre) ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಕೊಟ್ಟಿದೆ. ಪ್ರಧಾನಿ ನರೇಂದ್ರ ಮೊದಿ ಅವರು ಪ್ರಧಾನಿಯಾದ ಮೇಲೆ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಏನಾದರೂ ಮಾಡಬೇಕು, ಸಾಧಿಸಬೇಕು ಎನ್ನುವ ಗುರಿ ಇದ್ದರೆ ಎಲ್ಲವೂ ಸಾಧ್ಯ. ನಾನು ಎಲ್ಲರೂ ಒಂದೇ ತಾಯಿ ಮಕ್ಕಳೆಂದು ಕೆಲಸ ಮಾಡಲು ಇಚ್ಛೆ ಪಡುತ್ತೇನೆ ಎಂದು ಹೇಳಿದರು.
ನನಗೆ 82 ವರ್ಷ ವಯಸ್ಸಾಗಿದ್ದು, ಬೇರೆಯವರಿಗೆ ಅವಕಾಶ ಸಿಗಬೇಕು ಎಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. 2023ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮಿಸುತ್ತೇನೆ ಎಂದ ಅವರು, ಈ ಬಾರಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲೇಬೇಕು. 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಹೇಳಿದರು.
ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣ ವಿರೋಧಿಸಿ ಮಾರ್ಚ್ 9ರಂದು ಕಾಂಗ್ರೆಸ್‌ನಿಂದ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿರೂಪಾಕ್ಷಪ್ಪ ಮಾಡಾಳ್‌ಗೆ ಹೈಕೋರ್ಟ್‌ನಿಂದ ಬೇಲ್ ಸಿಕ್ಕಿದೆ. ಹೈಕೋರ್ಟ್‌ನಿಂದ ಬೇಲ್ ಸಿಕ್ಕಾಗ ಕಾಂಗ್ರೆಸ್‌ನವರು ಹೋರಾಟ ಮಾಡುವುದು ಎಷ್ಟು ಸರಿ? ಆ ರೀತಿ ಹೋರಾಟ ಮಾಡಿದರೆ ಕೋರ್ಟ್ ಆದೇಶದ ವಿರುದ್ಧ ಹೋರಾಟ ಮಾಡಿದಂತೆ ಎಂದು ಹೇಳಿದರು.