ಬೆಂಗಳೂರು: ಎಸ್‌ಸಿ ಸಮುದಾಯಕ್ಕೆ ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದಿಂದ ಶಿಕಾರಿಪುರದ ತಮ್ಮ ನಿವಾಸಕ್ಕೆ ಕಲ್ಲು ತೂರಾಟ ನಡೆಸಿ ಪ್ರತಿಭಟನೆ ಮಾಡಿರುವ ವಿಚಾರದ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಮೊದಲಿನಿಂದಲೂ ಬಂಜಾರ ಸಮುದಾಯ ನನ್ನ ಜತೆಗೆ ಇದೆ, ಶಿವಮೊಗ್ಗಕ್ಕೆ ತೆರಳಿ ಒಳ ಮೀಸಲಾತಿ (SC ST Reservation) ಕುರಿತು ಬಂಜಾರ ಸಮುದಾಯದ ಮುಖಂಡರ ಜತೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯದವರು ಮನೆಗೆ ಕಲ್ಲು ಹೊಡೆದಿದ್ದಾರೆ. ಈ ವಿಚಾರವಾಗಿ ಎಸ್‌ಪಿ ಜತೆಗೆ ಮಾತನಾಡಿದ್ದೇನೆ. ಆ ಸಮಾಜ ಅನೇಕ ವರ್ಷಗಳಿಂದ ನನ್ನ ಜತೆಗಿದೆ. ಹಲವು ತಾಂಡಾಗಳ ಅಭಿವೃದ್ಧಿ ಮಾಡಿದ್ದೇನೆ. ತಪ್ಪು ಗ್ರಹಿಕೆಯಿಂದ ಹೀಗೆ ಆಗಿದೆ. ಹೀಗಾಗಿ ಯಾರನ್ನು ಅರೆಸ್ಟ್ ಮಾಡದೇ ಕಳುಹಿಸಿ ಕೊಡಬೇಕು ಎಂದು ಪೊಲೀಸರಿಗೆ ಹೇಳಿದ್ದೇನೆ. ಬಂಜಾರ ಸಮುದಾಯದ ಏನೇ ಸಮಸ್ಯೆಗಳಿದ್ದರೂ ನಾನು ಹಾಗೂ ವಿಜಯೇಂದ್ರ ಸೇರಿ ಪರಿಹರಿಸಲು ಸದಾ ಸಿದ್ಧ ಎಂದು ಹೇಳಿದ್ದಾರೆ.
ಇದನ್ನೂ ಓದಿ | SC ST Reservation: ಶಿಕಾರಿಪುರದಲ್ಲಿ ಭುಗಿಲೆದ್ದ ಎಸ್‌ಸಿ-ಎಸ್‌ಟಿ ಮೀಸಲಾತಿ ಹೋರಾಟ: ಬಿಎಸ್‌ವೈ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ
ಸಮುದಾಯದವರು ಶಾಂತವಾಗಿರುವಂತೆ ನಾನು ಮನವಿ ಮಾಡುತ್ತೇನೆ. ಶಿಕಾರಿಪುರ ಶಾಂತವಾಗಿರುವ ಸ್ಥಳ, ಬಂಜಾರ ಸಮುದಾಯದವರು ಯಾವಾಗ ಬೇಕಾದರೂ ಬಂದು ಸಿಎಂ ಜತೆಗೆ ಮಾತನಾಡಬಹುದು. ಬೇಕಾದರೆ ನಾನು ಸಮುದಾಯದವರ ಜತೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇನೆ. ನಾಳೆ ಅಥವಾ ನಾಡಿದ್ದು ಶಿಕಾರಿಪುರಕ್ಕೆ ಹೋಗಿ, ಗಲಾಟೆ ಮಾಡಿದವರ ಜತೆಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
ನಾನು ನಾಲ್ಕು ಬಾರಿ ಸಿಎಂ ಆಗಲು ಬಂಜಾರ ಸಮುದಾಯ ಕೂಡ ಕಾರಣ. ಸಮುದಾಯಕ್ಕೆ ಎಲ್ಲಾ ರೀತಿಯ ನ್ಯಾಯ ಕೊಡಿಸುತ್ತೇನೆ. ನಾಳೆ, ನಾಡಿದ್ದು ಬಂದು ಮಾತನಾಡುತ್ತೇನೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೇ ಶಾಂತಿಯಿಂದ ವರ್ತಿಸಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದಿರುವ ಅವರು, ಬಂಜಾರ ಸಮುದಾಯಕ್ಕೆ ಏನೇ ಲೋಪವಾಗಿದ್ದರೂ ಸಿಎಂ ಸರಿಪಡಿಸುತ್ತಾರೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ | SC ST Reservation: ಕಾಂಗ್ರೆಸ್ ಅಧಿಕಾರಕ್ಕೂ ಬರಲ್ಲ, ಮೀಸಲಾತಿ ಬದಲಾಯಿಸಲೂ ಆಗಲ್ಲ: ಪ್ರಲ್ಹಾದ್ ಜೋಶಿ
ಬಿಜೆಪಿಯವರೇ ಒಳ ಮೀಸಲಾತಿ ಮಾಡಿಸಿದ್ದಾರೆ ಎಂಬ ರಣದೀಪ್ ಸುರ್ಜೆವಾಲಾ ಆರೋಪಕ್ಕೆ ಪ್ರತಿಕ್ರಿಯಿಸಿ, 100ಕ್ಕೆ 90 ಭಾಗ ಸರ್ಕಾರದ ಒಳ ಮೀಸಲಾತಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಯಾರ ಬಗ್ಗೆಯೂ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ಕೊಡುವುದಿಲ್ಲ. ನನ್ನ ಪ್ರಕಾರ ಇದರಲ್ಲಿ ಯಾರದೂ ಕೈವಾಡವಿಲ್ಲ ಅಂತ ಭಾವಿಸಿದ್ದೇನೆ ಎಂದು ಹೇಳಿದರು.
ಶಿಕಾರಿಪುರದಲ್ಲಿ ಬಿಎಸ್‌ವೈ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ
ಶಿವಮೊಗ್ಗ: ಎಸ್‌ಸಿ ಒಳ ಮೀಸಲಾತಿ ವಿರೋಧಿಸಿ ಜಿಲ್ಲೆಯ ಶಿಕಾರಿಪುರದಲ್ಲಿ ಬಂಜಾರ ಸಮುದಾಯ ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿತ್ತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಪ್ರತಿಭಟನಾಕಾರರು ಕಲ್ಲು, ಚಪ್ಪಲಿ ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಶಿಕಾರಿಪುರದ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮುದಾಯದ ಜನರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ ಭಾವಚಿತ್ರ ದಹಿಸಿ ಆಕ್ರೋಶ ಹೊರಹಾಕಿ, ಎಸ್‌ಸಿ ಒಳ ಮೀಸಲಾತಿ ರದ್ದುಪಡಿಸುವಂತೆ ಆಗ್ರಹಿಸಿದ್ದರು.