ಶಿವಮೊಗ್ಗ: ಎಸ್‌ಸಿ ಒಳ ಮೀಸಲಾತಿ (SC ST Reservation) ಜಾರಿ ವಿರೋಧಿಸಿ ಬಂಜಾರ ಸಮುದಾಯದ ಜನರು, ಶಿಕಾರಿಪುರದ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ಬಂಜಾರ ಸಮಾಜದ ಬಿಜೆಪಿ ಕಾರ್ಯಕರ್ತರ ಜತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಆಗಿರುವುದು ಆಗಿ ಹೋಗಿದೆ. ಅದೆಲ್ಲವನ್ನು ಮರೆತು ಬಿಡೋಣ. ಎಲ್ಲವನ್ನೂ ಮರೆತು ಒಟ್ಟಾಗಿ, ಒಂದಾಗಿ ಒಂದೇ ತಾಯಿಯ ಮಕ್ಕಳಾಗಿ ಬದುಕಬೇಕಿದೆ. ಶಿಕಾರಿಪುರ ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ಮುಂದುವರಿಯಬೇಕು. ಇದು ವಿಜಯೇಂದ್ರ, ರಾಘವೇಂದ್ರ ಹಾಗೂ ನನ್ನ ಆಶಯವಾಗಿದೆ. ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲೇ ಶಿಕಾರಿಪುರ ಮಾದರಿ ತಾಲೂಕು ಆಗಬೇಕು ಎಂಬುವುದು ನಮ್ಮ ಅಪೇಕ್ಷೆಯಾಗಿದೆ ಎಂದರು.
ಯಾರೊಬ್ಬರೂ ಗುಡಿಸಲಲ್ಲಿ ವಾಸಿಸುವ ಸ್ಥಿತಿ ಇರಬಾರದು. ಎಲ್ಲರಿಗೂ ವಾಸದ ಮನೆ, ಕುಡಿಯುವ ನೀರಿನ ಸೌಲಭ್ಯ ಸಿಗಬೇಕು. ಏನೇನು ಅಭಿವೃದ್ಧಿ ಕಾರ್ಯ ಆಗಬೇಕಿದೆ ಅದೆಲ್ಲವನ್ನೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ನಾನು ಬದುಕಿರುವವರೆಗೆ ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡಲು ಅವಕಾಶ ಮಾಡಿಕೊಡುವುದಿಲ್ಲ. ನಿಮ್ಮೆಲ್ಲ ಸಂಶಯಗಳಿಗೆ ಮುಖಂಡರು ಪರಿಹಾರ ನೀಡಿದ್ದಾರೆ. ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಜತೆ ಮಾತನಾಡಿದ್ದೇನೆ. ರಾಜ್ಯದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಇದು ಶಿಕಾರಿಪುರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದ ಜ್ವಲಂತ ಸಮಸ್ಯೆ. ಆದ್ದರಿಂದ ಈ ಸಮಾಜವನ್ನು ಎಸ್ಸಿ ಪಟ್ಟಿಯಿಂದ ಕೈಬಿಡದಂತೆ ಹೇಳಿದ್ದೇನೆ. ವರಿಷ್ಠರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಒಳಮೀಸಲಾತಿಯನ್ನು ಕಾಂಗ್ರೆಸ್ ಹಿಂಪಡೆಯಲು ಸಾಧ್ಯವಿಲ್ಲ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು: ತಾವು ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಕಾಂಗ್ರೆಸಿಗರಿಗೆ ಖಾತ್ರಿಯಾಗಿದ್ದು, ಹತಾಶರಾಗಿ ಮನಸೋಯಿಚ್ಛೆ ಮಾತನಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೀಸಲಾತಿ ಕುರಿತು ಸುರ್ಜೇವಾಲಾ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಮೀಸಲಾತಿ ಸಂವಿಧಾನ ಬಾಹಿರ ಕಾನೂನು ಬಾಹಿರ ಎಂದು ಹೇಳಿದ್ದಾರೆ. ಕೆಳ ಮಟ್ಟದ ಪದ ಬಳಕೆ ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಮೇಲೆ ಪ್ರೀತಿ ಇಲ್ಲ. ಆ ಸಮುದಾಯದ ಮೇಲೆ ಕಾಳಜಿ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಕಾಲದಲ್ಲಿ ಇದನ್ನ ಮಾಡಲಿಲ್ಲ. ವೋಟ್ ಬ್ಯಾಂಕ್ ಅಂತ ತಿಳಿದುಕೊಂಡು ಸದಾಕಾಲ ಮೋಸ ಮಾಡಿದ್ರು. ನಾಗಮೋಹನ್ ದಾಸ್ ವರದಿ ಬಂದ ತಕ್ಷಣ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಕ್ಯಾಬಿನೆಟ್ ಲ್ಲಿ ಚರ್ಚೆ ಮಾಡಿ ಕಾಯಿದೆ ತಂದು ಅದನ್ನ ಜಾರಿ ಮಾಡಿದ್ದೇವೆ ಎಂದರು.
ಸಾಮಾಜಿಕ ನ್ಯಾಯದ ವಿಚಾರಗಳನ್ನ ವಿರೋಧ ಮಾಡ್ತಿದೆ ಕಾಂಗ್ರೆಸ್. ದೀನ ದಲಿತರ ವಿರೋಧಿ, ಲಿಂಗಾಯತ, ಒಕ್ಕಲಿಗರ ವಿರೋಧಿ ಕಾಂಗ್ರೆಸ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ವಾಪಸು ಪಡೆಯುವುದಾಗಿ ಹೇಳಿದ್ದಾರೆ. ಅವರು ವಾಪಸ್ ಬರಲ್ಲ, ಅದನ್ನ ತೆಗೆಯುವುದಕ್ಕೂ ಆಗುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ಸೋಲಿನ ಭೀತಿ ಕಾಡ್ತಿದೆ. ಹತಾಶರಾಗಿ ಇಂತಹ ಹೇಳಿಕೆ ಕೊಡ್ತಿದ್ದಾರೆ ಎಂದರು.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ಬಗ್ಗೆ ಅಸಮಾಧಾನ ಇಲ್ಲ. ಹಲವು ಕ್ಷೇತ್ರಗಳಲ್ಲಿ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಅದು ನಮ್ಮ ಪಕ್ಷ ಗೆಲ್ಲುವುದನ್ನು ತೋರಿಸುತ್ತದೆ. ಏಪ್ರಿಲ್ 8ಕ್ಕೆ ಸಂಸದೀಯ ಮಂಡಳಿ ಸಭೆ ಬಳಿಕ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.