Site icon Vistara News

BS Yediyurappa: ಗ್ಯಾರಂಟಿ ವಿರುದ್ಧ ಜನಾಂದೋಲನಕ್ಕೆ ಮುಂದಾದ ಬಿಎಸ್‌ವೈ; ಜುಲೈ 3ರಿಂದಲೇ ನಿರಂತರ ಧರಣಿ

Yediyurappa protest

#image_title

ಬೆಂಗಳೂರು: ಜುಲೈ ಮೂರರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ (Joint session) ಉದ್ದಕ್ಕೂ ವಿಧಾನಸೌದದ ಹೊರಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ಘೋಷಿಸಿದ್ದಾರೆ. ಜೆ.ಪಿ. ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಇದನ್ನು ಘೋಷಿಸಿದರು. ಲೋಕಸಭಾ ಚುನಾವಣಾ (Parliament election) ಸಿದ್ಧತೆಗೆ ಬಿಜೆಪಿ ನಾಯಕರ ರಾಜ್ಯ ಪ್ರವಾಸದ ಭಾಗವಾಗಿ ಸಮಾವೇಶ ನಡೆದಿದೆ.

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಮೂಲಕ ಅಧಿಕಾರಕ್ಕೆ ಬಂದಿದೆ. ಈಗ ಅದು ತನ್ನ ಭರವಸೆಗಳನ್ನು ಈಡೇರಿಸದೆ ದ್ರೋಹ ಮಾಡಲು ಮುಂದಾಗಿದ್ದಾರೆ. ಇದರ ವಿರುದ್ಧ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದೆ ಎಂದು ಬಿಎಸ್‌ವೈ ಹೇಳಿದರು.

ಅಧಿವೇಶನದ ಆರಂಭದ ದಿನ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಬೆನ್ನಿಗೇ ವಿಧಾನಸೌಧದ ಒಳಗೆ ಹೋರಾಟ ಆರಂಭವಾಗಲಿದೆ. ಅದರ ಜತೆಗೆ ವಿಧಾನಸೌಧದ ಹೊರಗೆ ಗಾಂಧಿ ಪ್ರತಿಮೆಯ ಮುಂದೆ ಧರಣಿ ನಡೆಸುತ್ತೇನೆ. ಸಾವಿರಾರು ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನ ನಮ್ಮ ಸ್ನೇಹಿತರು ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ ಕೊಟ್ಟರು. 10 ಕೆಜಿ ಅಕ್ಕಿ, ಉಚಿತ ವಿದ್ಯುತ್ ಕೊಡ್ತೇವೆ ಅಂದ್ರು. ಆದರೆ, ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ನಾವು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗಿದೆ. ಸರ್ಕಾರ ವಿದ್ಯುತ್ ದರ ಇಳಿಸಬೇಕು, 15 ಕೆಜಿ ಅಕ್ಕಿ ಕೊಡಬೇಕು, ನಿರುದ್ಯೋಗಿ ಪದವೀಧರಿಗೆ ಹಣ ಕೊಡಬೇಕು ಎಂದು ಆಗ್ರಹಿಸಲಿದ್ದೇವೆ ಎಂದು ಹೇಳಿದರು ಬಿಎಸ್‌ವೈ. ಅದರ ಜತೆಗೆ ಮತಾಂತರ, ಗೋ ಹತ್ಯೆ ನಿಷೇಧ ಕಾಯ್ದೆ ವಾಪಸಾತಿಗೆ ಅವಕಾಶ ಕೊಡದಂತೆ ನಾವು ಕೆಲಸ ಮಾಡಬೇಕಿದೆ ಎಂದು ನುಡಿದರು.

ಸುಳ್ಳು ಭರವಸೆಗಳ ವಿರುದ್ಧ ಆಂದೋಲನ

ʻʻಚುನಾವಣೆಯಲ್ಲಿ ನಮಗೆ ಸೋಲಾಗಲು ಕಾಂಗ್ರೆಸ್‌ನವರು ಮನೆ ಮನೆಗೆ ಹೋಗಿ ಕೊಟ್ಟ ಗ್ಯಾರಂಟಿ ಕಾರ್ಡ್ ಕಾರಣ. ಜನ ಅದನ್ನು ನಂಬಿ ಬಿಟ್ಟರು. ಈ ವಿದ್ಯಮಾನದಿಂದ ಬಿಜೆಪಿ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ, ಮತ್ತೊಮ್ಮೆ ಎದ್ದೇಳಬೇಕಾಗಿದೆ. ಸುಳ್ಳು ಭರವಸೆಗಳ ವಿರುದ್ಧ ಆಂದೋಲನ ಮಾಡಬೇಕಾಗಿದೆ. ಕಾಂಗ್ರೆಸ್ ಬಣ್ಣ ಬಯಲು ಮಾಡಬೇಕಾಗಿದೆʼʼ ಎಂದು ಹೇಳಿದರು.

ಬೆಂಗಳೂರಿನಲ್ಲಿ 16 ಮಂದಿ ಬಿಜೆಪಿ ಶಾಸಕರಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ನಾವು ಸ್ಪಷ್ಟ ಬಹುಮತದದಿಂದ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ನಾವು, ನೀವು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ನನ್ನ ಕಾಲು ಇನ್ನೂ ಗಟ್ಟಿಯಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡ್ತೀನಿ ಎಂದು ಹೇಳಿದ ಯಡಿಯೂರಪ್ಪ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ 25-26 ಲೋಕಸಭಾ ಸ್ಥಾನ ಗೆಲ್ಲುವ ಮೂಲಕ ಪ್ರಧಾನಿಗೆ ಕೊಡುಗೆ ಕೊಡಬೇಕಾಗಿದೆ ಎಂದರು.

ಸಭೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ಉದಯ ಗರುಡಾಚಾರ್, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಗೋಪಿನಾಥ್ ರೆಡ್ಡಿ ಉಪಸ್ಥಿತರಿದ್ದರು. ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಪರಾಜಿತ ಅಭ್ಯರ್ಥಿಗಳು ಕೂಡಾ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: Power Tariff: ವಿದ್ಯುತ್‌ ದರ ಕಡಿಮೆ ಮಾಡಬೇಕೆಂದರೆ ಕೋರ್ಟ್‌ಗೆ ಹೋಗಿ: ಉದ್ಯಮಿಗಳಿಗೆ ಸಿಎಂ ಸಿದ್ದರಾಮಯ್ಯ ಸಲಹೆ

Exit mobile version