Site icon Vistara News

BTS 2022 | ಬಾಹ್ಯಾಕಾಶ, ರಾಕೆಟ್‌ ಸೈನ್ಸ್‌ನಲ್ಲಿ ತೊಡಗಿಸಿಕೊಂಡ 100 ನವೋದ್ಯಮಗಳಿಗೆ ಇಸ್ರೊ ನೆರವು

ISRO SOMANATH

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯೊಂದಿಗೆ 100 ನವೋದ್ಯಮಗಳು ನೋಂದಾಯಿಸಿಕೊಂಡಿದ್ದು, ಬಾಹ್ಯಾಕಾಶ ಸಂಶೋಧನೆಯ ಹಲವು ವಲಯಗಳಲ್ಲಿ ನೆರವನ್ನು ಒದಗಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ. ಬೆಂಗಳೂರು ತಂತ್ರಜ್ಞಾನ ಸಮಾವೇಶದ (BTS 2022) ಎರಡನೇ ದಿನವಾದ ಗುರುವಾರ ಅವರು ‘ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ: ಜಾಗತಿಕ ಒಳಿತಿಗಾಗಿ ನಾವೀನ್ಯತೆ’ ವಿಚಾರ ಕುರಿತು ಉಪನ್ಯಾಸ ನೀಡಿದರು.

ಭಾರತದ ಹಲವು ಕಂಪನಿಗಳಿಗೆ ಬಾಹ್ಯಾಕಾಶ ವಲಯದಲ್ಲಿ ಮಹತ್ತ್ವದ ಪಾತ್ರ ವಹಿಸುವ ಶಕ್ತಿ ಇದೆ. ಇಸ್ರೋ ಇವುಗಳಿಗೆ ಆರಂಭದಿಂದ ಹಿಡಿದು ಅಂತ್ಯದವರೆಗೂ ಪರಿಪೋಷಣೆ ಮಾಡಲಿದೆ. ಸದ್ಯಕ್ಕೆ 10 ಕಂಪನಿಗಳು ಉಪಗ್ರಹ ಮತ್ತು ರಾಕೆಟ್‌ ನಿರ್ಮಾಣದಲ್ಲಿ ತೊಡಗಿಕೊಂಡಿವೆ ಎಂದು ಅವರು ತಿಳಿಸಿದರು.

ಸಂಸ್ಥೆಯ ಮಹತ್ತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಇನ್ನು ಕೆಲವೇ ತಿಂಗಳಲ್ಲಿ ಕಕ್ಷೆಯನ್ನು ಸೇರಲಿದೆ. ಈ ನಿಟ್ಟಿನಲ್ಲಿ ಇಸ್ರೋ ಅಮೆರಿಕದ ನಾಸಾ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಈ ಯೋಜನೆಯ ರಾಕೆಟ್‌ನಲ್ಲಿ ಬಳಸಲ್ಪಟ್ಟ ಕಂಪ್ಯೂಟರನ್ನು ಭಾರತದಲ್ಲೇ ತಯಾರಿಸಲಾಗಿತ್ತು ಎಂದು ಅವರು ನುಡಿದರು.

ಜಗತ್ತಿನ ಎಲ್ಲೆಡೆಗಳಲ್ಲೂ ಈಗ ಬಾಹ್ಯಾಕಾಶ ಪ್ರವಾಸೋದ್ಯಮ ಜನಪ್ರಿಯವಾಗುತ್ತಿದೆ. ಇಸ್ರೋ ಸಂಸ್ಥೆಯು ದೇಶದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಮತ್ತು ಆಧುನಿಕ ತಯಾರಿಕೆ ವ್ಯವಸ್ಥೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಮಿಕ್ಕಂತೆ ಉಪಗ್ರಹ ತಂತ್ರಜ್ಞಾನವನ್ನು ಮತ್ತೆ ಮುಂಚೂಣಿಗೆ ತರುವ ಪ್ರಯತ್ನಗಳು ನಡೆದಿವೆ. ಅಲ್ಲದೆ, ಪರಿಸರಸ್ನೇಹಿ ಮತ್ತು ಹೈಬ್ರಿಡ್‌ ಪ್ರೊಪಲ್ಶನ್‌, ಸಣ್ಣ ರಾಕೆಟ್‌ಗಳ ಉಡಾವಣೆ, ಕಾರ್ಬನ್‌ ಫೈಬರ್‍‌ ತಂತ್ರಜ್ಞಾನ, ರೋಬೋಟಿಕ್ಸ್‌, ಡ್ರೋನ್‌, ಕ್ವಾಂಟ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಸ್ರೋ ಛಾಪು ಮೂಡಿಸುತ್ತಿದೆ ಎಂದು ಸೋಮನಾಥ್‌ ವಿವರಿಸಿದರು.

ಇದನ್ನೂ ಓದಿ | BTS 2022 | ಕರ್ನಾಟಕದಲ್ಲಿ 6 ಹೊಸ ಹೈಟೆಕ್‌ ನಗರಗಳ ಸ್ಥಾಪನೆ; ಬೆಂಗಳೂರಿನ ಬಳಿಯೂ ಒಂದು: ಸಿಎಂ ಬೊಮ್ಮಾಯಿ ಘೋಷಣೆ

Exit mobile version