Site icon Vistara News

Budget 2023 : ರಾಜ್ಯದ ಮೇಲೆ ಮೋದಿ ಕಣ್ಣು: ಬಜೆಟ್‌ನಲ್ಲಿ ಪ್ರಸ್ತಾಪವಾದ ಏಕೈಕ ರಾಜ್ಯ ಕರ್ನಾಟಕ !

budget-2023-The only state name mentioned is karnataka

ಬೆಂಗಳೂರು: ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಮಂಡಿಸಿದ 2023-24ನೇ ಸಾಲಿನ ಬಜೆಟ್‌ನಲ್ಲಿ (Budget ೨೦೨೩) ಪ್ರಸ್ತಾಪವಾದ ಏಕೈಕ ರಾಜ್ಯದ ಹೆಸರು ಎಂದರೆ ಅದು ಕರ್ನಾಟಕ. ಕರ್ನಾಟಕದ ವಿಧಾನಸಭೆ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದು ಇದರಿಂದ ತಿಳಿಯುತ್ತದೆ.

ಬರಗಾಲದಿಂದ ಪೀಡಿತ ಮಧ್ಯ ಕರ್ನಾಟಕ ಪ್ರದೇಶದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸೂಕ್ಷ್ಮ ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಸಲುವಾಗಿ 5,300 ಕೋಟಿ ರೂ. ಕೇಂದ್ರ ಸಹಾಯಾನುದಾನ ನೀಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

ಒಂದು ರಾಜ್ಯದ ಹೆಸರನ್ನು ಉಲ್ಲೇಖಿಸಿದ್ದಷ್ಟೆ ಅಲ್ಲದೆ, ಒಂದು ರಾಜ್ಯಕ್ಕೆ ನಿರ್ದಿಷ್ಟವಾಗಿ ಘೋಷಣೆ ಮಾಡಿದ ಏಕೈಕ ಯೋಜನೆ ಇದಾಗಿದೆ. ಕರ್ನಾಟಕದಲ್ಲಿ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮಹತ್ವದ ರಾಜ್ಯವಾಗಿದೆ.

ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬಲ್ಲ ಏಕೈಕ ರಾಜ್ಯವನ್ನು ಗೆಲ್ಲಲು ಈಗಾಗಲೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅನೇಕ ಬಾರಿ ಪ್ರವಾಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರವಾಸ ಮಾಡಲಿದ್ದಾರೆ.

ಇದೆಲ್ಲದರ ಹಿನ್ನೆಲೆಯಲ್ಲಿ, ಪ್ರಮುಖವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆ ಘೋಷಣೆ, ಕರ್ನಾಟಕ ಹೆಸರನ್ನು ಮಾತ್ರ ಹೇಳಿರುವುದು ಬಹುದೊಡ್ಡ ಸಂದೇಶವನ್ನು ನೀಡಲಿದೆ.

ಇದನ್ನೂ ಓದಿ : Union Budget 2023: ಯಾವುದು ತುಟ್ಟಿ, ಯಾವುದು ಅಗ್ಗ?

ಕೇಂದ್ರ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಿರುವುದಕ್ಕೆ ಸಿಎಂಮಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರಿಗೆ ಹಾಗೂ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು ಎಂದಿದ್ದಾರೆ.

Exit mobile version