Site icon Vistara News

Buffalo Race Competition | ಬೈಕ್‌ ಜತೆ ಎಮ್ಮೆ ಓಟ ಸ್ಪರ್ಧೆ; ಪ್ರಥಮ ಬಹುಮಾನ 20 ಸಾವಿರ ರೂಪಾಯಿ

boffalo compitation 4

ಧಾರವಾಡ: ಮನೋರಂಜನೆಗಾಗಿ ಟಗರಿನ ಕಾಳಗ, ಚಕ್ಕಡಿ ಓಡಿಸುವ ಸ್ಪರ್ಧೆ ಹೀಗೆ ಅನೇಕ ಸ್ಪರ್ಧೆಗಳನ್ನು ಅಲ್ಲಲ್ಲಿ ಆಯೋಜನೆ ಮಾಡಲಾಗಿರುತ್ತದೆ. ಆದರೆ, ಧಾರವಾಡದಲ್ಲಿ ವಿಭಿನ್ನವಾದ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿತ್ತು. ಅದುವೇ ಎಮ್ಮೆ ಓಡಿಸುವ (Buffalo Race Competition) ಸ್ಪರ್ಧೆ. ಇದು ಎಮ್ಮೆಯನ್ನು ಓಡಿಸಿಕೊಂಡು ಹೋಗುವ ಸ್ಪರ್ಧೆಯಲ್ಲ ಎಂಬುದು ಮತ್ತೊಂದು ವಿಶೇಷವಾಗಿದೆ. ಬೈಕ್ ಹಿಂದೆ ಎಮ್ಮೆ ಬೆನ್ನಟ್ಟಿ ಬರಬೇಕು ಹಾಗೇ ನಿಗದಿತ ಗುರಿಯನ್ನು ತಲುಪಬೇಕಿದೆ. ಹೀಗೆ ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ೨೦ ಸಾವಿರ ರೂಪಾಯಿ ಬಹುಮಾನವೂ ಇದೆ.

ಇಂಥದ್ದೊಂದು ಸ್ಪರ್ಧೆಯನ್ನು ಧಾರವಾಡ ಹೊರವಲಯದ ಹನುಮಂತನಗರದ ಸಮೀಪ ಆಯೋಜಿಸಲಾಗಿತ್ತು. ಗೌಳಿ ಸಮುದಾಯದವರಿಂದ ಪ್ರತಿ ವರ್ಷ ಈ ಸ್ಪರ್ಧೆಯನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದ್ದು, ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆಯಿಂದ ಸ್ಪರ್ಧಾಳುಗಳು ಬಂದಿದ್ದು, ಜತೆಯಲ್ಲಿ ತಮ್ಮ ತಮ್ಮ ಎಮ್ಮೆಗಳನ್ನೂ ಕರೆತಂದಿದ್ದಾರೆ.

ದೀಪಾವಳಿ ಪ್ರಯುಕ್ತ ಆಚರಣೆ
ಧಾರವಾಡ ಗೌಳಿಗಲ್ಲಿಯ ಎಮ್ಮೆ ಸಾಕುವವರು ದೀಪಾವಳಿ ಹಬ್ಬದ ನಂತರ ಒಂದು ದಿನವನ್ನು ನಿಗದಿ ಮಾಡಿ ಎಮ್ಮೆ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡುತ್ತಾ ಬರಲಾಗುತ್ತಿದ್ದು, ಸೋಮವಾರ (ನ. ೧೪) ಹನುಮಂತನಗರದ ಸಮೀಪ ಇರುವ ಮೈದಾನವೊಂದರಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ | Viral Video | ವಂದೇ ಮಾತರಂ..; ನೂತನ ವಂದೇ ಭಾರತ್​ ರೈಲಿನಲ್ಲಿ ಬೆಂಗಳೂರು ಹುಡುಗನ ಕೊಳಲು ವಾದನ

ಹೇಗೆ ನಡೆಯಲಿದೆ ಸ್ಪರ್ಧೆ?
ಬೈಕ್‌ನಲ್ಲಿ ಎಮ್ಮೆಯ ಮಾಲೀಕರು ಕುಳಿತಿರುತ್ತಾರೆ. ಒಬ್ಬರು ಬೈಕ್‌ ಚಲಾಯಿಸುತ್ತಿದ್ದರೆ ಮತ್ತೊಬ್ಬರು ಹಿಂಬದಿ ಸೀಟಿನಲ್ಲಿರುತ್ತಾರೆ. ಈ ಸ್ಪರ್ಧೆಗೆ ದೂರವನ್ನು ನಿಗದಿ ಮಾಡಿರಲಾಗಿರುತ್ತಿದೆ. ಓಟ ಪ್ರಾರಂಭವಾಗುತ್ತಿದ್ದಂತೆ ಬೈಕ್‌ ಸಾಗುತ್ತದೆ. ಬೈಕ್‌ ಹಿಂದಿರುವ ವ್ಯಕ್ತಿಯು ಆ ಎಮ್ಮೆಗೆ ಯಾವುದಾದರೂ ವಸ್ತುವನ್ನು ಹಿಡಿದು ತನ್ನ ಹಿಂದೆಯೇ ಬರುವಂತೆ ನೋಡಿಕೊಳ್ಳುತ್ತಾನೆ. ೧೦೦ ಮೀಟರ್‌ನ ನಿಗದಿತ ಗುರಿ ತಲುಪಬೇಕಿದೆ. ಈ ವೇಳೆ ಯಾವುದು ಕನಿಷ್ಠ ಸಮಯ ತೆಗೆದುಕೊಂಡಿದೆಯೋ ಅವರ ಕೊರಳಿಗೆ ವಿಜಯ ಮಾಲೆ ಬೀಳಲಿದೆ.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 20 ಸಾವಿರ ರೂ., ದ್ವಿತೀಯ ಸ್ಥಾನ 15 ಸಾವಿರ ರೂ. ಹಾಗೂ ತೃತೀಯ ಸ್ಥಾನ ಪಡೆದವರಿಗೆ 12,500 ರೂಪಾಯಿ ಬಹುಮಾನ ನೀಡಲಾಗುತ್ತದೆ. ಅಲ್ಲದೆ ಸಮಾಧಾನಕರ ಬಹುಮಾನವಾಗಿ ಬಕೆಟ್, ಹಂಡೆ ಸೇರಿ ಇನ್ನಿತರ ವಸ್ತುಗಳನ್ನು ಇಡಲಾಗಿತ್ತು. ಸುಮಾರು ೧೦೦ ಎಮ್ಮೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಎಂದು ಸ್ಪರ್ಧೆ ಆಯೋಜಕ ಕಾಶಿಮ್‌ ಹೇಳಿದ್ದಾರೆ.

ಇದನ್ನೂ ಓದಿ | Video Viral | ಆನೆಯನ್ನು ನಾಯಿ ಅಟ್ಟಾಡಿಸಿತೋ ಇಲ್ಲವೇ ನಾಯಿ ಜತೆ ಆನೆ ಆಟವಾಡಿತೋ; ವೈರಲ್‌ ಆಯ್ತು ವಿಡಿಯೊ!

Exit mobile version