ಆನೇಕಲ್: ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿತಗೊಂಡು (Building Collapse) ಅದರಡಿಯಲ್ಲಿ ಸಿಲುಕಿಕೊಂಡ ಇಬ್ಬರು ಕಾರ್ಮಿಕರು ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ಕೆಲಸ ಶುರು ಮಾಡಿದ ಅರ್ಧ ಗಂಟೆಯಲ್ಲೇ ಈ ದುರಂತ ನಡೆದು ಹೋಗಿದೆ. ಬೆಂಗಳೂರು ಗ್ರಾಮಾಂತರ (Bangalore rural) ಪ್ರದೇಶದ ಆನೇಕಲ್ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಈ ದುರ್ಘಟನೆ ನಡೆದಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಸದ ಡಿ.ಕೆ.ಸುರೇಶ್ ಆಗಮಿಸಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಅವರು, ಖಾಸಗಿ ಶಾಲೆಯ ಕಟ್ಟಡ ನಿರ್ಮಾಣ ಆಗುತ್ತಿತ್ತು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕುಸಿತ ಆಗಿದೆ. ಘಟನೆಯಲ್ಲಿ ಇಬ್ವರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇದು ಆಕಸ್ಮಿಕನಾ ಹಾಗೂ ಬೇಜವಬ್ದಾರಿಯಾ ಎನ್ನುವುದು ತನಿಖೆಯಿಂದ ತಿಳಿಯಲಿದೆ. ಮೇಲ್ನೋಟಕ್ಕೆ ಖಾಸಗಿ ಶಾಲೆಯವರ ಬೇಜವ್ದಾರಿತನ ಎದ್ದು ಕಾಣುತ್ತಿದೆ. ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಂತರ ಪ್ರತಿಕ್ರಿಯಿಸಿದ ಶಾಸಕ ಬಿ.ಶಿವಣ್ಣ ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಲು ಸೂಚಿಸಿತ್ತೇನೆ. ಮೃತ ಕಾರ್ಮಿಕರಿಗೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಯವರಿಂದ ಸಹಾಯ ಮಾಡಲಾಗುವುದು. ಗಾಯಾಳುಗಳಿಗೆ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು ಎಂದರು.
ಇದನ್ನೂ ಓದಿ: Self Harming: ಮೇಲಧಿಕಾರಿಗಳಿಗೆ ಪತ್ನಿ ದೂರು; ನೊಂದ ಕಾನ್‌ಸ್ಟೇಬಲ್ ಆತ್ಮಹತ್ಯೆ
ರಾಜ್ಯ ವಿಪತ್ತು ಸ್ಪಂದನ ಪಡೆ ಸಾಥ್
ಈ ಕಾರ್ಯಾಚರಣೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಜತೆಗೆ ರಾಜ್ಯ ವಿಪತ್ತು ಸ್ಪಂದನ ಪಡೆಯು ಕೈಜೋಡಿಸಿದೆ. ಸಿಮೆಂಟ್ ಕಾಂಕ್ರೀಟ್ ಒಳಗೆ ಯಾರಾದರೂ ಸಿಲುಕಿದ್ದಾರಾ ಎನ್ನುವ ಅನುಮಾನವಿದೆ. ರಾಶಿ ರಾಶಿ ಕಬ್ಬಿಣದ ಸರಳುಗಳು ಬಿದ್ದಿರುವ ಹಿನ್ನೆಲೆಯಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಗೂ ಕಬ್ಬಿಣದ ಸರಳುಗಳನ್ನು ಪ್ರತ್ಯೇಕ ಮಾಡಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, 2ನೇ ಮಹಡಿಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಬೆಳಗ್ಗೆ 7 ಗಂಟೆ ಸುಮಾರಿಗೆ ಸೆಂಟ್ರಿಂಗ್ ಕೆಲಸ ಪ್ರಾರಂಭವಾಗಿತ್ತು. ಆದರೆ 8 ಗಂಟೆ ಹೊತ್ತಿಗೆ ಏಕಾಏಕಿ ಸೆಂಟ್ರಿಂಗ್ ಕುಸಿದಿದೆ. ಘಟನೆಯಲ್ಲಿ ವೆಸ್ಟ್ ಬೆಂಗಾಲ್ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರೆ, ಮೂವರು ಕಾರ್ಮಿಕರಿಗೆ ಗಂಭೀರ ಗಾಯವಾಗಿದೆ. ಗಂಭೀರ ಗಾಯಗೊಂಡವರನ್ನು ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕ್ರಿಶ್ಚಿಯನ್ ಕಾಂಗ್ರಿಗೇಶನ್ ಎಂಬ ಸಂಸ್ಥೆಗೆ ಸೇರಿದ ಶಾಲೆ ಇದಾಗಿದ್ದು, ಹೊಸಪೇಟೆ ಮೂಲದ ಪ್ರತಾಪ್ ಬಿಲ್ಡರ್ ಕನ್ಸ್ಟಕ್ಷನ್ ನಡೆಸುತ್ತಿದ್ದರು. ಕಬ್ಬಿಣದ ಸರಳುಗಳನ್ನು ಸೆಂಟ್ರಿಂಗ್ ಹಾಕುವಾಗ ಗಟ್ಟಿಯಾಗಿ ಹಾಕಿರಲಿಲ್ಲ. ಮೇಲ್ನೋಟಕ್ಕೆ ನಿರ್ಲಕ್ಷ್ಯ ಕಂಡು ಬಂದಿದೆ. ಲೆಂಥ್ ಹಾಕುವಾಗ ಯಾವುದೇ ಸುರಕ್ಷತೆ ಇರಲಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ. ಸದ್ಯ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:Love Case : ಲವ್ ಫೇಲ್ಯೂರ್; ಮನನೊಂದು ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ
ಕಟ್ಟಡ ಕಾಮಗಾರಿಯಲ್ಲಿ ಒಟ್ಟು 25 ಮಂದಿ ಕೆಲಸ ಮಾಡುತ್ತಿದ್ದರು. 15 ಮಂದಿ ಎರಡನೇ ಮಹಡಿ ಮೇಲೆ ನಿಂತು ಕಾಂಕ್ರೀಟ್ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಸೆಂಟ್ರಿಂಗ್ ಕುಸಿದಿದೆ. ಗಾಯಗೊಂಡವರ ವಿಚಾರಣೆ ನಡೆಯುತ್ತಿದೆ. ಅವರ ಮೂಲಕ ಇನ್ನಷ್ಟು ಮಾಹಿತಿ ತಿಳಿದುಕೊಳ್ಳುತ್ತೇವೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.
ನಿರ್ಮಾಣ ಹಂತದ ಖಾಸಗಿ ಶಾಲಾ ಕಟ್ಟಡದ ಮಾಲೀಕ ಬಾಗಲಕೋಟೆ ಮೂಲದ ಅಯ್ಯಸ್ವಾಮಿ ಎಂದು ತಿಳಿದು ಬಂದಿದೆ. ಕಳೆದ 8 ತಿಂಗಳಿಂದ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಕಳೆದ ಎರಡು ದಿನಗಳಿಂದ ಸೆಂಟ್ರಿಂಗ್ ಹಾಕಲಾಗಿತ್ತು. ಇಂದು ಬೆಳಗ್ಗೆ 7 ಗಂಟೆಯಿಂದ ಸಿಮೆಂಟ್ ಕಾಂಕ್ರೀಟ್ ಕೆಲಸ ಆರಂಭವಾಗಿತ್ತು. ಎರಡನೇ ಮಹಡಿಯಲ್ಲಿ ಸಿಮೆಂಟ್ ಕಾಂಕ್ರೀಟ್ ಕಾಮಗಾರಿ ಶುರುವಾದ ಅರ್ಧ ತಾಸಿಗೆ ಸೆಂಟ್ರಿಂಗ್ ಕುಸಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ