ಗದಗ: ಮದುವೆ ಬಂಧು ಬಾಂಧವರು ಬಂದರೆ ಖುಷಿಯಾಗುತ್ತದೆ. ಕೆಲವರಿಗೆ ವಿಐಪಿಗಳು, ರಾಜಕಾರಣಿಗಳು ಬಂದರೆ ಸಂಭ್ರಮ. ಇನ್ನು ಕೆಲವರಿಗೆ ಕಲಾವಿದರು ಬಂದರೆ ಧನ್ಯತೆ. ಆದರೆ, ಇಲ್ಲಿನ ಮದುವೆಯೊಂದಕ್ಕೆ ಅದಕ್ಕಿಂತಲೂ ವಿಶೇಷ ಅತಿಥಿ ಬಂದು ಹುಬ್ಬೇರಿಸಿದೆ. ಮದುಮಕ್ಕಳು ಮಾತ್ರವಲ್ಲ, ಮದುವೆಗೆ ಬಂದವರೆಲ್ಲರೂ ಖುಷಿಯಿಂದ ಕುಣಿದಾಡಿದ್ದಾರೆ. ಆ ಅತಿಥಿ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.
ಆ ಅತಿಥಿ ಬೇರೆ ಯಾರೂ ಅಲ್ಲ ಒಂದು ಹೋರಿ! ಕಿಲಾರಿ ಹೋರಿ!
ಈ ಘಟನೆ ನಡೆದಿರುವುದು ಗದಗದಲ್ಲಿ. ಇಲ್ಲಿನ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಮದುವೆಗೆ ಬಂದಿರುವ ವಿಶೇಷ ಅತಿಥಿ ಹುಲಿಗಿನಕೊಪ್ಪದ ನಾಯಕ ಎಂದೇ ಪ್ರಸಿದ್ಧವಾಗಿರುವ ಹೋರಿ (Bullock blessings). ಅವನು ಹಾವೇರಿ ಜಿಲ್ಲೆಯ ಹುಲಿಗಿನಕೊಪ್ಪದಿಂದ ವಿಶೇಷ ಅತಿಥಿಯಾಗಿ ಮದುವೆಗೆ ಬಂದಿದ್ದ.
ಗದಗದ ಪರ್ವತ ಗೌಡ ಎಂಬವರ ಕುಟುಂಬದ ಮದುವೆ ಏರ್ಪಾಡಾಗಿತ್ತು. ಮಂಜುನಾಥ ಗೌಡ ಮತ್ತು ನಿಂಗನ ಗೌಡ ಸೋದರರಿಗೆ ರಾಜೇಶ್ವರಿ ಮತ್ತು ಕಾವೇರಿ ಎಂಬ ಯುವತಿಯರ ಜತೆ ಲಗ್ನ ಅದು. ಅದಕ್ಕೆ ಬಂಧು ಬಾಂಧವರನ್ನು ಕರೆಯುವಂತೆಯೇ ಹುಲಿಗಿನಕೊಪ್ಪದ ನಾಯಕನಿಗೂ ಆಮಂತ್ರಣ ಹೋಗಿತ್ತು. ಸ್ವತಃ ಪರ್ವತ ಗೌಡ್ರೇ ಹೋಗಿ ಲಗ್ನಪತ್ರಿಕೆ ಕೊಟ್ಟು ಬರಲೇಬೇಕು ಎಂದು ಮನವಿ ಮಾಡಿದ್ದರು. ಅದರ ಮಾಲೀಕರು ಒಪ್ಪಿದ್ದರು ಕೂಡಾ. ಕೊಟ್ಟ ಮಾತಿನಂತೆ ಹುಲಿಗಿನಕೊಪ್ಪದ ನಾಯಕ ಬಂದು ಇಳಿದಿದ್ದ.
ಈ ಹೋರಿ ಬಂದಿದ್ದರಲ್ಲಿ ಏನು ವಿಶೇಷ?
ಏನು ವಿಶೇಷ ಎಂದರೆ ಹುಲಿಗಿನ ಕೊಪ್ಪದ ನಾಯಕ ಎಂದರೆ ಸಾಮಾನ್ಯ ಹೋರಿಯಲ್ಲ. ಹಾವೇರಿ, ಗದಗ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅವನು ಭಾರಿ ಜನಪ್ರಿಯ. ಹೋರಿ ಬೆದರಿಸುವ ಸ್ಪರ್ದೆಯಲ್ಲಿ ಅಂತಾರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿರುವ ನಾಯಕ.
ದಶಕಗಳಿಗೂ ಅಧಿಕ ಕಾಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಜನಾಗಿದ್ದ ಈ ನಾಯಕ ಸುಮಾರು 10ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿದ್ದಾನೆ.
ಆಶೀರ್ವಾದ ಮಾಡಿದ ನಾಯಕ
ಪರ್ವತ ಗೌಡರ ಕುಟುಂಬದ ಮಕ್ಕಳ ಮದುವೆಗೆ ಹುಲಿಗಿನಕೊಪ್ಪದ ನಾಯಕ ಬಂದಿಳಿಯುತ್ತಿದ್ದಂತೆಯೇ ಸಿನಿಮಾದ ಹೀರೊನನ್ನು ನೋಡುವಂತೆ ಎಲ್ಲರನ್ನು ಮುಗಿಬಿದ್ದಿದ್ದರು. ರಾಜ ಗಾಂಭೀರ್ಯದಿಂದ ಮದುವೆ ಮಂಟಪಕ್ಕೆ ನಡೆದುಬಂದ ನಾಯಕನಿಂದ ನವವಧುವರರು ಆಶೀರ್ವಾದ ಪಡೆದು ಸಂಭ್ರಮಿಸಿದರು.
ನವವಧುವರರು ಹೋರಿಯನ್ನು ಹೀರೊನಂತೆ ಮಂಟಪಕ್ಕೆ ಕರೆತಂದರು. ನಾಯಕನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಮದುವೆಯಾದ ಹುಡುಗರು ಹೋರಿಗೆ ಮುತ್ತಿಕ್ಕಿ ಸಂಭ್ರಮಿಸಿದರು.
ಶರವೇಗದ ಸರದಾರ ಎಂದೇ ಹೆಸರಾದ ನಾಯಕನ ಆಗಮನದಿಂದ ಮದುವೆ ಮಂಟಪದಲ್ಲಿ ಜನ ಎಷ್ಟು ಖುಷಿಯಾಗಿದ್ದರು ಎಂದರೆ ಮದುವೆಗೆ ಬಂದ ಬಂಧು ಬಳಗದವರು ಹೋರಿ ಜೊತೆಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ನಾಯಕ ಕೂಡಾ ಯಾವುದೇ ಕಿರಿಕಿರಿ ಇಲ್ಲದೆ ಪೋಸು ಕೊಟ್ಟಿದ್ದಾನೆ.
ನಿಜವೆಂದರೆ, ಈ ಹೋರಿಗೆ ಅಲ್ಲಿ ಪ್ರತ್ಯೇಕವಾದ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ಅಲಂಕಾರ ಮಾಡಲಾಗಿತ್ತು. ಅದರಲ್ಲಿ ಬ್ಯಾನರ್ ಹಾಕಲಾಗಿತ್ತು. ಪರ್ವತ ಗೌಡರು ಮದುವೆ ಆಮಂತ್ರಣದಲ್ಲೂ ನಾಯಕ ಬರ್ತಾನೆ ಅಂತ ಬರೆಸಿದ್ದರು!
ಮಾಲೀಕನಿಗೆ ಅಚ್ಚುಮೆಚ್ಚು, ಪಕ್ಕದವರಿಗೆ ಕಿಚ್ಚು!
ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಅಂದ್ರೆ ಭಾರಿ ಫೇಮಸ್. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗುವ ಹೋರಿಗಳಿಗೆ ಭಾರಿ ಬೆಲೆ ಇದೆ. ಹೋರಿ ಬೆದರಿಸುವ ಸ್ಪರ್ಧೆಗೆ ಕಟ್ಟಲೆಂದೇ ಅದರ ಮಾಲೀಕರು ಹಲವು ವರ್ಷಗಳ ಹಿಂದೆ ಕಿಲಾರಿ ಕರುವನ್ನು ತಮಿಳುನಾಡಿನಿಂದ ತಂದಿದ್ದರು. ಈಗ ಹಾವೇರಿಯಲ್ಲಿ ನಾಯಕನ ಖದರು ಹೇಗಿದೆ ಎಂದರೆ ಎಷ್ಟು ದುಡ್ಡಾದರೂ ಕೊಟ್ಟು ಕೊಳ್ಳುವ ಮಂದಿ ಇದ್ದಾರೆ. ಆದರೆ, ಮಾಲೀಕರು ಮಾತ್ರ ಸುತಾರಾಂ ಕೊಡಲ್ಲ ಅಂತಿದ್ದಾರೆ. ಇತ್ತೀಚೆಗೆ ಸುಮಾರು 15 ಲಕ್ಷ ರೂ. ವರೆಗೆ ಬೆಲೆ ಕಟ್ಟಿದರೂ ಮಾರಾಟ ಮಾಡಲಿಲ್ಲ ಮಾಲೀಕರು!
ಇದನ್ನೂ ಓದಿ ರಾಜ ಮಾರ್ಗ ಅಂಕಣ : ರೋಬೋಟಿಗೂ ಇವರಿಗೂ ವ್ಯತ್ಯಾಸವಿಲ್ಲ! ಭಾವನೆಗಳೇ ಇಲ್ಲದವರ ಜತೆ ಬದುಕೋದು ಹೇಗೆ?