Site icon Vistara News

Bundles of money | ಕುಡುಕನಿಗೆ ರಸ್ತೆಯಲ್ಲಿ ಸಿಕ್ಕಿದ್ದ 10 ಲಕ್ಷ ರೂ. ಪೊಲೀಸರ ಪಾಲಾಯ್ತಾ? ಏನಿದು ಮನಿ ಕಹಾನಿ?

ಮಂಗಳೂರು: ಮೆಕ್ಯಾನಿಕ್‌ ಆಗಿದ್ದ ಆತ ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ. ಹೀಗೆ ಕುಡಿತದ ದಾಸನಾಗಿ ಓಡಾಡಿಕೊಂಡು ಇದ್ದವನಿಗೆ ಬೈಕ್‌ ಪಾರ್ಕಿಂಗ್‌ನಲ್ಲಿ ಕಂತೆ ಕಂತೆ ಹಣ (Bundles of money) ಸಿಕ್ಕಿತ್ತು. ಹಣ ಸಿಕ್ಕ ಖುಷಿಯಲ್ಲಿ ಮತ್ತೊಂದು ಸುತ್ತು ಗುಂಡು ಹಾಕಿ ತೇಲಾಡುತ್ತಿದ್ದವನಿಗೆ, ಸಿಕ್ಕಿದ ಹಣ ಅರ್ಧ ಗಂಟೆಯಲ್ಲಿಯೇ ಪೊಲೀಸರ ಪಾಲಾಯ್ತು!

ಕನ್ಯಾಕುಮಾರಿ ಮೂಲದ ಶಿವರಾಜ್‌ ಎಂಬಾತ ಬೋಂದೆಲ್‌ನ ಕೃಷ್ಣನಗರದ ನಿವಾಸಿ ಆಗಿದ್ದು, ಕುಡಿತದ ಚಟ ಮೈಗೂಡಿಸಿಕೊಂಡಿದ್ದ. ಹೀಗೆ ನವೆಂಬರ್‌ 27ರಂದು ಪಂಪ್‌ವೆಲ್‌ ಮೇಲ್ಸೇತುವೆ ಸಮೀಪದ ವೈನ್‌ ಶಾಪ್‌ನಲ್ಲಿ ಕುಡಿದು ಹೊರ ಬರುವಾಗ ಪಾರ್ಕಿಂಗ್‌ ಜಾಗದಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿಗಳ ಬಂಡಲ್‌ ಸಿಕ್ಕಿತ್ತು. ಹಣ ಕಂಡ ಕೂಡಲೇ ನಶೆ ಸರಕ್ಕನೇ ಇಳಿದು ಹೋಗಿತ್ತು. ಅಲ್ಲೆ ಇದ್ದ ಕೂಲಿ ಕಾರ್ಮಿಕ ಇವನಿಗೆ ಸಿಕ್ಕಿದ ಕಂತೆ ಕಂತೆ ನೋಟು ಕಂಡು ಹೌಹಾರಿದ್ದ. ಅದೇ ಬಂಡಲ್‌ನಿಂದ ನೋಟ್‌ ಎಳೆದು ಇಬ್ಬರೂ ಸೇರಿ ಮತ್ತೊಂದು ಸುತ್ತು ಗುಂಡು ಹಾಕಿದ್ದರು.

ಬಳಿಕ ೫೦೦ ಹಾಗೂ ೨೦೦೦ ರೂ. ಮುಖಬೆಲೆಯ ಒಂದು ಬಂಡಲ್‌ ಅನ್ನು ಕುಡುಕ ಶಿವರಾಜ್‌, ಕೂಲಿ ಕಾರ್ಮಿಕನಿಗೆ ನೀಡಿದ. ಉಳಿದ ಮೂರು ಬಂಡಲ್‌ ಹಣವನ್ನು ಸೊಂಟದ ಮಧ್ಯೆ ಸಿಕ್ಕಿಸಿಕೊಂಡು ಪುನಃ ವೈನ್‌ ಶಾಪ್‌ನತ್ತ ಹೆಜ್ಜೆ ಹಾಕಿದ. ಹೊರಗೆ ಬರುವಷ್ಟರಲ್ಲಿ ಯಾರೊ ಪೊಲೀಸರಿಗೆ ಮಾಹಿತಿ ನೀಡಿಬಿಟ್ಟಿದ್ದರು. ಪೊಲೀಸರು ಆತನನ್ನು ಕರೆದುಕೊಂಡು ವಿಚಾರಣೆ ಮಾಡಿದಾಗ, ರಸ್ತೆಯಲ್ಲಿ ಹಣದ ಕಂತೆ ಸಿಕ್ಕ ವಿಚಾರ ಹೇಳಿದ. ಜತೆಗೆ ಕೂಲಿ ಕಾರ್ಮಿಕನೊಬ್ಬನಿಗೆ ಹಣ ನೀಡಿದ್ದನ್ನು ತಿಳಿಸಿದ.

ವಾರ ಕಳೆದರೂ ದಾಖಲಾಗದ ಕೇಸ್‌
ಹೀಗೆ ಬೀದಿಯಲ್ಲಿ ಸಿಕ್ಕ ಹಣ ಯಾರದ್ದು? ವಾರಸುದಾರರು ಯಾರಾದರೂ ಹಣ ಕಳೆದುಕೊಂಡ ಬಗ್ಗೆ ದೂರು ನೀಡಲಾಗಿದೆಯೇ ಎಂದರೆ ಈವರೆಗೂ ಯಾರೊಬ್ಬರು ಹಣ ಕಳೆದುಕೊಂಡ ಬಗ್ಗೆ ದೂರು ಬಂದಿಲ್ಲ. ಕುಡುಕನಿಗೆ ಸಿಕ್ಕಿದ್ದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ ಎಂಬ ಪ್ರಶ್ನೆಯೂ ಮೂಡಿದೆ. ಕಂಕನಾಡಿ ಪೊಲೀಸರು ಹತ್ತು ಲಕ್ಷ ರೂಪಾಯಿ ಜತೆಗೆ ಕುಡುಕ ಶಿವರಾಜ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ಆದರೆ ಮೂರು ದಿನದ ಬಳಿಕ ಠಾಣೆಯಿಂದ ಶಿವರಾಜ್‌ನನ್ನು ಬಿಟ್ಟು ಕಳುಹಿಸಿದ್ದಾರಂತೆ. ಘಟನೆ ನಡೆದು ವಾರ ಕಳೆದರೂ ಹಣದ ಬಗ್ಗೆ ಪೊಲೀಸರು ‌ಪ್ರಕರಣ ದಾಖಲಿಸಿಲ್ಲ. ಹೀಗಾಗಿ ಸಿಕ್ಕ ಹಣವು ಪೊಲೀಸರ ಪಾಲಾಯ್ತಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ | Woman Murdered | 35 ವರ್ಷದ ಮಹಿಳೆಯನ್ನು ಕೊಂದು, ಆಕೆಯ ದೇಹವನ್ನು ಕತ್ತರಿಸಿ ಡ್ರಮ್‌ನಲ್ಲಿ ತುಂಬಿಟ್ಟ!

Exit mobile version