Site icon Vistara News

World Bunts Conference: ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ: ಸಿಎಂ ಭರವಸೆ

Siddaramaiah was felicitated in World Bunts Conference

ಉಡುಪಿ: ಬಂಟ ಸಮುದಾಯ ವಿಶ್ವದಾದ್ಯಂತ ವಿಸ್ತರಿಸಿ ಉದ್ಯಮ ಆರಂಭಿಸಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಮುದಾಯವು (World Bunts Conference) ವಿಶಿಷ್ಟ ಸಂಸ್ಕೃತಿ, ಪರಂಪರೆ ಹೊಂದಿದ್ದು, ಕನ್ನಡ ಚರಿತ್ರೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡುತ್ತಿದೆ. ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಟರು ಸೇರಿ ಮಂಗಳೂರು, ಉಡುಪಿ ಜಿಲ್ಲೆಯವರು ಉದ್ಯಮ ಸಾಹಸಿಗಳು. ವಿಶ್ವದ ಎಲ್ಲಾ ಕಡೆ ಹರಡಿದ್ದು, ತಾವು ಹೋಗುವ ಎಲ್ಲಾ ಕಡೆ ಜನರ ಬೆರೆತು, ಸಹೃದಯತೆಯಿಂದ ಬಾಳುತ್ತಾರೆ. ಇದು ಬಂಟರ ಸಮುದಾಯದ ಹೆಗ್ಗಳಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರೀಡೆ, ಸಿನಿಮಾ, ಶಿಕ್ಷಣ, ಹೋಟೆಲ್ ಉದ್ಯಮ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಬಂಟರು ತಮ್ಮ ಛಾಪು ಮೂಡಿಸಿದ್ದಾರೆ. ಎಲ್ಲೇ ಹೋದರೂ ತಮ್ಮ ಭಾಷೆ, ಸಂಸ್ಕೃತಿಯನ್ನು ಪಸರಿಸುತ್ತಾರೆ. ತುಳು ಮೇಲಿನ ನಿಮ್ಮ ಪ್ರೀತಿ ಮತ್ತು ಅಕ್ಕರೆ ಅನುಕರಣೀಯ. ಇದು ಹೆಮ್ಮೆಯ ವಿಚಾರ. ಪ್ರತಿಯೊಬ್ಬರು ಅವರವರ ಮಾತೃಭಾಷೆಗೆ ಗೌರವ ಕೊಡುವುದರಿಂದ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುತ್ತದೆ ಎಂದರು.

ಬಂಟ ಸಮಾಜ ಜಾತ್ಯತೀತ ಸಮುದಾಯ. ಸರ್ವರನ್ನೂ ಸಮಾನ ಪ್ರೀತಿಯಿಂದ ಕಾಣುವ ಮಾನವೀಯ ಮೌಲ್ಯವನ್ನು ಆಚರಿಸುತ್ತಿದೆ. ಇದು ಹೆಮ್ಮೆಯ ಸಂಗತಿ. ಮನುಷ್ಯ ದ್ವೇಷವನ್ನು ಬಂಟ ಸಮುದಾಯ ಯಾವತ್ತೂ ಬೆಂಬಲಿಸುವುದಿಲ್ಲ. ಇದು ಅತ್ಯಂತ ಶ್ಲಾಘನೀಯ ಎಂದರು.‌

ಇದನ್ನೂ ಓದಿ | Valmiki Jayanti: ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ: ಸಿದ್ದರಾಮಯ್ಯ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಆರ್.ಜಿ ಗ್ರೂಪ್‌ನ ಕೆ.ಪ್ರಕಾಶ್ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಶಾಸಕರಾದ ಅಶೋಕ್ ಕುಮಾರ್ ರೈ, ಯಶಪಾಲ್ ಸುವರ್ಣ, ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಡಾ.ಪಿ.ವಿ.ಶೆಟ್ಟಿ, ಸಂತೋಷ್ ಗುರು, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಅಭಯ ಚಂದ್ರ ಜೈನ್, ಜಿ.ಎ.ಭಾವ ಮತ್ತಿತರರು ಉಪಸ್ಥಿತರಿದ್ದರು.

Exit mobile version