ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಚಲಿಸುತ್ತಿರುವಾಗಲೇ ಖಾಸಗಿ ಬಸ್ (Fire Accident) ಏಕಾಏಕಿ ಹೊತ್ತಿ ಉರಿದಿದೆ. ಸುಮಾರು 60 ಪ್ರಯಾಣಿಕರಿದ್ದ ಬಸ್‌ನ ಟಯರ್ ಸ್ಫೋಟಗೊಂಡು ಧಗಧಗನೆ ಹೊತ್ತಿ ಉರಿದಿದೆ. ನಿದ್ದೆಯ ಮಂಪರಿನಲ್ಲಿದ್ದ ಜನ ಆತಂಕದಲ್ಲೇ ಹೊರಗೆ ಓಡಿಬಂದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.
ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ಹಟ್ಟಿಗೆ ತೆರಳುತ್ತಿದ್ದಾಗ ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿಯ ಕೆನ್ನಾಲಗೆಗೆ ಸಿಲುಕಿದ ನಾಗಶ್ರೀ ಎಂಬ ಖಾಸಗಿ ಬಸ್ ಸುಟ್ಟು ಕರಕಲಾಗಿದೆ. ಏಕಾಏಕಿ ಟಯರ್ ಸ್ಫೋಟಗೊಂಡ ಕಾರಣ ಹೊತ್ತಿ ಉರಿದಿದೆ. ಆದಾಗ್ಯೂ, ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.
ಅಗ್ನಿ ಅವಘಡದ ವಿಡಿಯೊ
ಬಸ್‌ನಲ್ಲಿ ಎಮರ್ಜೆನ್ಸಿ ಫೈಯರ್ ಎಕ್ಸಿಸ್ಟೆನ್ಸ್ ಇಲ್ಲದಿರುವ ಕಾರಣ ಬಸ್ ಸಂಪೂರ್ಣವಾಗಿ ಭಸ್ಮವಾಗಿದೆ. ಫೈಯರ್ ಎಕ್ಸಿಸ್ಟನ್ಸ್ ಇದ್ದಿದ್ದರೆ ಬೆಂಕಿ ನಂದಿಸಬಹುದಿತ್ತು. ಮತ್ತೊಂದೆಡೆ ಬೆಂಕಿ ನಂದಿಸಲು 112ಗೆ ಕರೆ ಮಾಡಿದರೂ ಅದು ದೆಹಲಿಗೆ ಸಂಪರ್ಕ ಕಲ್ಪಿಸುತ್ತದೆ, ಹತ್ತಿರದ ಠಾಣೆಗೆ ಸಂಪರ್ಕ ಆಗಿಲ್ಲ. ಟಯರ್‌ಗೆ ಮಾತ್ರ ಬೆಂಕಿ ಹೊತ್ತಿದ ಕಾರಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದರೆ ನಂದಿಸಬಹುದಿತ್ತು ಎಂದು ಹೈವೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಸ್ ಮಾಲೀಕರ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರ ಬ್ಯಾಗ್ ಸೇರಿ ಹಲವು ವಸ್ತುಗಳು ಅಗ್ನಿಗಾಹುತಿಯಾಗಿವೆ.
ಫ್ಯಾಷನ್ ಮಳಿಗೆಗೆ ಬೆಂಕಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಫ್ಯಾಷನ್ ಮಳಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ರಾಯ್ ಫ್ಯಾಷನ್ ಮಳಿಗೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಯು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಆದರೂ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟಿವೆ.