ಚಿಕ್ಕಬಳ್ಳಾಪುರ: ರಸ್ತೆ ಮೇಲೆ ಯಾರದ್ದಾದರೂ 10 ರೂ. ಬಿದ್ದರೂ, ಅದನ್ನು ಮೆಲ್ಲಗೆ ಜೇಬಿಗಿಳಿಸುವ, ಸಾಧ್ಯವಾದರೆ ಬೇರೆಯವರ ಜೇಬಿನಿಂದಲೇ ಹಣ ಎಗರಿಸುವ ಕಾಲ ಇದು. ಈಗಿನ ಕಾಲದಲ್ಲಿ ಪ್ರಾಮಾಣಿಕತೆಯನ್ನು (Honesty) ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ ಎಂಬುದು ಕ್ಲೀಷೆ ಆಗಿರದೆ, ವಾಸ್ತವವೂ ಆಗಿದೆ. ಇಂತಹ ಕಾಲದಲ್ಲೂ ಪ್ರಾಮಾಣಿಕರು ಇದ್ದಾರೆ ಎಂಬುದು ಚಿಕ್ಕಬಳ್ಳಾಪುರದಲ್ಲಿ (Chikkaballapur) ಸಾಬೀತಾಗಿದೆ. ದಂಪತಿಯು ಬಸ್‌ನಲ್ಲಿ ಮರೆತು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಅವರಿಗೆ ಹಿಂತಿರುಗಿಸುವ ಮೂಲಕ ಬಸ್ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಂಗಳೂರಿನ ಆಂಜಿನಪ್ಪ ಲೇಔಟ್ ನಿವಾಸಿಗಳಾದ ಪ್ರಕಾಶ್ ಹಾಗೂ ಪ್ರಮೀಳಾ ದಂಪತಿಗೆ ಬಸ್ ಕಂಡಕ್ಟರ್ ಚಿನ್ನಾಭರಣಗಳನ್ನು ಹಿಂತಿರುಗಿಸಿದ್ದಾರೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ವೇಳೆ ದಂಪತಿಯು ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಬಸ್‌ನಲ್ಲಿಯೇ ಬಿಟ್ಟು ಹೋಗಿದ್ದರು. ಒಡೆಗಳನ್ನು ನೋಡಿದ ಬಸ್ ಕಂಡಕ್ಟರ್, ಅವುಗಳನ್ನು ಸಾರಿಗೆ ಬಸ್ ನಿರ್ವಾಹಕ ಸಿ.ವಿ. ರಮೇಶ್ ಅವರಿಗೆ ನೀಡಿದ್ದಾರೆ. ಇದಾದ ಬಳಿಕ ದಂಪತಿಗೆ ಒಡವೆಗಳನ್ನು ಹಿಂತಿರುಗಿಸಲಾಗಿದೆ.
ಬಸ್‌ನಲ್ಲಿ ಚಿನ್ನಾಭರಣ ಮರೆತುಹೋದ ದಂಪತಿಗೆ ಅವು ವಾಪಸ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿತ್ತು. ಯಾರೂ ವಾಪಸ್ ಕೊಡುವುದಿಲ್ಲ ಎಂದು ಭಾವಿಸಿದ್ದರು. ಆದರೆ, ಬಸ್ ನಿರ್ವಾಹಕರು ಪ್ರಮಾಣಿಕತೆಯಿಂದ ಒಡವೆಗಳನ್ನು ಹಿಂತಿರುಗಿಸಿದ್ದಕ್ಕೆ ದಂಪತಿಗೆ ಖುಷಿಯಾಗಿದೆ. ಹಾಗೆಯೇ, ಒಡವೆಗಳನ್ನು ವಾಪಸ್ ಕೊಟ್ಟ ಕಂಡಕ್ಟರ್‌ಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Shivamogga News: ಆಟೋದಲ್ಲಿ ಮರೆತು ಹೋದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ
ಕೆಲ ದಿನಗಳ ಹಿಂದಷ್ಟೇ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಆಟೋ ಚಾಲಕರೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಹಣವುಳ್ಳ ಬ್ಯಾಗ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದಿದ್ದರು. ಮಹಿಳೆಯೊಬ್ಬರು ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದ ಹಣ ಹಾಗೂ ಮೊಬೈಲ್ ಇದ್ದ ಬ್ಯಾಗ್ ಅನ್ನು ಆಟೋ ಚಾಲಕರು ವಾಪಸ್ ಕೊಟ್ಟಿದ್ದರು. ಪಟ್ಟಣದ ಆಟೋ ಚಾಲಕ ನಂಜುಂಡ ಎಂಬುವವರು ಮಹಾತ್ಮ ಗಾಂಧಿ ರಸ್ತೆಯಲ್ಲಿನ ಎಸ್‌ಬಿಐ ಬ್ಯಾಂಕ್ ಆಟೋ ನಿಲ್ದಾಣಕ್ಕೆ ಆಟೋ ಚಲಾಯಿಸಿಕೊಂಡು ಹೋಗುತ್ತಿರುವಾಗ ರಸ್ತೆಯಲ್ಲಿ ಬ್ಯಾಗ್ ಬಿದ್ದಿರುವುದನ್ನು ಗಮನಿಸಿ, ಅದನ್ನು ಮಹಿಳೆಗೆ ವಾಪಸ್ ಕೊಟ್ಟಿದ್ದರು.