ಬೆಂಗಳೂರು: ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರು (Bus Strike In Karnataka) ಸಜ್ಜಾಗಿದ್ದಾರೆ. ಹಿಂದೊಮ್ಮೆ ಸಾಮೂಹಿಕವಾಗಿ ಕೆಲಸಕ್ಕೆ ಗೈರು ಹಾಜರಾಗಿ ಬರೋಬ್ಬರಿ 15 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ನಾಲ್ಕು ನಿಗಮಗಳಿಗೆ ಸುಮಾರು 287 ಕೋಟಿ ರೂ. ಆದಾಯ ನಷ್ಟ ಉಂಟಾಗಿತ್ತು. ಇದೀಗ ಮಾರ್ಚ್ 1ರಿಂದ ಕುಟುಂಬ ಸಮೇತ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಾರಿಗೆ ನೌಕರರು ಎಚ್ಚರಿಸಿದ್ದಾರೆ.
2023-2024ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸರ್ಕಾರ ಸಾರಿಗೆ ನೌಕರರಿಗೆ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸದೆ ನಿರಾಸೆ ಉಂಟು ಮಾಡಿರುವುದರಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಪ್ರತಿಭಟನೆಗೆ ಕರೆ ಕೊಟ್ಟಿದೆ.
ಸರ್ಕಾರವು ಕಳೆದ 2021ರ ಡಿಸೆಂಬರ್‌ನಲ್ಲಿ ಸಾರಿಗೆ ಮುಷ್ಕರದ ಸಮಯದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುವುದಾಗಿ ಲಿಖಿತ ಭರವಸೆ ಕೊಟ್ಟಿತ್ತು. ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಸರ್ಕಾರ ಸಾರಿಗೆ ನೌಕರರಿಗೆ ನೀಡಿದ ಲಿಖಿತ ಭರವಸೆಯನ್ನು ಈಡೇರಿಸುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸಾರಿಗೆ ಸಂಸ್ಥೆಯ 1.07 ಲಕ್ಷ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರಿಗೆ ಭಾರಿ ನಿರಾಸೆಯಾಗಿದೆ.
ಆದ್ದರಿಂದ ಸರ್ಕಾರ ಸಾರಿಗೆ ನೌಕರರ ಮೇಲೆ ತೋರುತ್ತಿರುವ ನಿರ್ಲಕ್ಷ್ಯತನವನ್ನು ಖಂಡಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (Freedom park) ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರು ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ತೀರ್ಮಾನಿಸಿವೆ.
ಇದನ್ನೂ ಓದಿ: Cable TV Channel Price hike : 4.5 ಕೋಟಿ ಕೇಬಲ್ ಟಿ.ವಿ ಗ್ರಾಹಕರಿಗೆ ಜೀ, ಸ್ಟಾರ್, ಸೋನಿ ಪ್ರಸಾರ ಸ್ಥಗಿತ
ಬೇಡಿಕೆಗಳೇನು?
-ಮುಷ್ಕರದ ಸಮಯದಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ನೌಕರರಿಗೆ ಆಗಿರುವ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಿ 2021ರ ಯಥಾಸ್ಥಿತಿ ಕಾಪಾಡುವುದು.
-ಸರ್ಕಾರ ನೀಡಿರುವ ಲಿಖಿತ ಭರವಸೆಯಂತೆ ಸಾರಿಗೆ ನೌಕರರಿಗೂ ವೇತನ ಆಯೋಗದ ಮಾದರಿಯಲ್ಲಿ ಸರ್ಕಾರಿ ನೌಕರರ ಸರಿ ಸಮಾನ ವೇತನ ನೀಡುವುದು.
-ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸುವುದು.
-ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಯೋಜನೆಯನ್ನು ಕೂಡಲೇ ಕೈ ಬಿಡುವುದು
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ