ಬೆಂಗಳೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರುಗಳತ್ತ ಹೊರಟ ಮಂದಿಗೆ ಖಾಸಗಿ ಬಸ್ ಮಾಲೀಕರು (private buses) ಭಾರಿ ಶಾಕ್ ನೀಡಿದ್ದಾರೆ. ಟಿಕೆಟ್ ದರ (Bus Ticket) ಎರಡು ಪಟ್ಟು, ಕೆಲವೆಡೆ ಮೂರು ಪಟ್ಟು ಹೆಚ್ಚಿಸಲಾಗಿದೆ. ಊರಿನಿಂದ ಮರಳಿ ಬರುವ ದರವೂ ದುಬಾರಿಯಾಗಿದೆ.
ವಿಕೇಂಡ್, ಮಂಗಳವಾರ ಆಗಸ್ಟ್ 15ರ ರಜೆ, ಇದರ ನಡುವೆ ಸೋಮವಾರ ಒಂದು ದಿನ ರಜೆ ಮಾಡಿ ಶುಕ್ರವಾರವೇ ಬೆಂಗಳೂರಿನಿಂದ ತಮ್ಮ ಊರುಗಳ ಕಡೆಗೆ ಹೊರಟ ಮಂದಿಗೆ ಟಿಕೆಟ್ ದರ್ ಏರಿಕೆ ಶಾಕ್ ನೀಡಿದೆ. ಗುರುವಾರ 700, 800 ರೂಪಾಯಿ ಇದ್ದ ಟಿಕೆಟ್ ದರ ಶುಕ್ರವಾರ ಹಾಗೂ ಶನಿವಾರಕ್ಕೆ 1300ರಿಂದ 1400 ರೂಪಾಯಿಗೆ ಏರಿಕೆಯಾಗಿದೆ. ಮಂಗಳವಾರ ರಾತ್ರಿ ರಾಜಧಾನಿಗೆ ಬರುವ ಬಸ್ಸುಗಳ ಟಿಕೆಟ್ ಬೆಲೆಯೂ ಅಷ್ಟೇ ಪ್ರಮಾಣದಲ್ಲಿ ಏರಿದೆ. ಬಸ್ ಬುಕ್ಕಿಂಗ್ ಹೆಚ್ಚಳವಾಗುತ್ತಿದ್ದಂತೆ ಏಕಾಏಕಿ ಖಾಸಗಿ ಬಸ್ ಮಾಲೀಕರು ಟೆಕೆಟ್ ಬುಕ್ಕಿಂಗ್ ಆ್ಯಪ್‌ನಲ್ಲಿ ಡಬಲ್ ದರ ಏರಿಸಿದ ಪರಿಣಾಮ ಪ್ರಯಾಣಿಕರು ಕಂಗಾಲಾದರು.
ಬೆಂಗಳೂರು- ಶಿವಮೊಗ್ಗ ಸಾಮಾನ್ಯ ಟಿಕೆಟ್ ದರ- ₹450-₹550, ಶುಕ್ರವಾರ, ಶನಿವಾರ ಹಾಗೂ ಮಂಗಳವಾರ ರಿಟರ್ನ್- ₹1100-₹1200 (2)
ಬೆಂಗಳೂರು – ಬಾಗಲಕೋಟ ಸಾಮಾನ್ಯ ಟಿಕೆಟ್ ದರ – ₹800-₹900, ಶುಕ್ರವಾರ, ಶನಿವಾರ ಹಾಗೂ ಮಂಗಳವಾರ ರಿಟರ್ನ್- ₹1600-₹1800
ಬೆಂಗಳೂರು- ಹುಬ್ಬಳ್ಳಿ, ಸಾಮಾನ್ಯ ಟಿಕೆಟ್ ದರ- ₹700-₹900, ಶುಕ್ರವಾರ, ಶನಿವಾರ ಹಾಗೂ ಮಂಗಳವಾರ ರಿಟರ್ನ್- ₹1100-₹1600
ಬೆಂಗಳೂರು-ಮಂಗಳೂರು, ಸಾಮಾನ್ಯ ಟಿಕೆಟ್ ದರ- ₹850-₹900, ಶುಕ್ರವಾರ, ಶನಿವಾರ ಹಾಗೂ ಮಂಗಳವಾರ ರಿಟರ್ನ್- ₹1400-₹2100
ಬೆಂಗಳೂರು – ಉಡುಪಿ, ಸಾಮಾನ್ಯ ಟಿಕೆಟ್ ದರ(ನಾನ್ ಎಸಿ) – ₹750-₹950, ಶುಕ್ರವಾರ, ಶನಿವಾರ ಹಾಗೂ ಮಂಗಳವಾರ ರಿಟರ್ನ್- ₹1350-₹2400, ಎಸಿ ಬಸ್- ₹1000-₹1200, ಏರಿದ ದರ – ₹2100-₹3500,
ಬೆಂಗಳೂರು – ವಿಜಯಪುರ ಸಾಮಾನ್ಯ ಟಿಕೆಟ್ ದರ – ₹650-850, ಏರಿದ ಟಿಕೆಟ್ ದರ – ₹1400-1600
ಬೆಂಗಳೂರು-ಬೆಳಗಾವಿ ಸಾಮಾನ್ಯ ಟಿಕೆಟ್ ದರ- ₹750-₹1100, ಏರಿದ ಟಿಕೆಟ್ ದರ- ₹1200-₹1900
ಬೆಂಗಳೂರು – ಚಿಕ್ಕಮಗಳೂರು ಸಾಮಾನ್ಯ ಟಿಕೆಟ್ ದರ- ₹650-₹800, ಏರಿದ ಟಿಕೆಟ್ ದರ- ₹1200-₹1500
ಟಿಕೆಟ್ ದರ ಏರಿಕೆ ಕುರಿತಂತೆ ಖಾಸಗಿ ಬಸ್ ಮಾಲೀಕರನ್ನು ಕೇಳಿದರೆ, ಎಲ್ಲ ಕಡೆಗಳಿಗೆ ಹೋಗುವ ಸ್ಥಳಗಳಿಗೆ ದರ ಏರಿಕೆ ಮಾಡಿಲ್ಲ, ಪ್ರವಾಸಿ ಸ್ಥಳಗಳಿಗೆ ಮಾತ್ರ 30%ದಷ್ಟು ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ ಎನ್ನುತ್ತಾರೆ. ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಬಸ್ ಬಿಟ್ಟಾಗಿನಿಂದ ಪ್ರಯಾಣಿಕರು ಬಾರದೇ ಕಂಗಾಲಾಗಿದ್ದ ಖಾಸಗಿ ಬಸ್ ಮಾಲೀಕರು ಈಗ ಸಿಕ್ಕಿದ್ದೇ ಸಿರುಂಡೆ ಎಂಬಂತೆ ಬಾಚಿಕೊಳ್ಳಲು ಮುಂದಾಗಿದ್ದಾರೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.
ಇದನ್ನೂ ಓದಿ: ಫ್ರೀ ಬಸ್ ಎಫೆಕ್ಟ್; ಪ್ರಯಾಣಿಕರಿಲ್ಲದೆ ಬೇಸತ್ತು ಸರ್ಕಾರಿ ಬಸ್ ಚಾಲಕನ ಜತೆ ಜಗಳವಾಡಿದ ಖಾಸಗಿ ಬಸ್ ಚಾಲಕ