ಬೆಂಗಳೂರು: ರಾಜ್ಯದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿ, ವಿಭಿನ್ನ ಔದ್ಯಮಿಕ ಮತ್ತು ಸೇವಾ ಪರಿಕಲ್ಪನೆಗಳೊಂದಿಗೆ ಮುನ್ನಡೆಯುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಮೂಲದ ಡಾ.ಎಚ್.ಎಸ್. ಶೆಟ್ಟಿ (Dr HS Shetty) ಅವರಿಗೆ ಹುಟ್ಟೂರಿನ ಜನರೆಲ್ಲ ಸೇರಿ ಶುಕ್ರವಾರ (ಸೆ. 22) ಅತ್ಯಂತ ಗೌರವಾದರಗಳಿಂದ ಸನ್ಮಾನ ಮಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (Vishweshwarayya Technical University) ಡಾ. ಶೆಟ್ಟಿ ಅವರ ಸಾಧನೆಗಾಗಿ ಡಾಕ್ಟರ್ ಆಫ್ ಸೈನ್ಸ್ (Doctor of Science) ನೀಡಿ ಗೌರವಿಸಿದ್ದನ್ನು ಊರಿನ ಜನ ತಮ್ಮೂರಿನ ಕಿರೀಟಕ್ಕೆ ಮುಡಿದ ಗರಿ ಎಂಬಂತೆ ಸಂಭ್ರಮಿಸಿದರು.
ಶುಕ್ರವಾರ ಬೆಳಗ್ಗೆ ಹಾಲಾಡಿಯ ಶಾಲಿನಿ. ಜಿ. ಶಂಕರ್ ಕನ್ವೆನ್‌ಶನ್ ಸೆಂಟರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಗಣ್ಯರೂ ಅತ್ಯಂತ ಕಷ್ಟದ ಬಾಲ್ಯದಿಂದ, ಕಷ್ಟಪಟ್ಟು ವಿದ್ಯಾಭ್ಯಾಸ ಪಡೆದು, ಕಠಿಣ ಪರಿಶ್ರಮದೊಂದಿಗೆ ಅದ್ವಿತೀಯ ಸಾಧನೆ ಮಾಡುತ್ತಿರುವ ಡಾ. ಎಚ್.ಎಸ್ ಶೆಟ್ಟಿ ಅವರ ಆದರ್ಶ ಮತ್ತು ಆದರಣೀಯ ಬದುಕನ್ನು ಕೊಂಡಾಡಿದರು. ಅವರು ವೃತ್ತಿಪರ ಬದುಕಿನಲ್ಲಿ ಮಾಡಿದ ಸಾಧನೆಯ ಜತೆಗೆ ಅವರು ತಮ್ಮ ಊರು, ನಾಡಿಗಾಗಿ ಮಾಡುತ್ತಿರುವ ಸೇವೆ, ಬಡ ಮಕ್ಕಳ ಶಿಕ್ಷಣಕ್ಕೆ ಅವರು ಬೆಂಗಾವಲಾಗಿ ನಿಂತಿರುವ ಬಗೆಯನ್ನು ತೆರೆದಿಟ್ಟರು.
ಡಾ. ಎಚ್.ಎಸ್. ಶೆಟ್ಟಿ ಮತ್ತು ಡಾ. ಸುಮನಾ ಶೆಟ್ಟಿ ದಂಪತಿ ಹುಟ್ಟೂರಿನ ಜನರ ಪ್ರೀತಿ, ಗಣ್ಯರ ಅಭಿಮಾನದ ನುಡಿಗಳಿಂದ ಬದುಕಿನ ಸಾರ್ಥಕ್ಯದ ಅನುಭೂತಿಯನ್ನು ಅನುಭವಿಸಿದರು. ಸಾವಿರಾರು ಜನರು ಸೇರಿದ್ದ ಸಭಾಂಗಣದಲ್ಲಿ ಮಗನ ಸಾಧನೆಯ ಪುಟಗಳು ಒಂದೊಂದಾಗಿ ತೆರೆದುಕೊಂಡಾಗ ಕೇಳಿದ ಚಪ್ಪಾಳೆಗಳಿಗೆ ಕಿವಿಯಾದ ಡಾ. ಎಚ್.ಎಸ್ ಶೆಟ್ಟಿ ಅವರ ತಾಯಿ ನಿವೃತ್ತ ಶಿಕ್ಷಕಿ ಸರೋಜಿನಿ ಶೆಟ್ಟಿ ಅವರು ಧನ್ಯತೆಯ ಕ್ಷಣಗಳನ್ನು ಎದೆಯೊಳಗೆ ತುಂಬಿಕೊಂಡರು. ಶಿಕ್ಷಕರಾಗಿದ್ದ ತಂದೆ ಹೆಗ್ಗುಂಜೆ ರಾಜೀವ್ ಶೆಟ್ಟಿ ಅವರ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಡಾ. ಶೆಟ್ಟಿ ಅವರು ನಡೆಸುತ್ತಿರುವ ಸಾಮಾಜಿಕ ಕೈಂಕರ್ಯಗಳು ಅನ್ಯಾದೃಶ ಎಂದು ಜನರು ಕೊಂಡಾಡಿದ ಕ್ಷಣಗಳು ಸಭಾಂಗಣವನ್ನೇ ಭಾವುಕಗೊಳಿಸಿದವು.
ಎತ್ತರಕ್ಕೇರಿದರೂ ಬಡವರ ಸೇವೆಗೆ ನಿಂತ ಸಾಧಕನಿಗೆ ಸನ್ಮಾನ
ಡಾ ಎಚ್.ಎಸ್.ಶೆಟ್ಟಿ ಅವರು ಹೋಟೆಲ್ ಉದ್ಯಮಿಯಾಗಿ ಹೊಸ ಎತ್ತರಕ್ಕೆ ಏರಿದ ಬಳಿಕ ಉದ್ಯಮವನ್ನು ಹಲವು ದಿಕ್ಕುಗಳಲ್ಲಿ ವಿಸ್ತರಿಸಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಬಟ್ಟೆ ಮತ್ತು ಖಾದ್ಯ ತೈಲ ವಹಿವಾಟು, ಕೃಷಿ ಸಂಬಂಧಿ ಉತ್ಪನ್ನಗಳ ಮಾರಾಟ, ದೊಡ್ಡ ಪ್ರಮಾಣದ ವಿದ್ಯುತ್ ಉತ್ಪಾದನೆ, ವಿದೇಶಕ್ಕೆ ರಫ್ತು ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ. ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತ ರೈತರಿಗೆ ನೆರವಾಗುತ್ತಿರುವ ಇವರಿಗೆ ಆರು ಬಾರಿ ಬೆಸ್ಟ್ ಎಕ್ಸ್‌ಪೋರ್ಟ್ ಅವಾರ್ಡ್ ಲಭಿಸಿದೆ. ಅದೆಲ್ಲವನ್ನೂ ಮೀರಿದ್ದು ಅವರ ಸಮಾಜ ಸೇವೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರು ಸಾವಿರಾರು ಮಕ್ಕಳಿಗೆ ಉಚಿತ ಸಮವಸ್ತ್ರ, ಶಾಲೆಗಳಿಗೆ ಕೊಡುಗೆ ನೀಡುವ ಮೂಲಕ ಕೆರೆಯ ನೀರನು ಕೆರೆಗೆ ಚೆಲ್ಲುವ ಕಾಯಕ ಮಾಡುತ್ತಿದ್ದಾರೆ. ವಿಸ್ತಾರ ನ್ಯೂಸ್‌ನ (Vistara News) ಕಾರ್ಯ ನಿರ್ವಾಹಕ ಚೇರ್ಮನ್ (Executive Chairman) ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ಅವರ ವೈವಿಧ್ಯಮಯ ಆಸಕ್ತಿಯನ್ನು ಕಂಡು ನಿಬ್ಬೆರಗಾದ ಜನ ʻನಮ್ಮೂರ ಸಾಧಕʼನನ್ನು ಖುಷಿಯಿಂದ ಸನ್ಮಾನಿಸಿ ಸಂಭ್ರಮಿಸಿದರು.
ಇದನ್ನೂ ಓದಿ: VTU Convocation : ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ವಿಟಿಯು ಗೌರವ ಡಾಕ್ಟರೇಟ್ ಪ್ರದಾನ
ಸಾಧಕನ ಸನ್ಮಾನಕ್ಕೆ ನೆರೆದಿತ್ತು ಗಣ್ಯರ ದಂಡು
ಡಾ. ಎಚ್.ಎಸ್. ಶೆಟ್ಟಿ ಅವರ ಸನ್ಮಾನ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್ ಕೋಣೆಮನೆ, ಉದ್ಯಮಿ ಎಂ. ದಿನೇಶ್ ಹೆಗ್ಡೆ, ಹಾಲಾಡಿಯ ಗ್ರಾ.ಪಂ ಅಧ್ಯಕ್ಷ ಅಶೋಕ ಶೆಟ್ಟಿ ಭಾಗವಹಿಸಿ ಸನ್ಮಾನಿಸಿ ಖುಷಿಪಟ್ಟರು.
ದೇವರೇ ಇವರನ್ನು ಕಳುಹಿಸಿಕೊಟ್ಟಿದ್ದಾರೆ ಎಂದರು ಲಕ್ಷ್ಮೀ ಹೆಬ್ಬಾಳ್ಕರ್
ಸಮಾರಂಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಆ ದೇವರೇ ನಿಮಗೆ ಈ ರೀತಿಯಾಗಿ ಶಕ್ತಿ ತುಂಬಿ ಕಳುಹಿಸಿಕೊಟ್ಟಿದ್ದಾನೆ. ಯಾಕೆಂದರೆ, ಎಲ್ಲರಿಗೂ ಈ ರೀತಿಯ ಮನಸು, ಹೃದಯ ವೈಶಾಲ್ಯ ಬರುವುದಿಲ್ಲ ಎಂದು ಹೇಳಿದರು. ಎಚ್.ಎಸ್. ಶೆಟ್ಟಿ ಅವರು ಸಾಧನೆಯಲ್ಲೂ ಸಮಾಜ ಸೇವೆಯಲ್ಲೂ ನಮಗೆ ಆದರ್ಶಪ್ರಾಯರು ಎಂದು ಹೃದಯ ತುಂಬಿ ಮಾತನಾಡಿದರು.
ತಮ್ಮ ಜೀವನದ ಶಿಲ್ಪಿ ತಾವೇ ಆದ ಎಚ್.ಎಸ್.ಶೆಟ್ಟಿ: ಹರಿಪ್ರಕಾಶ್ ಕೋಣೆಮನೆ
ವಿವೇಕಾನಂದರು ಹೇಳಿದ ಒಂದು ಮಾತು ಎಚ್.ಎಸ್. ಶೆಟ್ಟಿ ಅವರಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ನಿನ್ನ ಜೀವನದ ಶಿಲ್ಪಿ ನೀನೇ ಎಂಬ ವಿವೇಕಾನಂದರ ಮಾತಿನಂತೆ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡ ಸಾಧಕ ಎಚ್.ಎಸ್. ಶೆಟ್ಟಿ ಅವರು ಎಂದವರು ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ.
ಡಾ.ಎಚ್.ಎಸ್ ಶೆಟ್ಟಿ ಅವರು ಎಲ್ಲೂ ವಿರಮಿಸುವವರಲ್ಲ. ಒಂದು ನಿರ್ದಿಷ್ಟ ಉದ್ಯಮಕ್ಕೆ ಅಂಟಿಕೊಳ್ಳುವವರಲ್ಲ. ಹೊಸತನ್ನು ಹುಡುಕುತ್ತಾ ಹೋಗುವುದು ಅವರ ಜಾಯಮಾನ. ಅದಕ್ಕಾಗಿಯೇ ಅವರು ಬೆಹರಿನ್‌ನಲ್ಲಿ ಇದ್ದ ಒಳ್ಳೆಯ ಉದ್ಯಮವನ್ನು, ಅಮೆರಿಕದ ಕಂಪನಿಯ ಉದ್ಯೋಗ ಆಫರನ್ನು ತಿರಸ್ಕರಿಸಿ ಭಾರತಕ್ಕೆ ಬಂದವರು ಎಂಬುದನ್ನು ನೆನಪಿಸಿದರು. ತಾವು ತಮ್ಮ ಊರಿನಲ್ಲೇ ಉದ್ಯಮ ಸ್ಥಾಪನೆ ಮಾಡಿ, ಊರಿನವರಿಗೆ ಕೆಲಸ ಕೊಡಬೇಕು, ತಮ್ಮ ಉದ್ಯಮದ ಲಾಭ, ತೆರಿಗೆ ಎಲ್ಲವೂ ತಮ್ಮ ದೇಶಕ್ಕೇ ಸೇರಬೇಕು ಎಂಬ ಕಾರಣಕ್ಕಾಗಿ ಅವರು ಭಾರತಕ್ಕೆ, ತಮ್ಮ ಊರಿಗೆ ಮರಳಿದ್ದಾರೆ ಎಂದು ಹೇಳಿದರು.
ಎಚ್.ಎಸ್. ಶೆಟ್ಟಿ ಅವರು ಈಗ ಶ್ರೀಮಂತರಾಗಿರಬಹುದು. ಆದರೆ, ತಮ್ಮ ಬಾಲ್ಯದ ನೋವನ್ನು ಅವರು ಮರೆತಿಲ್ಲ. ಈಗ ಅದೆಷ್ಟೋ ಬಡ ಮಕ್ಕಳಿಗೆ ಶಿಕ್ಷಣದ ಸವಲತ್ತುಗಳನ್ನು ಒದಗಿಸುವ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಸೇರಿದಂತೆ ಸವಲತ್ತು ಒದಗಿಸಿದ್ದಾರೆ. ಅದಕ್ಕೆ ಅವರು ವರ್ಷಂಪ್ರತಿ ಖರ್ಚು ಮಾಡುವ ಮೊತ್ತ ಏಳೆಂಟು ಕೋಟಿ ರೂ. ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಹುಟ್ಟೂರು, ನಾಡಿಗಾಗಿ ಹಲವು ಕೊಡುಗೆ ಘೋಷಿಸಿದ ಡಾ.ಎಚ್.ಎಸ್ ಶೆಟ್ಟಿ
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಚ್.ಎಸ್. ಶೆಟ್ಟಿ ಅವರು ತಮ್ಮ ಬದುಕಿನ ಸಿಂಹಾವಲೋಕನ ಮಾಡಿಕೊಂಡರು. ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟದ ಜೀವನ ಸವೆಸಿ ಪಂಚೆ ಸೀನನಾಗಿದ್ದು, ಹೊಟ್ಟೆಗೆ ಹಿಟ್ಟಿಲ್ಲದ ದಿನಗಳನ್ನು ನೆನಪಿಸಿಕೊಂಡರು. ತಮ್ಮ ಬದುಕಿಗೆ ದಾರಿದೀಪವಾಗಿದ್ದ ಹಾಲಾಡಿಯ ಹಿರಿಯ ವ್ಯಕ್ತಿ ವಿ.ಆರ್. ಪಟೇಲ್ ಹಿರಿಯಣ್ಣ ಶೆಟ್ಟರ ನಿಧನ, ನಂತರ ಒದಗಿದ ಅತಂತ್ರ ಸ್ಥಿತಿ, ಅಮ್ಮನ ಸೂಚನೆಯಂತೆ ಊರು ಬಿಡಬೇಕಾಗಿ ಬಂದದ್ದು, ಮುಂಬಯಿಯ ಧಾರಾವಿಯ ಉದ್ಯೋಗ, ಗಲ್ಫ್‌ನಲ್ಲಿ ಮಾಡಿದ ಉದ್ಯಮ, ಮರಳಿ ಭಾರತಕ್ಕೆ ಬಂದದ್ದು, ಬೇರೇನೋ ಮಾಡಬೇಕು ಎನ್ನುವ ತುಡಿತ ತಮ್ಮನ್ನು ಉದ್ಯಮಿಯಾಗಿ ರೂಪಿಸಿದ ಪ್ರೇರಣಾದಾಯಿ ಕಥೆ ಹೇಳಿದರು.
ತಪ್ಪು ಮಾಡದಿದ್ದರೆ ಯಾರಿಗೂ ಹೆದರಬೇಕಾಗಿಲ್ಲ ಎಂಬ ಹಿರಿಯಣ್ಣ ಶೆಟ್ಟರ ನುಡಿ, ಡಸ್ಟರ್ ಸಿಗದೆ ಇದ್ದಾಗ ರಾಷ್ಟ್ರ ಧ್ವಜದಲ್ಲೇ ಬೋರ್ಡ್ ಒರೆಸಲು ಹೊರಟ ಮೇಸ್ಟ್ರನ್ನು ತಡೆದು ನಿಲ್ಲಿಸಿದ ಸಾಯಿಬ್ರು ಮಾಸ್ಟ್ರ ದೇಶಪ್ರೇಮ, ಬೇರೆಯವರಿಗಾಗಿಯೇ ಬದುಕಿದ ಅಜ್ಜಿಯ ನಿಸ್ವಾರ್ಥ ಬದುಕಿನ ಒಂದೊಂದು ಕಥೆಗಳು ತಮ್ಮಲ್ಲಿ ಮೂಡಿಸಿದ ಭಾವಗಳೇ ಈವತ್ತಿನ ಈ ಸ್ಥಿತಿಗೆ ಕಾರಣ ಎಂದು ನೆನೆದರು.
ಸನ್ಮಾನ ಸ್ವೀಕರಿಸಿದ ಕ್ಷಣದಲ್ಲಿ ತಮ್ಮೂರು ಮತ್ತು ನಾಡಿಗೆ ಇನ್ನಷ್ಟು ಹೊಸ ಸೇವಾ ಯೋಜನೆಗಳನ್ನು ಡಾ. ಎಚ್ ಎಸ್ ಶೆಟ್ಟಿ ಅವರು ಪ್ರಕಟಿಸಿದರು. ಅವರು ಹೇಳಿದ್ದಿಷ್ಟು:
1. ಬ್ರಹ್ಮಾವರದಲ್ಲಿ ಅತಿ ವಿಶಿಷ್ಟವಾದ ಖಾಸಗಿ ಮತ್ತು ಸರ್ಕಾರಿ ಪಾಲುದಾರಿಕೆಯ ಸರ್ಕಾರಿ ಪಬ್ಲಿಕ್ ಸ್ಕೂಲ್ ನಿರ್ಮಾಣ ಮಾಡುತಿದ್ದೇವೆ. ಡಿಸೆಂಬರ್‌ನಲ್ಲಿ ಅದರ ಉದ್ಘಾಟನೆ ನಡೆಯಲಿದೆ.
2. ಹಾಲಾಡಿಯಲ್ಲಿರುವ ಸಣ್ಣ ಸಣ್ಣ ಶಾಲೆಗಳನ್ನು ಸೇರಿಸಿ ಒಂದು ದೊಡ್ಡ ಪಬ್ಲಿಕ್ ಸ್ಕೂಲ್ ಮಾಡುತ್ತೇನೆ. ನನ್ನೂರಿನ ಮಕ್ಕಳು ಚೆನ್ನಾಗಿ ಓದಬೇಕು ಎನ್ನುವುದು ನನ್ನಾಸೆ.
3. ಚೆನ್ನೈ ಐಐಟಿಯ ಪ್ರಾಧ್ಯಾಪಕರಿಂದ ಕರ್ನಾಟಕದ 150 ಶಾಲೆಗಳಿಗೆ ದೂರ ಶಿಕ್ಷಣ ಕೋಚಿಂಗ್ ಒದಗಿಸುವ ಮೆಗಾ ಪ್ರಾಜೆಕ್ಟ್ ಶುರುವಾಗಲಿದೆ. ಮೊದಲ ವರ್ಷ ಈ ಯೋಜನೆಗೆ ನಾಲ್ಕು ಕೋಟಿ ರೂ. ಬೇಕು. ಉಡುಪಿ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಈ ಕೋಚಿಂಗ್ ಇರುತ್ತದೆ. ಹಾಲಾಡಿ ಶಾಲೆಯನ್ನೂ ಆಯ್ಕೆ ಮಾಡಿದ್ದೇನೆ. ತಮ್ಮ ಮಾತೃಭಾಷೆಯಲ್ಲಿ ಓದಿದ ಮಕ್ಕಳೂ ದೊಡ್ಡ ಸಾಧನೆ ಮಾಡಬಲ್ಲರು ಎನ್ನುವುದನ್ನು ಇಸ್ರೋ ಸಾಧನೆಯ ಹಿಂದಿರುವ ವಿಜ್ಞಾನಿಗಳನ್ನು ನೋಡಿ ಅರಿತಿದ್ದೇನೆ. ಅಂಥಹುದೇ ಸಾಧಕರಾಗಲು ಅವರಿಗೆ ಮಾರ್ಗದರ್ಶನ ಮಾಡುವ ಆಸೆ ನನ್ನದು ಎಂದರು ಡಾ.ಎಚ್.ಎಸ್ ಶೆಟ್ಟಿ.
ಡಾ.ಎಚ್.ಎಸ್ ಶೆಟ್ಟಿ ಅವರ ಹುಟ್ಟೂರ ಸನ್ಮಾನ ಕಾರ್ಯಕ್ರಮ ಇಲ್ಲಿ ನೋಡಿ…
ಇದನ್ನೂ ಓದಿ: VTU Convocation : ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ವಿಟಿಯು ಗೌರವ ಡಾಕ್ಟರೇಟ್ ಪ್ರದಾನ