ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಸಿಬಿ ಪೊಲೀಸರ (Police Raid) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಉದ್ಯಮಿಯೊಬ್ಬರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕೋಟಿ ರೂಪಾಯಿ ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ.
ಹುಬ್ಬಳ್ಳಿಯ ಆಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಉದ್ಯಮಿ ರಮೇಶ್ ಬೊಣಗೇರಿ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಮೂರು ಕೋಟಿ ರೂಪಾಯಿ ಅಕ್ರಮ ಹಣ ಪತ್ತೆಯಾಗಿದೆ. ಮನೆಯಲ್ಲಿ ಅಕ್ರಮವಾಗಿ ಕಪ್ಪು ಹಣ ಸಂಗ್ರಹಿಸಿಟ್ಟಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಸಿಸಿಬಿ ಡಿವೈಎಸ್ಪಿ ನಾರಾಯಣ ಬರಮನಿ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದ್ದು, ಮನೆಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ. ಹೆಚ್ಚಾಗಿ 500 ರೂಪಾಯಿ ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
ಈ ವೇಳೆ ಸಿಸಿಬಿ ಪೊಲೀಸರು, ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಹಣಕ್ಕೆ ಸಮರ್ಪಕ ದಾಖಲೆ ಕೊಡುವಂತೆ ಕೇಳಿದ್ದಾರೆ. ಆದರೆ, ದಾಖಲೆ ನೀಡುವಲ್ಲಿ ಉದ್ಯಮಿ ವಿಫಲವಾದ ಕಾರಣ ಮೂರು ಕೋಟಿ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Boiler blast : ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಐವರು ಕಾರ್ಮಿಕರಿಗೆ ಗಂಭೀರ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ
ಈಗ ಪ್ರಕರಣ ದಾಖಲು ಮಾಡಿಕೊಂಡಿರುವ ಅಶೋಕ ನಗರ ಪೊಲೀಸರು, ತನಿಖೆಯನ್ನು ಮುಂದುವರಿಸಿದ್ದಾರೆ. ಹಣದ ಮೂಲ ಹಾಗೂ ಅಷ್ಟು ಪ್ರಮಾಣದ ಹಣವನ್ನು ಏಕೆ ಮನೆಯಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆದಿದೆ. ಅಲ್ಲದೆ, ಆದಾಯ ತೆರಿಗೆ ಇಲಾಖೆಗೂ ಮಾಹಿತಿಯನ್ನು ನೀಡಲಾಗಿದೆ. ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಗೆ ಕಮಿಷನರ್ ರಮಣ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದು, 25 ಸಾವಿರ ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.