Site icon Vistara News

BY Vijayendra: ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ನಡ್ಡಾ ಭೇಟಿಯಾದ ವಿಜಯೇಂದ್ರ; ಏನೇನು ಚರ್ಚೆ?

JP Nadda And BY Vijayendra

BY Vijayendra Meets BJP National President JP Nadda

ನವದೆಹಲಿ/ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಬಿ.ವೈ.ವಿಜಯೇಂದ್ರ (BY Vijayendra) ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರನ್ನು ಭೇಟಿಯಾಗಿದ್ದಾರೆ. ಅದರಲ್ಲೂ, ಜೆ.ಪಿ. ನಡ್ಡಾ ಅವರ ಜನ್ಮದಿನದಂದೇ ಬಿ.ವೈ. ವಿಜಯೇಂದ್ರ ಅವರು ಭೇಟಿಯಾಗಿದ್ದು, ಇದೇ ವೇಳೆ ರಾಜ್ಯದ ಹಲವು ವಿಚಾರಗಳ ಕುರಿತು ಚರ್ಚಿಸಲಾಗಿದೆ. ಹಾಗೆಯೇ, ನಡ್ಡಾ ಅವರಿಗೆ ವಿಜಯೇಂದ್ರ ಅವರು ಜನ್ಮದಿನದ ಶುಭಾಶಯಗಳನ್ನೂ ತಿಳಿಸಿದ್ದಾರೆ.

ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಬಳಿಕ ಬಿ.ವೈ.ವಿಜಯೇಂದ್ರ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಗೂ ಫೋಟೊಗಳನ್ನು ಹಂಚಿಕೊಂಡಿದ್ದಾರೆ. “ಪಕ್ಷದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ಸ್ವೀಕರಿಸಿದ ತರುವಾಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಜನ್ಮದಿನವಾದ ಇಂದೇ (ಡಿಸೆಂಬರ್‌ 2) ಅವರನ್ನು ಭೇಟಿಯಾಗಿ ಕೃತಜ್ಞತೆ ಸಮರ್ಪಿಸಿದೆ. ಆಶೀರ್ವಾದ ಪಡೆದು, ಶುಭಾಶಯ ಕೋರುವ ಅಪೂರ್ವ ಸಂದರ್ಭ ಒದಗಿ ಬಂದದ್ದು ಧನ್ಯತೆಯ ಭಾವ ಮೂಡಿಸಿತು” ಎಂದು ವಿಜಯೇಂದ್ರ ಬರೆದುಕೊಂಡಿದ್ದಾರೆ.

“ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಯುವ ಪೀಳಿಗೆಯನ್ನು ಉತ್ತೇಜಿಸುತ್ತಿರುವ ನಡ್ಡಾ ಅವರು ನನ್ನ ಬಗ್ಗೆ ಇರಿಸಿರುವ ಅಚಲ ನಂಬಿಕೆಯ ನುಡಿಗಳು ಇಂದು ನನ್ನಲ್ಲಿ ಅದಮ್ಯ ಆತ್ಮ ವಿಶ್ವಾಸದ ಉತ್ಸಾಹ ಮೂಡಿಸುವುದರೊಂದಿಗೆ, ಬಹು ದೊಡ್ಡ ಹೊಣೆಗಾರಿಕೆಯನ್ನೂ ನೆನಪಿಸಿತು. ವರಿಷ್ಠರು ಇರಿಸಿರುವ ನಿರೀಕ್ಷೆಯ ಗುರಿ ತಲುಪುವುದೇ ನನ್ನ ಮಹಾ ಸಂಕಲ್ಪವಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಜಿ.ವಿ. ಅವರು ಉಪಸ್ಥಿತರಿದ್ದರು” ಎಂದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Shivamogga News: ಶಿಕಾರಿಪುರದ ಕಾಂಗ್ರೆಸ್ ಪುಡಾರಿಗಳ ಆರ್ಭಟ ಶೀಘ್ರವೇ ನಿಲ್ಲಲಿದೆ: ಬಿ.ವೈ. ವಿಜಯೇಂದ್ರ‌

ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್‌ ನವೆಂಬರ್‌ 10ರಂದು ಆಯ್ಕೆ ಮಾಡಿದ್ದು, ನವೆಂಬರ್‌ 15ರಂದು ಬಿ.ವೈ.ವಿಜಯೇಂದ್ರ ಅವರು ಪದಗ್ರಹಣ ಮಾಡಿದ್ದಾರೆ. ರಾಜ್ಯಾಧ್ಯಕ್ಷರಾದ ಬಳಿಕ ವಿಜಯೇಂದ್ರ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹಿರಿಯ ನಾಯಕರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇದರ ಬೆನ್ನಲ್ಲೇ, ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version