Site icon Vistara News

ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ: ಮೋದಿ ಭೇಟಿ ಬಗ್ಗೆ ವಿಜಯೇಂದ್ರ ಸಂತಸ

BY Vijayendra

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಿ. ವೈ ವಿಜಯೇಂದ್ರ ಅವರು (BJP state president BY Vijayendra) ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗುರುವಾರ (ಡಿಸೆಂಬರ್​ 21) ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಅವರು ಲೋಕಸಭೆ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಸಂಘಟನೆ ಸೇರಿದಂತೆ ಹಲವಾರು ಮಹತ್ವದ ಸಂಗತಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೋದಿ ಅವರನ್ನು ಭೇಟಿಯಾದ ಮಾಹಿತಿಯನ್ನು ವಿಜಯೇಂದ್ರ ಅವರು ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅವರು ಮೋದಿ ಭೇಟಿಯ ಕುರಿತು ಅಪರಿಮಿತ ಸಂತಸವನ್ನು ಹಂಚಿಕೊಂಡಿದ್ದಾರೆ.

ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಅವರನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆದೆ. ಸಂತ ತೇಜಸ್ಸಿನ ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ ಪಡೆದ ಅನುಭವವಾಯಿತು.

ರಾಷ್ಟ್ರ ಭಕ್ತಿ, ಸಂಘ ನಿಷ್ಠೆ, ಸಮರ್ಪಣೆ, ಶಿಸ್ತು, ಬದ್ಧತೆ, ಕ್ರಿಯಾಶೀಲತೆ, ಸಾಧಿಸುವ ಛಲದ ಗುರಿ ಇವೆಲ್ಲಕ್ಕೂ ಭಾರತದ ಇತಿಹಾಸದಲ್ಲಿ ಉದಾಹರಿಸಬಲ್ಲ ಏಕೈಕ ವ್ಯಕ್ತಿತ್ವ ಮಾನ್ಯ ಮೋದಿ ಜೀ ಅವರದ್ದು. ಅವರ ಸ್ವಾವಲಂಬಿ ಹಾಗೂ ಬಲಿಷ್ಠ ಭಾರತ ಕಟ್ಟುವ ಮಹಾನ್ ಸಂಕಲ್ಪ ಪರಿಪೂರ್ಣವಾಗಿ ಈಡೇರಿದರೆ ವಿಶ್ವಮಟ್ಟದಲ್ಲಿ ನಮ್ಮ ಭವ್ಯ ಭಾರತ ಅಗ್ರಸ್ಥಾನದಲ್ಲಿ ನಿಲ್ಲಲಿದೆ. ಈ ನಿಟ್ಟಿನಲ್ಲಿ ಅವರೊಂದಿಗೆ ಹೆಗಲು ಕೊಡುವ ಪುಣ್ಯದ ಕಾರ್ಯದಲ್ಲಿ ಸಮರ್ಪಿಸಿಕೊಳ್ಳಲು ‘ಬಿಜೆಪಿ-ಕರ್ನಾಟಕ’ದ ರಥ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಟ್ಟಿರುವುದು ನನ್ನ ಸೌಭಾಗ್ಯ,

2024ರ ಮಹಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಮೋದಿ ಜೀ ಅವರ ಮಡಿಲಿಗೆ ಸಮರ್ಪಿಸಬೇಕೆಂಬ ನನ್ನ ಹೆಜ್ಜೆಗೆ ಇಂದಿನ ಭೇಟಿಯ ಅವರ ಪ್ರೇರಣೆಯ ಮಾತುಗಳು ನನ್ನಲ್ಲಿ ಅದಮ್ಯ ಆತ್ಮ ವಿಶ್ವಾಸ ಮೂಡಿಸಿದೆ ಎಂದು ವಿಜಯೇಂದ್ರ ಅವರು ಹೇಳಿದ್ದಾರೆ.

ಅಮಿತ್ ಶಾ ಭೇಟಿ ಮಾಡಿದ ವಿಜಯೇಂದ್ರ

ದೆಹಲಿ ಪ್ರವಾಸದಲ್ಲಿರುವ ಬಿಬಿಜೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗುರುವಾರ (ಡಿಸೆಂಬರ್‌ 21) ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರನ್ನು ಭೇಟಿ ಮಾಡಿದರು. ಲೋಕಸಭೆ ಕೊಠಡಿಯಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಿವೈವಿ, ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೋರ್‌ ಕಮಿಟಿಯಲ್ಲಿ ಕೆಲವು ಬದಲಾವಣೆಯನ್ನು ಮಾಡುವಂತೆ ಸೂಚನೆ ನೀಡಿರುವ ಅಮಿತ್‌ ಶಾ, ಕೆಲವು ರಾಜ್ಯ ನಾಯಕರ ಅಸಮಾಧಾನಗಳನ್ನು ಗಮನಿಸಿದ್ದು, ಮುಂದಿನ ದಿನಗಳಲ್ಲಿ ಅದನ್ನೆಲ್ಲ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಒಟ್ಟು 18 ನಿಮಿಷಗಳ ಕಾಲ ಚರ್ಚೆ ಅಮಿತ್‌ ಶಾ ಜತೆಗೆ ಬಿ.ವೈ. ವಿಜಯೇಂದ್ರ ಚರ್ಚೆ ಮಾಡಿದ್ದಾರೆ. ಈ ವೇಳೆ ಅಮಿತ್‌ ಶಾ ಅವರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕು. ಈ ದೃಷ್ಟಿಯಿಂದ ಪದಾಧಿಕಾರಿಗಳ ನೇಮಕವನ್ನು ಆದಷ್ಟು ಬೇಗ ಮಾಡಬೇಕು. ಕೇಂದ್ರದ ಯೋಜನೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ವಿಕಸಿತ ಭಾರತವನ್ನು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಬೇಕು. ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಬೂತ್ ಮಟ್ಟದಿಂದ ಹಿಡಿದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

ಅಮಿತ್‌ ಶಾ ಅವರ ಭೇಟಿ ಬಳಿಕ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಬಿ.ವೈ. ವಿಜಯೇಂದ್ರ, ಭೇಟಿ ವೇಳೆ ಶಾ ಅವರು ಸ್ಫೂರ್ತಿ ತುಂಬುವ ಮಾತುಗಳನ್ನು ಆಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

“ಮಾನ್ಯ ಅಮಿತ್ ಶಾ ಜೀ, “ರಾಷ್ಟ್ರಭಕ್ತಿ-ಪಕ್ಷನಿಷ್ಠೆ ನಿಮ್ಮ ಧ್ಯೇಯ, ಬದ್ಧತೆ, ಆತ್ಮ ವಿಶ್ವಾಸ, ಗುರಿ ಮುಟ್ಟುವ ಛಲ, ಗೆಲುವಿನ ರಣತಂತ್ರ ನಿಮ್ಮ ಶಕ್ತಿ. ಇದು ನಮ್ಮಂಥ ಯವಕರಿಗೆ ನಿತ್ಯ ಸ್ಫೂರ್ತಿ” ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರನ್ನು ಭೇಟಿಯಾಗಿ ಪಂಚರಾಜ್ಯ ಚುನಾವಣೆಯ ಬಿಜೆಪಿ ಗೆಲುವಿನ ಸಾಧನೆಗಾಗಿ ಆತ್ಮೀಯ ಅಭಿನಂದನೆ ಸಲ್ಲಿಸಿ ಆಶೀರ್ವಾದ ಪಡೆಯಲಾಯಿತು.

ಪಕ್ಷ ಸಂಘಟನೆಯ ಅವಕಾಶಗಳನ್ನು ಕಲ್ಪಿಸಿ ಆರಂಭದಿಂದಲೂ ನನಗೆ ಮಾರ್ಗದರ್ಶನ ನೀಡುತ್ತಿರುವ ಅಮಿತ್ ಶಾ ಜೀ ಅವರು ನನ್ನ ಸಾಮರ್ಥ್ಯದ ಮೇಲೆ ಅಪರಿಮಿತ ನಂಬಿಕೆಯನ್ನಿರಿಸಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸುವ ಮಹತ್ವದ ನಿರ್ಣಯದಲ್ಲಿ ಭಾಗಿಯಾಗಿದ್ದು, ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಮಹತ್ವದ ಘಟ್ಟ. ಈ ನಿಟ್ಟಿನಲ್ಲಿ ಅವರ ಇಂದಿನ ಉತ್ತೇಜನ ಪೂರ್ಣ ಮಾತುಗಳು ನನ್ನಲ್ಲಿ ಹನುಮನ ಶಕ್ತಿ – ಭೀಮನ ಛಲ ನೆನಪಿಸುವ ಸಂಕಲ್ಪ ತೊಡಿಸಿದೆ” ಎಂದು ವಿಜಯೇಂದ್ರ ಬರೆದುಕೊಂಡಿದ್ದಾರೆ.

Exit mobile version