Site icon Vistara News

Karnataka Election 2023: ಹಾಲಾಡಿ ಶ್ರೀನಿವಾಸ ಶೆಟ್ಟಿ ಆಶೀರ್ವಾದ ಪಡೆದ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ

Byndoor BJP candidate Gururaja Gantihole seeks blessings of Haladi Srinivas Shetty Karnataka Election 2023 updates

ಉಡುಪಿ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸುತ್ತಿವೆ. ಸಭೆ-ಸಮಾರಂಭಗಳನ್ನು ಏರ್ಪಡಿಸುವುದು, ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೋರುತ್ತಿದ್ದಾರೆ. ಈಗ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಕೋರಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸುಕಮಾರ ಶೆಟ್ಟಿ ಬದಲಾಗಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗುರುರಾಜ್ ಗಂಟಿಹೊಳೆ ಅವರು ಈಗ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಳಿ ಮನವಿ ಮಾಡಿದ್ದಾರೆ.

ಈ ವೇಳೆ ಕೆಲವು ಸಮಯ ಮಾತುಕತೆ ನಡೆಸಿದ ಗುರುರಾಜ್‌ ಗಂಟಿಹೊಳೆ ಅವರು, ಕ್ಷೇತ್ರದ ಚಿತ್ರಣದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ, ನನ್ನ ಸಂಪೂರ್ಣ ಬೆಂಬಲ ನಿಮಗೆ ಇದೆ ಎಂದು ಆಶೀರ್ವದಿಸಿದರು.

ಇನ್ನು ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಗುರುರಾಜ ಗಂಟಿಹೊಳೆ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು.

ಇದನ್ನೂ ಓದಿ: Karnataka Elections: ಅಬ್ಬಾ… ಚಿಕ್ಕಪೇಟೆ ಪಕ್ಷೇತರ ಅಭ್ಯರ್ಥಿಯ ಗಂಡನ ಆಸ್ತಿಯ ಒಟ್ಟು ಮೌಲ್ಯ ಕೇವಲ 1621 ಕೋಟಿ ರೂ.!

ರಾಜಕೀಯ ನಿವೃತ್ತಿ ಘೋಷಿಸಿರುವ ಹಾಲಾಡಿ

ಕಳೆದ 25 ವರ್ಷಗಳಿಂದ ಕುಂದಾಪುರ ಕ್ಷೇತ್ರದ ಶಾಸಕರಾಗಿ ಅಜೇಯರಾಗಿ ಉಳಿದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಇವರು ಅಜಾತಶತ್ರು ರಾಜಕಾರಣಿಯಾಗಿರುವ ಜತೆಗೆ ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಹೊಂದಿದವರು. ಈಗ ಈ ಕ್ಷೇತ್ರಕ್ಕೆ ತಮ್ಮ ಗುರು ಎ.ಜಿ. ಕೊಡ್ಗಿ ಅವರ ಮಗ ಕಿರಣ್‌ ಕೊಡ್ಗಿ ಅವರಿಗೆ ಟಿಕೆಟ್‌ ಕೊಡಿಸಿದ್ದಾರೆ.

ಗುರುರಾಜ ಶೆಟ್ಟಿ ಗಂಟಿಹೊಳೆ ಯಾರು?

ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉಪ್ಪುಂದದ ಬಳಿಯ ಗಂಟಿಹೊಳೆಯಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾದರು. ಪೂರ್ಣಾವಧಿ ಪ್ರಚಾರಕರು ಎಂದರೆ ತಮ್ಮ ಮನೆ, ಉದ್ಯಮವನ್ನು ತೊರೆದು ಆರ್‌ಎಸ್‌ಎಸ್‌ ಎಲ್ಲಿ ಹೇಳುತ್ತದೆಯೋ ಅಲ್ಲಿಗೆ ತೆರಳಿ ಸಂಘಟನೆಯ ಕಾರ್ಯವನ್ನು ನಿರ್ವಹಣೆ ಮಾಡುವುದು.

ಈ ರೀತಿ ಹತ್ತು ವರ್ಷ ಪ್ರಚಾರಕರಾಗಿದ್ದ ನಂತರ ತಮ್ಮೂರಿಗೆ ವಾಪಸಾದರು. ಆನಂತರ ಉಡುಪಿ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಹೊಣೆ ನಿರ್ವಹಿಸಿದರು. ಈ ನಡುವೆ ಉದ್ಯಮವನ್ನು ಆರಂಭಿಸಿ ನೂರು ಜನರಿಗೆ ಕೆಲಸ ಕೊಟ್ಟರು. ಉದ್ಯಮ ವಿಸ್ತರಣೆ ಸಂದರ್ಭದಲ್ಲಿ ಹಿನ್ನಡೆಯಾಗಿ ಅಲ್ಲಿಂದ ಹೊರಬಂದರು.

ನಂತರ ಸಂಪೂರ್ಣ ಸಮಾಜ ಸೇವೆಯಲ್ಲೇ ತೊಡಗಿಸಿಕೊಂಡು, ಈಶಾನ್ಯ ರಾಜ್ಯಗಳ ಮಕ್ಕಳ ಶಿಕ್ಷಣದತ್ತ ಗಮನಹರಿಸಿದರು. ಈಶಾನ್ಯ ರಾಜ್ಯಗಳಲ್ಲಿ ಮತಾಂತರದ ಹಾವಳಿ ಹೆಚ್ಚು. ಜತೆಗೆ ಅಲ್ಲಿನ ಜನರನ್ನು ಭಾರತದ ಸಂಪರ್ಕದಿಂದ ದೂರಾಗಿಸುವ ಹಾಗೂ ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನಿಸುವಂತಹವರಾಗಿ ಮಾಡಲು ಅನೇಕ ಶಕ್ತಿಗಳು ಪ್ರಯತ್ನಿಸುತ್ತಿವೆ. ಭಾರತದ ಇತರೆ ಭಾಗಗಳಲ್ಲಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿದರೆ ಉತ್ತಮ ಶಿಕ್ಷಣ ಸಿಗುವ ಜತೆಗೆ ಭಾರತೀಯತೆಯನ್ನೂ ಬೆಳೆಸಿದಂತಾಗುತ್ತದೆ ಎಂಬ ಕಾರಣಕ್ಕೆ ಮಣಿಪುರದ ಮಕ್ಕಳನ್ನು ಆರ್‌ಎಸ್‌ಎಸ್‌ ವತಿಯಿಂದ ಕರ್ನಾಟಕದ ವಿವಿಧೆಡೆ ಓದಿಸಲಾಗುತ್ತಿದೆ.

ಇದನ್ನೂ ಓದಿ: Karnataka Elections: ಸೊರಬ ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಠೇವಣಿಗೆ ಹಿರೇಶಕುನ ಗ್ರಾಮದ ಅಭಿಮಾನಿಗಳ ದೇಣಿಗೆ

ಇದರ ಅಂಗವಾಗಿ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಇಲ್ಲಿವರೆಗೆ ತಮ್ಮದೇ ಖರ್ಚಿನಲ್ಲಿ ಅನೇಕ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಈ ರೀತಿ ಆಗಮಿಸಿದ್ದ ಹೈರೋಕ್ ಎಂಬ ಬಾಲಕ 2018ರಲ್ಲಿ ಉಪ್ಪುಂದ ಶಾಲೆಯಲ್ಲಿ ಓದಿ ಎಸ್ಎಸ್ಎಲ್‌ಸಿ ತೇರ್ಗಡೆಯಾಗಿದ್ದ. ಅಷ್ಟೇ ಅಲ್ಲ, ಕನ್ನಡದಲ್ಲಿ 108 ಅಂಕಗಳೂ ಸೇರಿ ಒಟ್ಟು ಶೇ.83 ಅಂಕ ಗಳಿಸಿದ್ದ. ಇದು ಜಿಲ್ಲೆಯಾದ್ಯಂತ ಭಾರೀ ಸುದ್ದಿಯಾಗಿತ್ತು. ಗುರುರಾಜ್ ಅವರ ಮನೆಯಲ್ಲಿ ಇಂತಹ ಸುಮಾರು 20 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಇದೆಲ್ಲದರ ಜತೆಜತೆಗೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯಕರ್ತರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದರು. ಎರಡು ಕೃತಿಗಳನ್ನು ರಚಿಸಿದರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದ ಹೊಣೆಯನ್ನು ನಿಭಾಯಿಸಿದರು.

ಕ್ಷೇತ್ರದಲ್ಲಿ ಸಾಕಷ್ಟು ಪರಿಚಿತರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರಿಗೆ 2013 ಹಾಗೂ 2018ರಲ್ಲೇ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶವಿತ್ತು. ಆದರೆ ಪಕ್ಷ ಸಂಘಟನೆಯಲ್ಲಿ ಪೂರ್ಣ ತೊಡಗಿಸಿಕೊಂಡ ನಂತರ ಟಿಕೆಟ್ ಪಡೆಯುವುದಾಗಿ ಗುರುರಾಜ್ ಅವರು ತಿಳಿಸಿದ್ದರು. ಆನಂತರದಲ್ಲಿ ಕ್ಷೇತ್ರದ ಗ್ರಾಮ ಗ್ರಾಮಗಳಲ್ಲೂ ಸಂಚರಿಸುತ್ತ ಜನರ ನಾಡಿಮಿಡಿತ ಅರಿತರು, ಅಲ್ಲಿನ ಯುವಕರೊಂದಿಗೆ ಬೆರೆತರು. ಎರಡೂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶ್ರಮಿಸಿದರು.

ಇದನ್ನೂ ಓದಿ: Karnataka Elections : ಅವರಿಬ್ಬರು ಒಂದೇ ಹಾರ ಹಾಕ್ಕೊಂದು ಓಡಾಡಿದ್ರೆ ಏನು ಭೂಕಂಪ ಆಗುತ್ತಾ?; ಕಿಮ್ಮನೆ-ಮಂಜುನಾಥ್‌ ಜೋಡಿಗೆ ಆರಗ ವ್ಯಂಗ್ಯ

ಅಂದಹಾಗೆ ಗುರುರಾಜ ಅವರು ಚಪ್ಪಲಿ ಧರಿಸುವುದಿಲ್ಲ. ಸಮಾಜದಲ್ಲಿ ಅನೇಕ ಕೆಟ್ಟ ವಿಚಾರಗಳಿವೆ. ಸಮಾಜದಲ್ಲಿ ಇನ್ನೂ ಅನೇಕರು ಸಂಕಷ್ಟದಲ್ಲಿದ್ದಾರೆ. ಅವುಗಳನ್ನು ನಿವಾರಿಸುತ್ತೇನೆ, ಅವೆಲ್ಲವನ್ನೂ ಮೆಟ್ಟಿ ನಿಲ್ಲುತ್ತೇನೆ ಎಂಬ ಕಾರಣಕ್ಕೆ ಚಪ್ಪಲಿಯನ್ನು ಧರಿಸುವುದಿಲ್ಲ. ಬಿಳಿ ಪಂಚೆ ಹಾಗೂ ಬಿಳಿ ಅಂಗಿಯಲ್ಲೇ ಎಲ್ಲೆಡೆ ಸಂಚರಿಸುವ ಗುರುರಾಜ್‌ ಅವರು ಇದೀಗ ಕ್ಷೇತ್ರದಾದ್ಯಂತ ʼಗುರುವಣ್ಣʼ ಎಂದೇ ಪರಿಚಿತರು. ಸಮಾಜ ಸುಧಾರಣೆಗೆ ಶಿಕ್ಷಣ ಕ್ಷೇತ್ರವೇ ಬಹುಮುಖ್ಯ ಮಾರ್ಗ ಎಂದು ಗುರುರಾಜ್ ತಿಳಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರತಿಷ್ಠಿತ ʼವಿಶ್ವದರ್ಶನ ಶಿಕ್ಷಣ ಸಂಸ್ಥೆʼಯ ನಿರ್ದೇಶಕ ಮತ್ತು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Exit mobile version