Site icon Vistara News

ಸರಣಿ ಕಾರ್ಯಕ್ರಮ ರೂಪಿಸಿದ ಬಿಜೆಪಿ: ಸೆ.17ರಿಂದ ಅ.2 ರವರೆಗೆ ಸೇವಾ ಪಾಕ್ಷಿಕ

ಸಿ.ಟಿ.ರವಿ

ಬೆಂಗಳೂರು: ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, ಸೆಪ್ಟೆಂಬರ್ 25 ದೀನದಯಾಳ್ ಉಪಾಧ್ಯಾಯರ ಜನ್ಮದಿನ, ಅಕ್ಟೋಬರ್ 2 ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸೇವಾ ಪಾಕ್ಷಿಕ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.17 ರಂದು ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಯುವಾ ಮೋರ್ಚಾದಿಂದ ರಕ್ತದಾನ, ಆರೋಗ್ಯ ಶಿಬಿರ ಆಯೋಜನೆ ಜತೆಗೆ ಅಂಗವಿಕಲರಿಗೆ ಕೃತಕ ಅಂಗಾಂಗ ಜೋಡಿಸುವ ಶಿಬಿರಗಳು ನಡೆಸಲಾಗುತ್ತದೆ. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯ 75 ಕೆರೆಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಆ ಸಂದರ್ಭದಲ್ಲಿ ಕೆರೆ, ಬಾವಿ ನದಿಗಳ ಸ್ವಚ್ಛತೆ ಮಾಡಲು ಎಂದು ತಿಳಿಸಿದರು.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಖಾಸಗಿ ಕೋಣೆ, ಸ್ನಾನದ ಮನೆಯ ಮಹಜರು ಮಾಡುತ್ತಿರುವ ಪೊಲೀಸರು

2025ಕ್ಕೆ ಕ್ಷಯ ಮುಕ್ತ ಭಾರತ ಮೋದಿ ಅವರ ಸಂಕಲ್ಪವಾಗಿದೆ. ಹೀಗಾಗಿ ಪ್ರತಿ ಶಾಸಕರು, ಸಂಸದರು, ಜನನಾಯಕರು 5 ಕ್ಷಯ ರೋಗಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಸದ್ಭಾವನಾ ಯೋಜನೆ ರೂಪಿಸಲಾಗಿದೆ ಹಾಗೂ ಕಮಲ ಕ್ರೀಡಾಕೂಟದ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಜನ ಸಂವಾದ ಕಾರ್ಯಕ್ರಮ, ಜನೋತ್ಸವ ಕಾರ್ಯಕ್ರಮಗಳು ಕೂಡ ಮಾಡಲು ಸಿಎಂ ಮತ್ತು ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಬಿಜೆಪಿ ರಾಜ್ಯ ನಾಯಕರ ಪ್ರವಾಸದ ಬಗ್ಗೆ ಕೂಡ ಚರ್ಚೆಯಾಗಿದೆ ಎಂದರು.

ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಪಡೆದಿರುವ ಫಲಾನುಭವಿಗಳು ಶೇ.65 ರಿಂದ ಶೇ.70 ಇದ್ದಾರೆ. ಅವರಿಗೆ ಸರ್ಕಾರದ ಮಹತ್ವದ ಯೋಜನೆಗಳ ಬಗ್ಗೆ ತಿಳಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಜಲಧಾರೆ ಕಾರ್ಯಕ್ರಮದಿಂದ ರಾಮನಗರಕ್ಕೆ ಹೆಚ್ಚಿನ ಮಳೆ
ಕಾಂಗ್ರೆಸ್ ಕಾಲದಲ್ಲಿ ‌ನಡೆದು ಮರೆಮಾಚಿದ್ದ ಹಗರಣಗಳನ್ನು ಬಯಲಿಗೆಳೆಯಬೇಕು, ಆ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಚರ್ಚೆಯಾಗಿದೆ. ಬೆಂಗಳೂರು ಹೆಸರನ್ನು ಯಾರಿಂದಲೂ ಹಾಳು ಮಾಡಲು ಸಾಧ್ಯವಿಲ್ಲ. ರಾಜಕಾಲುವೆ ಒತ್ತುವರಿ ಬಿಜೆಪಿ ಸರ್ಕಾರ ಬಂದ ಮೇಲೆ ಆಗಿದೇಯೇ ಎಂದು ಪ್ರಶ್ನಿಸಿದ ಅವರು, ಕೆರೆಗಳ ಒತ್ತುವರಿ ಮಾಡಿದ್ದು ಯಾರು ಎಂದು ಕೈ ನಾಯಕರೇ ಉತ್ತರ ಕೊಡಬೇಕು. ಜಲಧಾರೆ ಮಾಡಿದ್ದಕ್ಕೆ ಮಳೆಯಾಗಿದೆ ಎಂದು ಜೆಡಿಎಸ್‌ನವರು ಹೇಳುತ್ತಾರೆ. ಅದಕ್ಕಾಗಿ ರಾಮನಗರಕ್ಕೆ ಪ್ರೀತಿಯಿಂದ ಹೆಚ್ಚಾಗಿ ಮಳೆಬಂದಿದೆ ಎನಿಸುತ್ತದೆ. ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಸತ್ಯ ಎಂದು ಭಾವಿಸುವುದಿಲ್ಲ, ಇವರು ಜಲಧಾರೆ ಮಾಡಿದ್ದು ಕರ್ನಾಟಕದಲ್ಲಿ. ಆದರೆ, ದೇಶದ ತುಂಬೆಲ್ಲ ಮಳೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | CET Rank | ಕೆಇಎ ಆದೇಶ ರದ್ದುಪಡಿಸಿದ ಹೈಕೋರ್ಟ್‌; ಸೋಮವಾರ ಸಭೆ ಕರೆದ ಸಚಿವ ಅಶ್ವತ್ಥ್‌ ನಾರಾಯಣ

Exit mobile version