ಹಾಸನ: ʻʻನಿಜವಾಗಲೂ ಹೊಟ್ಟೆ ನೋವು ಬಂದರೆ ಔಷಧ ಕೊಡಬಹುದು, ಆದರೆ ಹೊಟ್ಟೆ ಕಿಚ್ಚಿಗೆ ಹೇಗೆ ಔಷಧ ಕೊಡೋದಕ್ಕೆ ಅಸಾಧ್ಯ. ಟೂಲ್ ಕಿಟ್ ರಾಜಕಾರಣಕ್ಕೆ ನಮ್ಮ ಬಳಿ ಔಷಧ ಇಲ್ಲʼʼ ಎಂದು ಸಾಹಿತಿಗಳ ʻಪಠ್ಯ ಹಿಂಪಡೆಯಲಿ ಅಭಿಯಾನʼದ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದರು.
ನಗರದಲ್ಲಿ ಬುಧವಾರ ಮಾತನಾಡಿದ ಅವರು, ಅಕ್ಬರ್ ದಿ ಗ್ರೇಟ್, ಅಲೆಕ್ಸಾಂಡರ್ ದಿ ಗ್ರೇಟ್ ಎಂದು 70 ವರ್ಷ ಕಲಿಸಿದರು. ತಮ್ಮ ದೇಶದ ಮೇಲೆ ಅಕ್ರಮಣ ಮಾಡಿದವರನ್ನು ಯಾರೂ ಗ್ರೇಟ್ ಎನ್ನುವುದಿಲ್ಲ, ಅವರು ಯಾವತ್ತಾದರೂ ಮಯೂರವರ್ಮ, ಇಮ್ಮಡಿ ಪುಲಿಕೇಶಿ, ರಾಜರಾಜ ಚೋಳ ಗ್ರೇಟ್ ಅಂತ ಹೇಳಿಕೊಟ್ಟಿದ್ದರೇ? ನಾವು ಹೆಮ್ಮೆ ಪಡುವ ಸಂಗತಿಗಳನ್ನು ಅವರು ಹೇಳಿಲ್ಲ, ಈಗ ಆ ತಪ್ಪುಗಳು ಸರಿಪಡಿಸುವ ಕೆಲಸ ಆಗುತ್ತಿದೆ ಎಂದರು.
ʻʻಸಂಬಂಧವೇ ಇಲ್ಲದ ರೋಹಿತ್ ವೇಮುಲಾ ಆತ್ಮಹತ್ಯೆಗೆ ಮೋದಿ ಕಾರಣ ಎಂದು ಬಣ್ಣ ಕಟ್ಟಿದರು, ಇಂತಹ ಕಾಂಗ್ರಸ್‌ನ ಟೂಲ್‌ಕಿಟ್ ರಾಜಕಾರಣ ಹೊಸದೇನೂ ಅಲ್ಲ, ಇದನ್ನು ಎದುರಿಸುತ್ತೇವೆ,ʼʼ ಎಂದ ಅವರು, ಪಠ್ಯಪುಸ್ತಕದಲ್ಲಿ ಯಾರಿಗೂ ಅಗೌರವ ತೋರುವ ಯಾವುದೇ ಸಂಗತಿ ಇಲ್ಲ, ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂದರು.
ʻʻಕುವೆಂಪು ಅವರ ಎರಡು ಗೀತೆಯನ್ನು ಅಧಿಕೃತಗೊಳಿಸಿದ್ದು ಬಿಜೆಪಿ, ಬಸವಣ್ಣ ಅವರ ಕೂಡಲಸಂಗಮಕ್ಕೆ 600 ಕೋಟಿ ರೂಪಾಯಿ ಅನುದಾನ ಕೊಟ್ಟು ಅನುಭವ ಮಂಟಪ ಪುನಶ್ಚೇತನ ಮಾಡುತ್ತಿರುವುದು ನಮ್ಮ ಸರ್ಕಾರ, ಹಾಗಿದ್ದರೆ ನಾವು ಹೇಗೆ ಕುವೆಂಪು, ಬಸವಣ್ಣ ವಿರೋಧಿ ಆಗೋಕೆ ಸಾಧ್ಯ. ಸಿದ್ದರಾಮಯ್ಯ ಅವರು ಕಾಗಿನೆಲೆ ಮರೆತಿದ್ದರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮಾಡಿ ಕನಕದಾಸರ ಜಯಂತಿ ಆಚರಣೆಗೆ ಅಧಿಕೃತ ಚಾಲನೆ ಕೊಟ್ಟಿದ್ದು ಬಿಜೆಪಿ ಸರ್ಕಾರ, ನಾರಾಯಣ ಗುರುಗಳ ಪ್ರಾತಃಸ್ಮರಣೆ ಮಾಡುತ್ತೇವೆ, ಹಾಗಿದ್ದರೂ ಬ್ರಾಹ್ಮಣ ಶಾಹಿ ಅನ್ನೋದು, ದಲಿತ ವಿರೋಧಿ ಎನ್ನುವುದು ಏಕೆ,ʼʼ ಎಂದು ಪ್ರಶ್ನಿಸಿದರು.
ಪಠ್ಯಪರಿಷ್ಕರಣೆಗೆ ವಿರೋಧ ಏಕೆ?
ʻʻತಮ್ಮ ಪಠ್ಯ ಪ್ರಕಟಿಸಬೇಡಿ ಎನ್ನುತ್ತಿರುವ ಸಾಹಿತಿಗಳು ಈ ಹಿಂದೆ ಪ್ರಶಸ್ತಿ ವಾಪಸ್ ಅಭಿಯಾನ ಮಾಡಿದ್ದರು. ಆದರೆ
ಬಹಳ ಜನ ಬರೀ ಹೇಳಿಕೆ ಕೊಟ್ಟರು, ಆದರೆ ಪ್ರಶಸ್ತಿ, ಕೊಟ್ಟ ಹಣದ ಬಗ್ಗೆ ಚಕಾರ ಎತ್ತಲಿಲ್ಲ. ಕೆಲವರು ತಪ್ಪು ಕಲ್ಪನೆಯಿಂದ, ದುರುದ್ದೇಶದಿಂದ ಪಠ್ಯ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರೋಹಿತ್ ಚಕ್ರತೀರ್ಥರನ್ನು ಯಾಕೆ ವಿರೋಧ ಮಾಡಬೇಕು, ಅವರೇನು ಅವರೇನು ಕ್ರಿಮಿನಲ್ ಅಥವಾ ನಕ್ಸಲರೇ ಜತೆ ಸಂಬಂಧ ಹೊಂದಿದ್ದಾರಾ,ʼʼ ಎಂದು ಕುಟುಕಿದರು.
ಸಿದ್ದರಾಮಯ್ಯ ಸರ್ಟಿಫಿಕೇಟ್ ಬೇಕಿಲ್ಲ
ಆರ್‌ಎಸ್‌ಎಸ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ಪಂದಿಸಿದ ಅವರು, ಆರ್‌ಎಸ್‌ಎಸ್ ಎಂಬುದು ಒಂದು ಸ್ವಯಂಸೇವಾ ಸಂಘಟನೆ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮೊದಲು ಜನರ ನೆರವಿಗೆ ಧಾವಿಸಿದ್ದು ಅದೇ ಸಂಘ. ಆರ್‌ಎಸ್‌ಎಸ್ ಏನು ಅಂತ ತನ್ನ ದೇಶಭಕ್ತಿಯ ಮೂಲಕ ಸಾಭೀತುಪಡಿಸಿದೆ, ಅದಕ್ಕೆ ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಅವಶ್ಯಕತೆಯಿಲ್ಲ ಎಂದು ಖಾರವಾಗಿ ನುಡಿದರು.
ಬಿಜೆಪಿಯ ಮೂವರು ಅಭ್ಯರ್ಥಿಗಳೂ ಗೆಲ್ಲುತ್ತಾರೆ
ʻʻರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಬಿಜೆಪಿ ಇಬ್ಬರು ಅಧಿಕೃತ ಅಭ್ಯರ್ಥಿಗಳು ಗೆದ್ದ ನಂತರವೂ ನಮ್ಮ ಬಳಿ 32 ಓಟ್‌ಗಳು ಉಳಿಯುತ್ತವೆ. ಹೀಗಾಗಿ ಪಕ್ಷದ ಮೂರನೇ ಅಭ್ಯರ್ಥಿಯೂ ಗೆಲ್ಲುತ್ತಾರೆʼʼ ಎಂದರು ರವಿ. ʻʻಚುನಾವಣೆಯಲ್ಲಿ ಮತದಾನವಾದ ನಂತರ ಕಾಂಗ್ರೆಸ್‌ನಲ್ಲಿ 19ರಿಂದ 20 ವೋಟ್ ಉಳಿಯುತ್ತವೆ. ಜೆಡಿಎಸ್‌ನಲ್ಲಿ 32 ಓಟ್ ಉಳಿಯುತ್ತವೆ. ಕೆಲವೊಮ್ಮೆ ಅಧಿಕೃತ ಅಭ್ಯರ್ಥಿಗಳು ಸೋತಿರೋದು, ಬಂಡಾಯ ಅಭ್ಯರ್ಥಿಗಳು ಗೆದ್ದಿರೋದು ಇದೆ. ಹೀಗಾಗಿ ನಮ್ಮ ಮೂವರು ಅಭ್ಯರ್ಥಿಗಳೂ ಗೆಲ್ಲುತ್ತಾರೆ. ಜೂನ್ 10ರ ನಂತರ ಯಾರು ಉದ್ದ ಮತ ಹಾಕಿದ್ದಾರೆ, ಯಾರು ಅಡ್ಡ ಮತ ಹಾಕಿದ್ದಾರೆ, ಯಾರು ಯಾರಿಗೆ ನಾಮ ಹಾಕಿದ್ದಾರೆ ಎಂಬುವುದು ಗೊತ್ತಾಗುತ್ತದೆ,ʼʼ ಎಂದರು. ಜೆಡಿಎಸ್‌ನವರು ಬೆಂಬಲ ಕೇಳಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻಇದುವರೆಗೂ ನಮ್ಮ ಬಳಿ ಯಾರೂ ಬೆಂಬಲ ಕೇಳಿಲ್ಲ. ಅಷ್ಟಕ್ಕೂ ಅವರಿಗೆ ನಾವು ಕೋಮುವಾದಿಗಳಲ್ಲವೇ, ನಾವು ಅವರ ದೃಷ್ಟಿಯಲ್ಲಿ ಸೆಕ್ಯುಲರ್‌ಗಳಲ್ಲ. ಹಾಗಾಗಿ ನಮ್ಮ ಓಟ್ ತಗೊಂಡ್ರೆ ಅವರ ಮಡಿ ಹಾಳಾಗಬಹುದು, ಅವರ ಓಟ್ ತಗೊಂಡ್ರೆ ನಮ್ಮ ಮಡಿ ಏನೂ ಹಾಳಾಗಲ್ಲʼʼ ಎಂದು ವ್ಯಂಗ್ಯವಾಡಿದರು.