ಬೆಳಗಾವಿ: ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾರಕಿ ಅವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿ, ಭಿನ್ನಾಭಿಪ್ರಾಯ ಶಮನಗೊಳಿಸಲು ಯತ್ನಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರೊಡನೆ ಸಿಎಂ ಬುಧವಾರ ಚರ್ಚೆ ನಡೆಸಿದ್ದಾರೆ.
ಸಿಎಂ ಭೇಟಿಯ ನಂತರ ಸುದ್ದಿಗಾರರೊಂದಿಗೆ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಿನ್ನೆ ನಮಗೆ ಸಿಎಂ ಅವರೇ ಬರುವುದಕ್ಕೆ ಹೇಳಿದ್ದರು. ಕೇಂದ್ರದ ನಾಯಕರ ಜತೆಗೆ ನಾನು ಮಾತನಾಡಿದ್ದೇನೆ, ಇಬ್ಬರಿಗೂ ಮತ್ತೆ ಸಚಿವ ಸ್ಥಾನ ಕೊಡುತ್ತೇವೆ ಎಂಬುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಹೊಸ ಆರ್‌ಟಿಒ ಕಚೇರಿಗಳ ಸ್ಥಾಪನೆ ಇಲ್ಲ ಎಂದ ಸಚಿವ ಬಿ. ಶ್ರೀರಾಮುಲು
೧೭ ಶಾಸಕರೊಂದಿಗೆ ಬಿಜೆಪಿಗೆ ಬಂದ ರಮೇಶ್‌ನಿಂದ ನಾವು ಈ ಸ್ಥಾನದಲ್ಲಿದ್ದೇವೆ. ಯಡಿಯೂರಪ್ಪ, ಅನಂತಕುಮಾರ್ ಹಾಗೂ ನಿಮ್ಮ ಹೋರಾಟದಿಂದ ನಮಗೆ ಅಧಿಕಾರ ಸಿಕ್ಕಿದೆ. ಎಲ್ಲ ವಿಷಯವೂ ಪಾಸಿಟಿವ್ ಆಗಿದೆ. ಖಂಡಿತ ನಿಮಗೆ ಸಚಿವ ಸ್ಥಾನ ಸಿಗಲಿದೆ. ಅಧಿವೇಶನ ಮುಗಿಯುವುದರೊಳಗೆ ದೆಹಲಿಗೆ ಹೋಗಿ ಬರುತ್ತೇನೆ ಎಂದು ಸಿಎಂ ಹೇಳಿರುವುದಾಗಿ ತಿಳಿಸಿದರು.
ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್‌ನಲ್ಲಿದ್ದಾಗ ಮಂತ್ರಿಗಿರಿ ಬಿಟ್ಟು ಬಂದಿದ್ದೇನೆ. ಮಂತ್ರಿ ಆಗಬೇಕು ಎಂದು ನಾನು ಬಿಜೆಪಿಗೆ ಬಂದಿಲ್ಲ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಬಂದಿದ್ದೇನೆ ಎಂದರು. ಬಳಿಕ ಇಬ್ಬರು ನಾಯಕರೂ ನಾಳೆಯಿಂದ ಅಧಿವೇಶನಕ್ಕೆ ಹೋಗುತ್ತೇವೆ ಎಂದು ಹೇಳಿ, ಒಂದೇ ಕಾರಿನಲ್ಲಿ ಬೆಳಗಾವಿ ನಗರದತ್ತ ತೆರಳಿದರು.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಳಿಕ ಅಧಿವೇಶನಕ್ಕೆ ಹಾಜರಾಗದೆ ಬೆಳಗಾವಿಯಿಂದ ಬೆಂಗಳೂರಿಗೆ ಮರಳಿದ್ದರು. ೨ ದಿನಗಳಿಂದ ಅಧಿವೇಶನಕ್ಕೆ ಹಾಜರಾಗದ ಅವರನ್ನು ಸಮಾಧಾನಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಬರಲು ಸೂಚಿಸಿದ್ದರು. ಇದೀಗ ಸಿಎಂ ಜತೆ ಸಭೆಯ ನಂತರ ಇಬ್ಬರೂ ಅಧಿವೇಶನದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | ಜನವರಿ 12ರಂದು ಕರ್ನಾಟಕಕ್ಕೆ ನರೇಂದ್ರ ಮೋದಿ; ಯುವಜನೋತ್ಸವಕ್ಕೆ ಭರ್ಜರಿ ತಯಾರಿ ಆರಂಭ