ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಂದಿನ ವರ್ಷ (2023)ವೇ ನಡೆಯಲಿದೆ. ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆಯ (Cabinet Expansion) ಬೇಡಿಕೆ ಬಿಜೆಪಿ ಪ್ರಮುಖರು, ಶಾಸಕರಿಂದ ಕೇಳಿಬರುತ್ತಿದೆ. ತುಂಬ ದಿನಗಳಿಂದಲೂ ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಒಂದು ಮಾಹಿತಿ ನೀಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಅಂದಹಾಗೇ ಗುಜರಾತ್ ವಿಧಾನಸಭೆ ಚುನಾವಣೆ ಡಿಸೆಂಬರ್ 1 ಮತ್ತು 5ರಂದು (ಎರಡು ಹಂತಗಳಲ್ಲಿ) ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆ.
ಬಿಜೆಪಿ ಜನಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ಈಗಾಗಲೇ ಹೈಕಮಾಂಡ್ ಜತೆ ಮಾತನಾಡಿದ್ದೇನೆ. ನಮ್ಮ ವರಿಷ್ಠರು ಸದ್ಯ ಗುಜರಾತ್ ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಚುನಾವಣೆ ಮುಗಿದ ಹೋದ ಮೇಲೆ ದೆಹಲಿಗೆ ಹೋಗಿ ಅವರನ್ನು ಭೇಟಿಯಾಗುತ್ತೇನೆ. ಸಂಪುಟ ವಿಸ್ತರಣೆಯಾಗಲಿದೆ’ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಂಪುಟ ವಿಸ್ತರಣೆ ಹಲವು ತಿಂಗಳುಗಳಿಂದ ಬಾಕಿ ಇರುವ ವಿಷಯ. ಮುಂದಿನ ವರ್ಷದ ಚುನಾವಣೆ ದೃಷ್ಟಿಯಿಂದ ಆದಷ್ಟು ಬೇಗ ಸಂಪುಟಕ್ಕೆ ಇನ್ನಷ್ಟು ಜನರನ್ನು ಸೇರಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಸಂಪುಟದಲ್ಲಿ ಇನ್ನೂ ಆರು ಮಂದಿಗೆ ಸಚಿವರಾಗುವ ಅವಕಾಶವೂ ಇದ್ದು, ಅದನ್ನು ಭರ್ತಿ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇನ್ನು ಮಂತ್ರಿ ಹುದ್ದೆ ಆಕಾಂಕ್ಷಿಗಳಿಗೆ ಆ ಸ್ಥಾನವನ್ನು ಕೊಡದೆ ಇದ್ದರೆ, ಚುನಾವಣೆ ಹೊತ್ತಲ್ಲಿ ಬಂಡಾಯದ ಕಿಡಿ ಏಳುವ ಸಾಧ್ಯತೆಯೂ ಇರುತ್ತದೆ. ಆದರೆ ಈ ಸಂಪುಟ ವಿಸ್ತರಣೆಗೆ ಇನ್ನೊಂದು ತಿಂಗಳಂತೂ ಕಾಯಲೇಬೇಕು..!
ಇದನ್ನೂ ಓದಿ: State politics | ವಾರಾಂತ್ಯದಲ್ಲಿ ಸಿಎಂ ಬೊಮ್ಮಾಯಿ ದಿಲ್ಲಿಗೆ: ಚುನಾವಣೆ ಬಗ್ಗೆ ಚರ್ಚೆ, ಸಂಪುಟ ವಿಸ್ತರಣೆಯೂ ಫಿಕ್ಸ್