Site icon Vistara News

Cabinet Meeting: ಕುಮಾರಸ್ವಾಮಿ, ಇತರ ಮೂವರ ವಿರುದ್ಧದ ಪ್ರಕರಣ; ಪ್ರಾಸಿಕ್ಯೂಷನ್‌ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಸಂಪುಟ ಸಲಹೆ

Cabinet Meeting

ಬೆಂಗಳೂರು: ರಾಜ್ಯಪಾಲರ ಬಳಿ ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮತ್ತು ಮುರುಗೇಶ ನಿರಾಣಿ ಅವರ ಕುರಿತಾಗಿ ಅನುಮೋದನೆಗಾಗಿ ಬಾಕಿಯಿರುವ ವಿಷಯಗಳಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಲು ಹಾಗೂ ನ್ಯಾಯದ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯಪಾಲರಿಗೆ ಸಂವಿಧಾನದ 163ನೇ ವಿಧಿಯನ್ವಯ ನೆರವು ಮತ್ತು ಸಲಹೆ ನೀಡಲು ಇಂದು ನಡೆದ ಸಚಿವ ಸಂಪುಟ (Cabinet Meeting) ಅನುಮೋದನೆ ನೀಡಿದೆ. ಕಾನೂನು ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ಅವರು ಈ ವಿಷಯ ತಿಳಿಸಿದರು.

ಸಂವಿಧಾನದ 163ನೇ ವಿಧಿ ಅನ್ವಯ ವಿಧಿ, ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಸಚಿವ ಸಂಪುಟಕ್ಕೆ ಅವಕಾಶವಿದೆ. ಅದರಂತೆ ಈ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಹಲವು ಅನುಮೋದನಾ ಅರ್ಜಿಗಳು ರಾಜ್ಯಪಾಲರ ಬಳಿ ಬಾಕಿ ಉಳಿದಿದೆ. ಈ ಅರ್ಜಿಗಳ ತನಿಖೆ ಬಳಿಕ ಕೆಲವು ಪ್ರಕರಣಗಳಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ ಪಿಸಿ ಆಕ್ಟ್‌ ಸೆಕ್ಷನ್‌ ಹಾಗೂ ವಿವಿಧ ಕಾಯ್ದೆಗಳ ಅಡಿಯಲ್ಲಿ ಅನುಮೋದನೆಗಾಗಿ ಕೋರಲಾಗಿದೆ. ಕೆಲವು ಅರ್ಜಿಗಳು ಪಿಸಿ ಆಕ್ಟ್‌ ಸೆಕ್ಷನ್‌ 17 ಎ ಅಡಿಯಲ್ಲಿ ಪೂರ್ವಾನುಮೋದನೆಗಾಗಿ ರಾಜ್ಯಪಾಲರ ಬಳಿ ಬಾಕಿಯಿದೆ ಎಂದು ಎಚ್‌ ಕೆ ಪಾಟೀಲ್‌ ಹೇಳಿದರು.

ಇದನ್ನೂ ಓದಿ: CM Siddaramaiah: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಸಿದ್ದರಾಮಯ್ಯ ಸೂಚನೆ

ಶಶಿಕಲಾ ಜೊಲ್ಲೆ ಅವರ ಪ್ರಕರಣದಲ್ಲಿ ಡಿಸೆಂಬರ್‌ 9 2021ರಂದು ಲೋಕಾಯುಕ್ತ ಪೊಲೀಸರು ಪಿಸಿ ಆಕ್ಟ್‌ 17 ಎ ಅಡಿಯಲ್ಲಿ ಪೂರ್ವಾನುಮೋದನೆಯನ್ನು ಕೋರಿದ್ದರು. ಮುರುಗೇಶ್‌ ನಿರಾಣಿ ಪ್ರಕರಣದಲ್ಲಿ ಸಹ ಇದೇ ಕಾಯ್ದೆಯಡಿಯಲ್ಲಿ ಫೆ. 26 2024ರಂದು ಪೂರ್ವಾನುಮೋದನೆ ಕೋರಲಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ನ.21 2023 ರಂದು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್‌ 19 ಮತ್ತು ಸಿಆರ್‌ಪಿಸಿ 197 ಅಡಿಯಲ್ಲಿ ಅನುಮೋದನೆ ಕೋರಲಾಗಿತ್ತು. ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ ಸಲ್ಲಿಸಿದ ಆರೋಪ ಪಟ್ಟಿ ಕುರಿತು ರಾಜ್ಯಪಾಲರು ಜು.29 2024ರಂದು ಸ್ಪಷ್ಟೀಕರಣ ಕೇಳಿದ್ದರು. ಇದಕ್ಕೆ ಎಸ್‌ಐಟಿ ಆ.16 2024 ರಂದು ರಾಜ್ಯಪಾಲರಿಗೆ ಅಗತ್ಯ ಸ್ಪಷ್ಟೀಕರಣ ನೀಡಿದೆ. ಜನಾರ್ಧನ ರೆಡ್ಡಿ ಪ್ರಕರಣದಲ್ಲಿ ಮೇ 13 2024 ರಂದು ಅನುಮೋದನೆಗಾಗಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಮತ್ತು ಜನಾರ್ಧನ ರೆಡ್ಡಿ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ ಎಂದರು.

ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನ್ನು ಸ್ವೀಕರಿಸಲು ಬಾಧ್ಯಸ್ಥರಾಗಿದ್ದು, ಈ ವಿಷಯದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆಯನ್ನು ನ್ಯಾಯಯುತವಾಗಿ ಬಳಸಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿ ರಾಜ್ಯಪಾಲರಿಗೆ ದೂರು ನೀಡಿದ್ದು, ತರಾತುರಿಯಲ್ಲಿ ಸಂಜೆಯೊಳಗಾಗಿ ಶೋಕಾಸು ನೋಟೀಸು ನೀಡಲಾಗಿದೆ. ಆದರೆ ಈ ನಾಲ್ಕು ಪ್ರಕರಣಗಳು ಭಿನ್ನವಾಗಿದ್ದು, ಎಲ್ಲಾ ಪ್ರಕ್ರಿಯೆಗಳು ಮುಗಿದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಾರ್ವಜನಿಕರ ದೃಷ್ಟಿಯಲ್ಲಿ ರಾಜ್ಯಪಾಲರ ಕಚೇರಿ ಬಗ್ಗೆ ತಪ್ಪು ಭಾವನೆ ಬರಬಾರದು ಮತ್ತು ಯಾವುದೇ ಗೊಂದಲ ಆಗಬಾರದೆಂದು ಸಚಿವ ಸಂಪುಟ ನೆರವು ಮತ್ತು ಸಲಹೆ ನೀಡಲು ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Water Price Hike: ಎಷ್ಟೇ ವಿರೋಧ ಬಂದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಖಚಿತ; ಡಿ.ಕೆ.ಶಿವಕುಮಾರ್

ಸಂಪುಟದ ಇತರ ತೀರ್ಮಾನಗಳು ಹೀಗಿವೆ:

ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ʻಹೊಂಬೆಳಕುʼ ಯೋಜನೆಯಡಿ ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸಲು, ರೂ.25 ಕೋಟಿ ಅನುದಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ 250 ಮೀಟರ್‌ ಎತ್ತರದ ಆಕಾಶ ಗೋಪುರ (ಸ್ಕೈಡೆಕ್) ನಿರ್ಮಿಸಲು‌ ತಾಂತ್ರಿಕ ಅನುಮೋದನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಧನ ವೆಚ್ಚ ಉಳಿತಾಯವಾಗುವ ಮೊತ್ತದಲ್ಲಿ, ಸಾಂಪ್ರದಾಯಿಕ ವಿದ್ಯುತ್‌ ಬೀದಿ ದೀಪಗಳನ್ನು ತೆರವುಗೊಳಿಸಿ ಎಲ್.ಇ.ಡಿ ಬೀದಿ ದೀಪಗಳನ್ನು ಇ.ಎಂ.ಐ/ವಾರ್ಷಿಕ ಪಾವತಿ ಯೋಜನೆಯಡಿ ಮುಂದಿನ 7 ವರ್ಷಗಳ ಅವಧಿಗೆ ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಹೆಬ್ಬಾಳ ಮೇಲು ಸೇತುವೆ ಎಸ್ಟೀಮ್‌ ಮಾಲ್‌ ಹತ್ತಿರದಿಂದ ಹೊಸೂರು ರಸ್ತೆಯ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ಮೇಲ್ಸೇತುವೆ ತನಕ 12690 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಭೂಗತ ವಾಹನ ಸುರಂಗ ಮಾರ್ಗವನ್ನು ಟ್ವಿನ್ ‌ ಟ್ಯೂಬ್‌ ಮಾದರಿಯಲ್ಲಿ ನಿರ್ಮಿಸಲು ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 52 ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಇದಕ್ಕೆ ತಗಲುವ ರೂ.20 ಕೋಟಿ ಅನುದಾನ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಟಿಡಿಆರ್‌ ಯೋಜನೆಯಡಿ ಸ್ವಾಧೀನಪಡಿಸುವ ಪ್ರಕ್ರಿಯೆಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಸೂಚನೆಯನ್ವಯ ಸಾರ್ವಜನಿಕರಿಗೆ ಭೂಪರಿಹಾರ ನೀಡಲು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: DK Shivakumar: ನನಗೆ ಸಿಬಿಐಗಿಂತ ಲೋಕಾಯುಕ್ತದಿಂದಲೇ ಹೆಚ್ಚಿನ ಹಿಂಸೆ; ಡಿ.ಕೆ.ಶಿವಕುಮಾರ್ ಆರೋಪ!

ಆಯವ್ಯಯದಲ್ಲಿ ಘೋಷಿಸಿರುವಂತೆ 85 ಕೋಟಿ ರೂ. ಅನುದಾನದಲ್ಲಿ 592 ಅಂಗನವಾಡಿಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ.

ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೊರೇಷನ್‌ ಸಂಸ್ಥೆಯ ಗ್ರೂಪ್‌ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸಿನ ಅನುಸಾರ ದಿನಾಂಕ 01-04-1998 ರಿಂದ 30-09-2005ರ ವರೆಗಿನ ವೇತನ ಬಾಕಿ, ಬಡ್ಡಿ ಇತ್ಯಾದಿಗಳನ್ನು ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ರಾಜ್ಯದಲ್ಲಿ 147.87 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2 ಸಾವಿರ ಎಕರೆ ಜಮೀನನ್ನು ಪ್ರತಿ ಎಕರೆಗೆ 1.22 ಲಕ್ಷ ರೂ. ಅಂತಿಮ ಬೆಲೆ ನಿಗದಿಪಡಿಸಿ ಹಾಗೂ ಸಂಡೂರು ತಾಲೂಕಿನ ತೋರಗಣಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಜಮೀನನ್ನು ಪ್ರತಿ ಎಕರೆಗೆ ರೂ. 1.50 ಲಕ್ಷ ಅಂತಿಮ ಬೆಲೆ ನಿಗದಿಪಡಿಸಿ ಜೆ.ಎಸ್.ಡಬ್ಲ್ಯೂ ಸ್ಟೀಲ್‌ ಪರವಾಗಿ ನೀಡಲು ನಿರ್ಧರಿಸಲಾಗಿದೆ.

ಕೆ.ಎ.ಎಸ್‌ ಅಧಿಕಾರಿ ರಾಜಮ್ಮ ಎ. ಚೌಡರೆಡ್ಡಿ ಅವರ ವಿರುದ್ಧ ಲೋಕಾಯುಕ್ತ ಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರ ಶಿಫಾರಸ್ಸಿನಂತೆ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ಅನುಮೋದನೆ ನೀಡಲಾಗಿದೆ.

ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಹೆಲ್ತ್‌ ಮಿಷನ್‌ ಹಾಗೂ ಆರೋಗ್ಯ ಇಲಾಖೆಯ ಇತರ ಎಲ್ಲಾ ಆರೋಗ್ಯ ಸಂಬಂಧಿತ ಡಿಜಿಟಲ್‌ ಉಪಕ್ರಮಗಳ ಅನುಷ್ಠಾನಕ್ಕಾಗಿ ಕರ್ನಾಟಕ ಡಿಜಿಟಲ್‌ ಹೆಲ್ತ್‌ ಸೊಸೈಟಿ ಸ್ಥಾಪಿಸಿ ನೋಂದಣಿ ಮಾಡಲು ನಿರ್ಧರಿಸಲಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕ್ಕಲಪರ್ವಿ ಗ್ರಾಮದ ಹತ್ತಿರ ತುಂಗಾಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್ ರೂ.397.50 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕಿಸುವ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಪುನರ್‌ ನಿರ್ಮಾಣ ಕಾಮಗಾರಿಯನ್ನು ರೂ.28ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: Kannada New Movie: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ ಅಭಿನಯದ ʼಆಪರೇಷನ್ ಲಂಡನ್ ಕೆಫೆʼ ಚಿತ್ರದ ಟೀಸರ್ ರಿಲೀಸ್‌

2023-24ನೇ ಸಾಲಿನ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯಡಿ ರೂ.1385.60 ಕೋಟಿ ಮೊತ್ತದ 295 ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಮಾಹಿತಿ ನೀಡಿದರು.

Exit mobile version